ಬೆಂಗಳೂರು: ತನ್ನ ಮಾಜಿ ಪ್ರಿಯತಮೆ ನೀಡಿದ ದೂರಿನಿಂದ ಜೈಲು ಪಾಲಾಗಿದ್ದ ಯುವಕನೊಬ್ಬ ಈಗ ಆಕೆಯ ವಿರುದ್ಧವೇ ಪ್ರತಿದೂರು ದಾಖಲಿಸಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ತನ್ನಿಂದ ಹಣಕ್ಕೆ ಡಿಮ್ಯಾಂಡ್ ಮಾಡಿ, ಹಣ ಕೊಡದಿದ್ದಾಗ ಸುಳ್ಳು ಪ್ರಕರಣ ದಾಖಲಿಸಿದ್ದಾಳೆ ಎಂದು ಶೆರ್ವಿನ್ ಎಂಬುವವರು ತನ್ನ ಪ್ರೇಯಸಿಯಾದ ವಿವಾಹಿತೆ ವಿರುದ್ಧ ರಾಜರಾಜೇಶ್ವರಿ ನಗರ ಠಾಣೆ ಮೆಟ್ಟಿಲೇರಿದ್ದಾರೆ.
ಏನಿದು ಪ್ರಕರಣ?:ನಾನು (ದೂರುದಾರ ಶೆರ್ವಿನ್) ಹಾಗೂ ವಿವಾಹಿತ ಮಹಿಳೆಯೊಬ್ಬರು ಒಂದು ವರ್ಷದ ಹಿಂದೆ ಪರಿಚಯವಾಗಿದ್ದೆವು. ವೃತ್ತಿಯಲ್ಲಿ ಟೆಕ್ಕಿಯಾಗಿದ್ದ ಈ ಮಹಿಳೆಯ ಜೊತೆಗೆ ಸಂಬಂಧವೂ ಬೆಳೆದಿತ್ತು. ಕೆಲ ಕಾಲ ಜೊತೆಯಾಗಿ ಒಡಾಡಿಕೊಂಡಿದ್ದ ಪ್ರಿಯತಮೆ ನಂತರ ನನಗೆ 20 ಲಕ್ಷ ರೂ. ಕೊಡುವಂತೆ ಪೀಡಿಸಲು ಶುರು ಮಾಡಿದ್ದಳು. ಹಣ ಕೊಡದೇ ಹೋದರೆ ಇಬ್ಬರ ಸಂಬಂಧದ ವಿಷಯವನ್ನು ನಿನ್ನ ಮನೆಯವರಿಗೆ ಹೇಳುತ್ತೇನೆ. ವಿಡಿಯೋ, ಫೋಟೋಗಳು ಇದ್ದು, ಅವುಗಳನ್ನು ಬಿಡುಗಡೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಳು. ಇದರಿಂದ ಬೇಸತ್ತು ಈ ವಿಚಾರವನ್ನು ಆಕೆಯ ಗಂಡ, ಮತ್ತೊಬ್ಬ ಸ್ನೇಹಿತನಿಗೆ ತಿಳಿಸಿದ್ದೆ. ಆಗ ಇವರು ಸಹ ಹಣ ಕೊಡದಿದ್ದರೆ ಸುಮ್ಮನೆ ಬಿಡುವುದಿಲ್ಲ ಎಂದು ನನಗೆ ಹೆದರಿಸಿದ್ದರು ಎಂಬುವುದಾಗಿ ಶೆರ್ವಿನ್ ತನ್ನ ದೂರು ನೀಡಿದ್ದಾರೆ.
ಈ ನಡುವೆ ಆರೋಪಿಗಳು ನನ್ನನ್ನು ಪೀಡಿಸಿ, ಚಿನ್ನಾಭರಣ ಅಡವಿರಿಸಿ 2 ಲಕ್ಷ ರೂ. ಹಣ ವಸೂಲಿ ಮಾಡಿದ್ದಾರೆ. ನವೆಂಬರ್ 7ರಂದು ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಇದಾದ ಕೆಲವು ದಿನದಲ್ಲಿ ನನ್ನ ವಿರುದ್ಧ ದೂರು ದಾಖಲಿಸಿ ಜೈಲಿಗೂ ಕಳುಹಿಸಿದ್ದರು. ಜೈಲಿನಿಂದ ಹೊರಬಂದ ಮೇಲೂ ನನಗೆ ಹಣಕ್ಕಾಗಿ ಪೀಡಿಸುತ್ತಿದ್ದಾರೆ ಎಂದು ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮತ್ತೊಂದೆಡೆ, ಕಳೆದ ಡಿಸೆಂಬರ್‌ನಲ್ಲಿ ಶೆರ್ವಿನ್ ವಿರುದ್ಧ ಕೋಣನಕುಂಟೆ ಠಾಣೆಗೆ ದೂರು ನೀಡಿದ್ದ ಪ್ರೇಯಸಿಯ ಆರೋಪವು ಭಿನ್ನವಾಗಿದೆ. ಶೆರ್ವಿನ್ ಮತ್ತು ತಾನು ಪರಿಚಿತರಾಗಿದ್ದು, ಒಟ್ಟಿಗೆ ಇದ್ದಿದ್ದು ನಿಜ. ಆ ಸಂದರ್ಭದಲ್ಲಿ ಆತನ ಖರ್ಚಿಗೆ ನಾನೇ ತುಂಬಾ ಹಣ ಕೊಟ್ಟಿದ್ದೆ. ಅತಿಯಾದಾಗ ಆತನ ಬುದ್ಧಿ ತಿಳಿದು ದೂರವಿಟ್ಟಿದ್ದೆ. ಕೊಟ್ಟ ಹಣ ವಾಪಸ್ ಕೇಳಿದ್ದೆ. ಆದರೆ, ಆತ ನನ್ನ ಮನೆ, ಕಚೇರಿ ಬಳಿಯೆಲ್ಲ ಬಂದು ಜಗಳ ಮಾಡುತ್ತಿದ್ದಾನೆ. ನನ್ನ ಮತ್ತು ಆತನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ ಎಂದು ಮಹಿಳೆಯು ತನ್ನ ದೂರಿನಲ್ಲಿ ಆರೋಪಿಸಿದ್ದರು. ಸದ್ಯ ಶೆರ್ವಿನ್ ಸಹ ಆಕೆಯ ವಿರುದ್ಧ ಪ್ರತಿದೂರು ದಾಖಲಿಸಿರುವ ಕಾರಣ ಪೊಲೀಸರು ಕೂಲಂಕಷ ತನಿಖೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ:ಬೆಂಗಳೂರು: ಬೆದರಿಸುತ್ತಿದ್ದ ರೌಡಿಶೀಟರ್ನನ್ನು ಹೊಂಚು ಹಾಕಿ ಹತ್ಯೆ ಮಾಡಿದ ನಾಲ್ವರ ಬಂಧನ