ಬೆಳಗಾವಿ:ಈ ವರ್ಷ ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ ಉಂಟಾದ ಬೆಳೆ, ಜೀವಹಾನಿ, ಮನೆ ಹಾನಿ ಸೇರಿದಂತೆ ವಿವಿಧ ಹಾನಿಗೆ ಸಂಬಂಧಿಸಿದಂತೆ ಒಟ್ಟು 297 ಕೋಟಿ ರೂ. ಪರಿಹಾರ ಪಾವತಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಇಂದು ವಿಧಾನಸಭೆಯಲ್ಲಿ ತಿಳಿಸಿದರು. ಶೂನ್ಯವೇಳೆ ಚರ್ಚೆಯ ಸಂದರ್ಭದಲ್ಲಿ ರಾಜ್ಯದಲ್ಲಿ ಉಂಟಾದ ಮಳೆಹಾನಿ ಹಾಗೂ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಸದನಕ್ಕೆ ಸರ್ಕಾರದ ಪರವಾಗಿ ಹೇಳಿಕೆ ನೀಡಿದರು.
ರಾಜ್ಯದಲ್ಲಿ ಈ ವರ್ಷ ಅತಿವೃಷ್ಟಿಯಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆ, ಮನುಷ್ಯ ಹಾಗೂ ಜಾನುವಾರುಗಳ ಜೀವ ಹಾನಿ, ರಸ್ತೆ-ಸೇತುವೆ, ಇತರೆ ಮೂಲಭೂತ ಸೌಕರ್ಯಗಳಿಗೆ ಹಾನಿ ಉಂಟಾಗಿದೆ. ಕಳೆದ 20 ವರ್ಷಗಳಲ್ಲಿ ಸುಮಾರು 10ರಿಂದ 15 ವರ್ಷ ಒಂದಲ್ಲ ಒಂದು ರೀತಿಯ ಪ್ರಕೃತಿ ವಿಕೋಪವನ್ನು ರಾಜ್ಯ ಎದುರಿಸಿದೆ. 2000ರಿಂದ ಈವರೆಗೆ ಸುಮಾರು 17 ವರ್ಷ ಬರ ಪರಿಸ್ಥಿತಿಯನ್ನು ಎದುರಿಸಿದ್ದರೆ, 2019, 2022 ಹಾಗೂ 2024ರಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ರಾಜ್ಯದಲ್ಲಿ ಆಗಿದೆ.
ವಿಧಾನಸಭೆಯಲ್ಲಿ ಮಾತನಾಡುತ್ತಿರುವ ಸಚಿವ ಕೃಷ್ಣ ಬೈರೇಗೌಡ (ETV Bharat) ರಾಜ್ಯದಲ್ಲಿ ಕೇವಲ ಮಳೆಯಿಂದ ಮಾತ್ರವಲ್ಲ, ಆಲಿಕಲ್ಲು ಮಳೆ, ಸಿಡಿಲು, ಮನೆ ಕುಸಿತ ಸಂದರ್ಭದಲ್ಲಿಯೂ ಹಾನಿ ಉಂಟಾಗಿದೆ. ಇದರ ಜೊತೆಗೆ 2018, 2019 ಮತ್ತು 2024ರಲ್ಲಿ ಭೂ ಕುಸಿತ ಕೂಡ ಸಂಭವಿಸಿ ಹಾನಿಯಾಗಿದೆ. ಹೀಗಾಗಿ ಸರ್ಕಾರ ಇದನ್ನು ತಡೆಗಟ್ಟಲು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ತೀವ್ರ ಬರ ಪರಿಸ್ಥಿತಿ ಬಂದರೂ, ಎನ್ಡಿಆರ್ಎಫ್ನಿಂದ ನಿಗದಿತ ಪ್ರಮಾಣದಲ್ಲಿ ಕೇಂದ್ರದಿಂದ ಪರಿಹಾರ ಹಣ ಬಾರದೇ ಇದ್ದಾಗ ನ್ಯಾಯಾಲಯದ ಮೊರೆ ಹೋಗಿ ಪರಿಹಾರ ಹಣ ಕೂಡ ಪಡೆದು, ಸುಮಾರು 45 ಲಕ್ಷ ರೈತರಿಗೆ 4200 ಕೋಟಿ ರೂ. ಪರಿಹಾರ ಕೊಟಿದ್ದೇವೆ ಎಂದರು.
ರೈತರಿಗೆ ಬೆಳೆ ನಷ್ಟ ಪರಿಹಾರ ಪಾವತಿ:ಈ ವರ್ಷ 852 ಮಿ.ಮೀ. ಮುಂಗಾರು ವಾಡಿಕೆ ಮಳೆ ಬದಲಿಗೆ 978 ಮಿ.ಮೀ. ಅಂದರೆ ಶೇ.20ರಷ್ಟು ಹೆಚ್ಚು ಮಳೆಯಾಗಿದೆ. ಹಿಂಗಾರಿನಲ್ಲಿ ಕೂಡ 173 ಮಿ.ಮೀ. ವಾಡಿಕೆ ಮಳೆ ಬದಲಿಗೆ 213 ಮಿ.ಮೀ. ಅಂದರೆ ಶೇ. 23 ರಷ್ಟು ಹೆಚ್ಚು ಮಳೆಯಾಗಿದೆ. ಕೆಲವು ಜಿಲ್ಲೆಗಳಲ್ಲಿ ವಾಡಿಕೆಗಿಂತಲೂ ಕಡಿಮೆ ಮಳೆ ಆಗಿದೆ. ಪ್ರಸಕ್ತ ಮುಂಗಾರು ಅವಧಿಯಲ್ಲಿ 1,59,718 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದ್ದು, ಒಟ್ಟು ರೂ.94.94 ಕೋಟಿ ಪರಿಹಾರ ವಿತರಿಸಲಾಗಿದೆ. ಹಿಂಗಾರು ಹಂಗಾಮಿನಲ್ಲಿ 1,45,254 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದ್ದು, ರೂ. 1.12 ಕೋಟಿ ಹಣವನ್ನು ರೈತರಿಗೆ ಪರಿಹಾರವಾಗಿ ಮಂಜೂರು ಮಾಡಲಾಗಿದೆ. ಕೆಲವು ಭಾಗದಲ್ಲಿ ರೈತರಿಗೆ ಪರಿಹಾರ ಹಣ ಖಾತೆಗೆ ಜಮಾ ಆಗಿದೆ. ಮುಂದಿನ ಒಂದೆರಡು ವಾರದಲ್ಲಿ ಎಲ್ಲಾ ರೈತರ ಖಾತೆಗಳಿಗೂ ಪರಿಹಾರ ಹಣ ಸಂದಾಯವಾಗಲಿದೆ ಎಂದರು.
133 ಮೃತ ಕುಟುಂಬಕ್ಕೆ 6.64 ಕೋಟಿ ರೂ. ಪರಿಹಾರ:ನಮ್ಮ ರಾಜ್ಯದಲ್ಲಿ 10 ಹವಾಮಾನ ವಲಯಗಳಿವೆ (ಆಗ್ರೋ ಕ್ಲೈಮ್ಯಾಟಿಕ್ ಝೋನ್). ಇಲ್ಲಿ 450 ಮಿ.ಮೀ ರಿಂದ 4,000 ಮಿ.ಮೀ ವರೆಗೆ ವಾಡಿಕೆ ಮಳೆಯಾಗುವ ವೈವಿಧ್ಯತೆಯ ಪ್ರದೇಶಗಳು ಕರ್ನಾಟಕದಲ್ಲಿದೆ. ದೇಶದ ಯಾವ ರಾಜ್ಯದಲ್ಲೂ ಈ ವೈವಿಧ್ಯತೆ ಇಲ್ಲ. ಇದರಿಂದ ರಾಜ್ಯದಲ್ಲಿ ಕೆಲ ಪ್ರಾಣಹಾನಿಯೂ ಸಂಭವಿಸಿದೆ. ಕೆಲವರು ಹೊಳೆ ಉಕ್ಕಿಹರಿಯುವ ಸಂದರ್ಭದಲ್ಲಿ ನೀರಿನಲ್ಲಿ ಇಳಿದು ಕೊಚ್ಚಿಹೋಗಿದ್ದಾರೆ. ಕೆರೆ ತುಂಬಿದೆ ಎಂದು ಗೊತ್ತಿದ್ದರೂ ಈಜಲು ಹೋಗಿ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಸಿಡಿಲು ಬಡಿತದಿಂದ ಮೃತಪಟ್ಟವರೂ ಸೇರಿ ಈ ವರ್ಷ ಒಟ್ಟಾರೆ 133 ಜನ ಪ್ರಾಣ ಕಳೆದುಕೊಂಡಿದ್ದಾರೆ. ಸರ್ಕಾರದ ಕಡೆಯಿಂದ ಇಂತಹ ಘಟನೆಗಳಿಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಅಲ್ಲದೆ, ಈ ಎಲ್ಲಾ 133 ಮೃತರ ಕುಟುಂಬಗಳಿಗೆ ಈಗಾಗಲೇ ತಲಾ 5 ಲಕ್ಷ ದಂತೆ 6.64 ಕೋಟಿ ರೂ. ಪಾವತಿಸಲಾಗಿದೆ ಎಂದರು.
ಎಲ್ಲೆಲ್ಲಿ ಮಳೆಹಾನಿ?: ಈ ವರ್ಷ ಮಹಾರಾಷ್ಟ್ರದಲ್ಲಿ ಹೆಚ್ಚು ಮಳೆಯಾದ ಕಾರಣ ಕೃಷ್ಣಾ ನದಿ ಉಕ್ಕಿ ಹರಿದು ನದಿಪಾತ್ರದ ಜನರಿಗೆ ಹಾನಿಯಾಗಿತ್ತು. ತುಂಗಭದ್ರ, ಭೀಮಾ, ಕಬಿನಿ ಕಾವೇರಿಯಲ್ಲೂ ಹೆಚ್ಚು ನೀರು ಬಂದು ಹಾನಿಯಾಗಿತ್ತು. ಧಾರವಾಡದ ಬೆಣ್ಣೆಹಳ್ಳ, ಬಾಗಲಕೋಟೆ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ ಭಾಗದಲ್ಲೂ ಮಳೆಯಿಂದಾಗಿ ನದಿಗಳು ಉಕ್ಕಿಹರಿದು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ. ರಸ್ತೆ, ಸೇತುವೆ, ಶಾಲಾ ಕೊಠಡಿ, ಅಂಗನವಾಡಿ, ಆರೋಗ್ಯ ಕೇಂದ್ರ ಸೇರಿದಂತೆ ಮಲೆನಾಡು ಪ್ರದೇಶಗಳಲ್ಲಿ ಕೆಲ ವಿದ್ಯುತ್ ಸಂಪರ್ಕ ಕಟ್ಟಡಗಳಿಗೆ ಹಾನಿ ಉಂಟಾಗಿದೆ. ರಿಪೇರಿ ಕೆಲಸಗಳಿಗೆ ರೂ.80.47 ಕೋಟಿ ಅನುದಾನ ನೀಡಲಾಗಿದೆ. ಈ ಪೈಕಿ ರೂ. 60.16 ಕೋಟಿ ಹಣ ಈಗಾಗಲೇ ಬಿಡುಗಡೆ ಮಾಡಿದ್ದು, ಪ್ರಸ್ತುತ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರ ಖಾತೆಯಲ್ಲಿ ಮುಂದಿನ ತುರ್ತು ಪರಿಹಾರಕ್ಕಾಗಿ ಸುಮಾರು ರೂ 579 ಕೋಟಿ ಅನುದಾನ ಲಭ್ಯವಿದೆ ಎಂದರು.
ಭೂಕುಸಿತ ತಡೆಗೆ ಶಾಶ್ವತ ಪರಿಹಾರ ಯೋಜನೆ: ಈ ವರ್ಷ ಭೂ ಕುಸಿತ ಪ್ರಕರಣ ನಿರೀಕ್ಷೆಗಿಂತ ಹೆಚ್ಚಾಗಿದೆ. ಕಾರವಾರದ ಘಟನೆ ಆಘಾತಕಾರಿಯಾಗಿದೆ. ಮಲೆನಾಡು ಭಾಗದಲ್ಲೂ ಸಣ್ಣಪುಟ್ಟ ಭೂ ಕುಸಿತದ ಘಟನೆ ಸಂಭವಿಸಿದೆ. ಈ ನಿಟ್ಟಿನಲ್ಲಿ ಭೂ ಕುಸಿತವನ್ನು ತಡೆಗಟ್ಟಲು ಶಾಶ್ವತ ಯೋಜನೆ ರೂಪಿಸಲಾಗಿದೆ ಎಂದು ಸದನಕ್ಕೆ ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದರು.
ಭೂ ಕುಸಿತ ತಡೆಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಸಿಎಂ ಜೊತೆ ಚರ್ಚಿಸಿ ಅವರ ಸೂಚನೆ ಹಿನ್ನೆಲೆ ಎರಡೂವರೆ ವರ್ಷದ ಅವಧಿಗೆ ರೂ.400 ಕೋಟಿ ರೂಪಾಯಿ ವೆಚ್ಚದಲ್ಲಿ ಭೂ ಕುಸಿತ ತಡೆಗಟ್ಟುವ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ತೀರ್ಮಾನಿಸಿದ್ದೇವೆ. ಭೂ ಕುಸಿತಕ್ಕೆ ಒಳಗಾಗಬಹುದಾದ ಪ್ರದೇಶಗಳ ಬಗ್ಗೆ ನ್ಯಾಷನಲ್ ಜಿಯೋಲಾಜಿಕಲ್ ಸರ್ವೇ ಎಂಬ ಕೇಂದ್ರ ಸರ್ಕಾರದ ಸಂಸ್ಥೆಯಿಂದ ವರದಿ ತರಿಸಲಾಗಿದೆ. ಆ ವರದಿಯಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಸೇರಿದಂತೆ 06 ಜಿಲ್ಲೆಗಳ 863 ಗ್ರಾಮ ಪಂಚಾಯಿತಿಗಳನ್ನು ಭೂ ಕುಸಿತ ಉಂಟಾಗಬಹುದಾದ ಪ್ರದೇಶಗಳು ಎಂದು ಗುರುತಿಸಲಾಗಿದೆ. ಈ ಜಿಲ್ಲೆಗಳಲ್ಲಿ ಭೂ ಕುಸಿತ ತಡೆಯುವ ಸಂಬಂಧಿಸಿದ ಯೋಜನೆಗಳ ಕುರಿತು ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿಗಳಿಂದ ವರದಿ ತರಿಸಿಕೊಳ್ಳಲಾಗಿದೆ. ರೂ.425 ಕೋಟಿ ವೆಚ್ಚದ ಯೋಜನೆಗಳಿಗೆ ಜಿಲ್ಲಾಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ. ಭೂ ಕುಸಿತ ತಡೆಗಟ್ಟುವ ಕಾಮಗಾರಿಗೆ ಹಣ ನೀಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಅದರ ಭಾಗವಾಗಿ ತಕ್ಷಣ ರೂ.152 ಕೋಟಿ ಹಣವನ್ನು ವಿವಿಧ ಕಾಮಗಾರಿಗಳಿಗೆ ಮಂಜೂರು ಮಾಡಲಾಗಿದೆ. ಇದಲ್ಲದೆ, ಮಳೆ ಹೆಚ್ಚಾದಾಗ ನಗರ ಪ್ರದೇಶಗಳಲ್ಲಿ ನೀರನ್ನು ಹೊರಹಾಕುವ ಮೂಲಭೂತ ವ್ಯವಸ್ಥೆ ಇಲ್ಲ. ಇದೂ ಸಹ ಪ್ರವಾಹಕ್ಕೆ ಕಾರಣವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ರೂ.184 ಕೋಟಿ ಮೌಲ್ಯದ 259 ಕಾಮಗಾರಿಗಳಿಗೆ ತಕ್ಷಣ ಅನುಮೋದನೆ ನೀಡಲಿದ್ದೇವೆ ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ: ಗಾಜನೂರು ಬಳಿ ನೀರು ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಯೋಜನೆ: ಸಚಿವ ಬೈರತಿ ಸುರೇಶ್ - WATER PURIFICATION PLANT