ಬೆಂಗಳೂರು: ಭೂಗಳ್ಳತನ, ಭೂಮಿಗೆ ಸಂಬಂಧಿಸಿದ ವಂಚನೆ ತಡೆಯಲು ರಾಜ್ಯ ಸರ್ಕಾರ ಮುಂದಾಗಿದ್ದು, ಜಮೀನು ಮಾಲೀಕರ ಭಾವಚಿತ್ರದೊಂದಿಗೆ ಆರ್‌ಟಿಸಿಗೆ (ಪಹಣಿ) ಆಧಾರ್ ಕಾರ್ಡ್ ಜೋಡಣೆ ಕಡ್ಡಾಯಗೊಳಿಸಿದೆ. ಆರ್‌ಟಿಸಿಗೆ ಆಧಾರ್ ಕಾರ್ಡ್ ಸಂಖ್ಯೆ ಲಿಂಕ್ ಮಾಡಲು ಜುಲೈ ಅಂತ್ಯದವರೆಗೆ ಗಡುವು ನೀಡಿದೆ. ಕಂದಾಯ ಇಲಾಖೆ 'ನನ್ನ ಆಧಾರ್ ಕಾರ್ಡ್‌ನೊಂದಿಗೆ ನನ್ನ ಆಸ್ತಿ ಸುಭದ್ರ' ಯೋಜನೆ ಪ್ರಾರಂಭಿಸಿದೆ.
ಪ್ರಯೋಜನಗಳೇನು?: ರೈತರು ಆಧಾರ್ ಕಾರ್ಡ್ ಲಿಂಕ್ ಮಾಡುವುದರಿಂದ ಹಲವು ಲಾಭಗಳಿವೆ. ಸರ್ಕಾರದ ಸವಲತ್ತುಗಳು ಸಂಪೂರ್ಣವಾಗಿ ದೊರೆಯುತ್ತವೆ. ರೈತರ ಮಾಹಿತಿ ದಾಖಲಿಸುವ ಜೊತೆಗೆ ಭೂ ಸಂಬಂಧಿತ ವಂಚನೆಗಳನ್ನು ತಡೆಯಬಹುದು. ಈ ಉದ್ದೇಶದಿಂದ ಜಮೀನು ಮಾಲೀಕರ ಭಾವಚಿತ್ರದೊಂದಿಗೆ ಪಹಣಿಗೆ ಆಧಾರ್ ಜೋಡಣೆ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ.
ಪ್ರತಿಯೊಬ್ಬ ಭೂಮಾಲೀಕನೂ ಇದರ ಸದುಪಯೋಗಪಡಿಸಿಕೊಂಡರೆ ಉತ್ತಮ. ಸಣ್ಣ ಮತ್ತು ಅತಿಸಣ್ಣ ರೈತರು ಎಷ್ಟಿದ್ದಾರೆ? (2 ಹೆಕ್ಟೇರ್‌ಗಿಂತ ಕಡಿಮೆ ಜಮೀನು ಹೊಂದಿರುವ). ಸರ್ಕಾರದ ಸೌಲಭ್ಯ ಪಡೆಯಲು ಅರ್ಹತೆ ಉಳ್ಳವರೆಷ್ಟು ಎಂಬ ಕರಾರುವಕ್ಕಾದ ಮಾಹಿತಿ ಸಂಗ್ರಹಿಸಲು ಇದು ನೆರವಾಗಲಿದೆ. ಇದರೊಂದಿಗೆ ಒಬ್ಬ ರೈತ ಬೇರೆ ಬೇರೆ ಸರ್ವೇ ನಂಬರ್‌ಗಳಲ್ಲಿ ಜಮೀನು ಹೊಂದಿದ್ದರೆ ಆಧಾರ್ ಜೋಡಣೆಯಿಂದ ಎಲ್ಲ ಮಾಹಿತಿ ಒಂದೇ ಕಡೆ ಸಿಗಲಿದೆ. ರಾಜ್ಯದಲ್ಲಿ ಸುಮಾರು 4 ಕೋಟಿ ಆರ್ಟಿಸಿಗಳ ಪೈಕಿ ಇದುವರೆಗೆ ಸುಮಾರು 1.75 ಕೋಟಿ ಆಧಾರ್ ಸಂಖ್ಯೆ ಜೋಡಣೆ ಆಗಿದ್ದು, ಉಳಿದ ಆರ್‌ಟಿಸಿಗೆ ಲಿಂಕ್ ಮಾಡಲು ಕಂದಾಯ ಇಲಾಖೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಪ್ರಕ್ರಿಯೆ ಸಂಪೂರ್ಣ ಉಚಿತ. ನಿಮ್ಮ ಆಧಾರ್ ಕಾರ್ಡ್ನಲ್ಲಿರುವ ಹೆಸರು ಮತ್ತು ಪಹಣಿಯಲ್ಲಿರುವ ಹೆಸರು ಒಂದೇ ಆಗಿರಬೇಕು ಎಂಬುದನ್ನು ರೈತರು ಗಮನಿಸಬೇಕು.
ಆಧಾರ್, ಫೋಟೋ ಜೋಡಣೆ:ಆಯಾ ಕಂದಾಯ ವೃತ್ತದ ಗ್ರಾಮ ಆಡಳಿತಾಧಿಕಾರಿಗಳು ತಮ್ಮ ವ್ಯಾಪ್ತಿಯ ಹಳ್ಳಿಗೆ ತೆರಳಿ ಆಧಾರ್ ಜೋಡಣೆ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಒಟಿಪಿ ಆಧರಿತ ಇ-ಕೆವೈಸಿ, ಕೃಷಿ ಭೂಮಾಲೀಕರ ಭಾವಚಿತ್ರ ಸೆರೆಹಿಡಿಯುತ್ತಾರೆ. ಸದ್ಯ ಪಹಣಿಯಲ್ಲಿ ಆಧಾರ್ ಸಂಖ್ಯೆ ನಮೂದಾಗಿರುತ್ತದೆ. ಈಗ ಪಡೆಯುವ ಫೋಟೋ ಮಾಲೀಕರ ಆಸ್ತಿ ವಿವರದ ಜೊತೆಗೆ ಡೇಟಾ ಬೇಸ್‌ನಲ್ಲಿ ಸಂಗ್ರಹವಾಗಿರುತ್ತದೆ. ಭವಿಷ್ಯದಲ್ಲಿ ಅಗತ್ಯ ಇದ್ದಾಗ ಪರಿಶೀಲನೆಗೆ ಬಳಸಬಹುದು. ಆಧಾರ್ ಸಂಖ್ಯೆ ಮತ್ತು ಫೋಟೋ ಜೋಡಣೆ ಮಾಡುವುದರಿಂದ ನಕಲಿ ದಾಖಲೆ ಸೃಷ್ಟಿಸಿ ಭೂ ಕಬ್ಜ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ರೈತರು ಮತ್ತು ವಾರಸುದಾರರ ಆಸ್ತಿ ಸುರಕ್ಷಿತವಾಗಿರುತ್ತದೆ. ಅರ್ಹ ರೈತರಿಗೆ ಸೂಕ್ತ ಸಮಯಕ್ಕೆ ಪರಿಹಾರ ತಲುಪಿಸಲು, ಮ್ಯುಟೇಷನ್, ಸಬ್ಸಿಡಿ ನೀಡುವುದಕ್ಕೂ ಸಹಕಾರಿ ಆಗಲಿದೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.
ಕಂದಾಯ ಇಲಾಖೆ ಡಿಜಿಟಲೀಕರಣ:ಮುಂದಿನ ದಿನಗಳಲ್ಲಿ ಕಂದಾಯ ಇಲಾಖೆ ಡಿಜಿಟಲ್ ಸೇವೆ ಒದಗಿಸಲು ಇದು ನೆರವಾಗಲಿದೆ. ಭೂಸುರಕ್ಷಾ ಯೋಜನೆಯಡಿ ಫೆಬ್ರವರಿಯಲ್ಲಿ ರಾಜ್ಯದ 31 ತಾಲೂಕು ಕಚೇರಿಗಳಲ್ಲಿ ಪ್ರಾಯೋಗಿಕವಾಗಿ ರೆಕಾರ್ಡ್ ರೂಮ್ ದಾಖಲೀಕರಣ ಕಾರ್ಯ ಪ್ರಾರಂಭವಾಗಿದೆ. ಇದುವರೆಗೆ 3 ಕೋಟಿ ದಾಖಲೆ ಸ್ಕ್ಯಾನಿಂಗ್ ನಡೆದಿದೆ. ಉಳಿದ ತಾಲೂಕುಗಳಲ್ಲೂ ಈ ಯೋಜನೆ ಜಾರಿಗೆ ಬರಲಿದೆ. ಕಂದಾಯ ಇಲಾಖೆಯು ಎಲ್ಲ ಆಯಾಮದಿಂದ ಡಿಜಿಟಲೀಕರಣಕ್ಕೆ ಮುಂದಾಗಿದೆ. ಈಗಾಗಲೇ ಇ-ಕಚೇರಿ ಅನುಷ್ಠಾನದಲ್ಲಿ ಶೇ.80 ಪ್ರಗತಿ ಸಾಧಿಸಿದೆ. 2025ರ ಅಂತ್ಯಕ್ಕೆ ಕಂದಾಯ ಇಲಾಖೆಯಲ್ಲಿ ಪೂರ್ಣವಾಗಿ ಡಿಜಿಟಲೀಕರಣ ಮಾಡಲು ಸರ್ಕಾರ ಆಲೋಚಿಸಿದೆ.
"ಪಹಣಿಗೆ ಆಧಾರ್ ಲಿಂಕ್ ಜೋಡಣೆ ಮಾಡುವುದರಿಂದ ಒಬ್ಬರ ಜಮೀನನ್ನು ಮತ್ತೊಬ್ಬರು ಕಬಳಿಸುವುದನ್ನು ತಡೆಯಬಹುದು. ಬೆಳೆ ನಷ್ಟ ಮತ್ತಿತರ ಸಂದರ್ಭಗಳಲ್ಲಿ ದೊರೆಯುವ ಪರಿಹಾರವನ್ನು ಮತ್ತೊಬ್ಬರು ಪಡೆದು ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸಲು ಇದು ಸಹಕಾರಿಯಾಗಲಿದೆ. ಹಾಗಾಗಿ, ರಾಜ್ಯದಲ್ಲಿನ ಎಲ್ಲ ಆಸ್ತಿಗಳಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು, ರೈತರ ಜಮೀನುಗಳಿಗೆ ಆಧಾರ್ ಲಿಂಕ್ ಜುಲೈ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ" - ಕಂದಾಯ ಸಚಿವ ಕೃಷ್ಣಭೈರೇಗೌಡ
ಇದನ್ನೂ ಓದಿ: ವ್ಯಕ್ತಿ ಮೃತಪಟ್ಟ ಮೇಲೆ ಆಧಾರ್ ಕಾರ್ಡ್ ಏನಾಗುತ್ತೆ?: ಸರಂಡರ್ ಮಾಡಬೇಕಾ? ಇರುವ ಮಾರ್ಗಗಳೇನು? - What Happens Aadhaar After Death