ಬೆಂಗಳೂರು: ಹಾಡಹಾಗಲೇ ಕಾರಿನಲ್ಲಿ ಸರಸ ಸಲ್ಲಾಪದಲ್ಲಿ ತೊಡಗಿದ್ದ ಯುವ ಜೋಡಿಯನ್ನು ಪ್ರಶ್ನಿಸಿದ್ದಕ್ಕೆ ಸಿಟ್ಟಿಗೆದ್ದ ಯುವಕ ಸಬ್ ಇನ್ಸ್ಪೆಕ್ಟರ್ ಮೇಲೆ ಕಾರು ಹತ್ತಿಸಿರುವ ಘಟನೆ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿ ನಡೆದಿದೆ.
ಪಶ್ಚಿಮ ವಿಭಾಗದ ಸಶಸ್ತ್ರ ಮೀಸಲು ಪಡೆಯ ರಿಸರ್ವ್ ಸಬ್ ಇನ್ಸ್ಪೆಕ್ಟರ್ (ಆರ್ಎಸ್ಐ) ಮಹೇಶ್ ಎಂಬುವರು ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮಹೇಶ್ ಅವರಿಂದ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗೆ ಜಾಲ ಬೀಸಿದ್ದಾರೆ.
ಜನವರಿ 20ರಂದು ಜ್ಞಾನ ಭಾರತಿ ಉಪಕಾರ ಲೇಔಟ್ನಲ್ಲಿ ಈ ಘಟನೆ ನಡೆದಿದ್ದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಸಿಟಿವಿಯಲ್ಲಿ ಕಂಡು ಬಂದ ಕಾರಿನ ನೋಂದಣಿ ಸಂಖ್ಯೆ ಆಧಾರದ ಮೇಲೆ ಆರೋಪಿ ಪತ್ತೆಗೆ ಪೊಲೀಸರು ಶೋಧ ಮುಂದುವರಿಸಿದ್ದಾರೆ.
ಯುವ ಜೋಡಿ ವಿರುದ್ಧ ಅಸಮಾಧಾನ:ನಾಲ್ಕು ವರ್ಷಗಳಿಂದ ರಿಸರ್ವ್ ಸಬ್ ಇನ್ಸ್ಪೆಕ್ಟರ್ ಆಗಿ ಮಹೇಶ್ ಸೇವೆ ಸಲ್ಲಿಸುತ್ತಿದ್ದು, ಜನವರಿ 20ರ ಮಧ್ಯಾಹ್ನ ಊಟ ಮುಗಿಸಿಕೊಂಡು ವಾಕ್ ಮಾಡಲು ಪಾರ್ಕ್ ಬಳಿ ಬರುವಾಗ ಎಡಬದಿಯಲ್ಲಿ ನಿಂತಿದ್ದ ಕಾರಿನಲ್ಲಿ ಯುವ ಜೋಡಿ ಸರಸದಲ್ಲಿ ಮಗ್ನರಾಗಿರುವುದು ಕಂಡು ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ರಸ್ತೆಯಲ್ಲಿ ನಿತ್ಯ ನೂರಾರು ಮಂದಿ ಪಾರ್ಕ್ನಲ್ಲಿ ವಾಯುವಿಹಾರ ಮಾಡಲಿದ್ದು, ಈ ವಿಚಾರವಾಗಿ ತಿಳಿ ಹೇಳಲು ಮುಂದಾದಾಗ ಕಾರಿನಲ್ಲಿದ್ದ ಯುವಕ ಡ್ರೈವಿಂಗ್ ಸೀಟ್ ಮೇಲೆ ಕುಳಿತು ಏಕಾಏಕಿ ಕಾರು ಚಾಲನೆ ಮಾಡಿದ್ದಾನೆ. ಕಾರಿನ ಮುಂಭಾಗದಲ್ಲಿದ್ದ ರಿಸರ್ವ್ ಸಬ್ ಇನ್ಸ್ಪೆಕ್ಟರ್ ಮಹೇಶ್ ಮೇಲೆ ಏಕಾಏಕಿ ಕಾರು ಚಲಾಯಿಸಿದ್ದರಿಂದ ಆತಂಕಗೊಂಡು ಬಾನೆಟ್ ಮೇಲೆ ಹತ್ತಿದ್ದಾರೆ. ಎಷ್ಟೇ ನಿಲ್ಲಿಸುವಂತೆ ಸೂಚಿಸಿದರೂ ಕ್ಯಾರೆ ಅನ್ನದ ಚಾಲಕ ವೇಗವಾಗಿ ರಿವರ್ಸ್ ಗೇರ್ ಹಾಕಿ ಸಡನ್ ಆಗಿ ಕಾರ್ಗೆ ಬ್ರೇಕ್ ಹಾಕಿದ್ದರಿಂದ ಮಹೇಶ್ ಕೆಳಗೆ ಬಿದ್ದಿದ್ದಾರೆ.
ಈ ವೇಳೆ ತಲೆ ಹಾಗೂ ದೇಹದ ಇತರ ಭಾಗಗಳಿಗೆ ಪೆಟ್ಟಾಗಿದ್ದರಿಂದ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾರೆ. ತಕ್ಷಣ ಸ್ಥಳೀಯರು ಸೇರಿ ಮಹೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ರಿಸರ್ವ್ ಸಬ್ ಇನ್ಸ್ಪೆಕ್ಟರ್ ಮಹೇಶ್ ಅವರಲ್ಲಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಬಳಿಕ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿ ಪತ್ತೆಗೆ ಪೊಲೀಸರು ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ. ಆರೋಪಿ ಪತ್ತೆಯಾದ ಬಳಿಕವೇ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಹೊರ ಬೀಳಲಿದೆ.
ಇದನ್ನೂಓದಿ:ಮೈಸೂರು: ಹಲ್ಲೆಗೊಳಗಾಗಿದ್ದ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಸಾವು, ಕಾರ್ಯದರ್ಶಿ ಬಂಧನ