ಕರ್ನಾಟಕ

karnataka

ETV Bharat / state

ಮತ್ತೆ ಕಾಣುವ ಭರವಸೆಯನ್ನೇ ಕಳೆದುಕೊಂಡಿದ್ದ ಮಕ್ಕಳಿಗೆ 5 ವರ್ಷಗಳ ಬಳಿಕ ಸಿಕ್ಕಳು ತಾಯಿ!

ಮಹಾರಾಷ್ಟ್ರದಿಂದ ಕಾಣೆಯಾಗಿ 2019ರಲ್ಲಿ ಮಂಗಳೂರಿನಲ್ಲಿ ಪತ್ತೆಯಾದ ಮಹಿಳೆ 5 ವರ್ಷಗಳ ಬಳಿಕ ತನ್ನ ಕುಟುಂಬ ಸೇರಿದ್ದಾರೆ. ಈ ಕುರಿತು ಈಟಿವಿ ಭಾರತ ವರದಿಗಾರ ವಿನೋದ್ ಪುದು ಅವರು ಮಾಡಿರುವ ಮನ ಮಿಡಿಯುವ ಕಥೆ ಇಲ್ಲಿದೆ.

5 ವರ್ಷದ ಬಳಿಕ ತನ್ನ ಮಕ್ಕಳನ್ನು ಕಂಡ ತಾಯಿ ಬಿಗಿದಪ್ಪಿ ಭಾವುಕ.
ಐದು ವರ್ಷದ ಬಳಿಕ ತನ್ನ ಮಕ್ಕಳನ್ನು ಕಂಡು ಬಿಗಿದಪ್ಪಿ ಭಾವುಕರಾದ ತಾಯಿ (ETV Bharat)

By ETV Bharat Karnataka Team

Published : Nov 4, 2024, 11:43 AM IST

Updated : Nov 4, 2024, 11:49 AM IST

ಮಂಗಳೂರು:5ವರ್ಷಗಳ ಹಿಂದೆ ಮುಂಬೈಯಿಂದ ನಾಪತ್ತೆಯಾಗಿದ್ದ ತಾಯಿಯನ್ನು ಮತ್ತೆ ನೋಡುವೆವೆಂಬ ಭರವಸೆಯನ್ನೇ ಕಳೆದುಕೊಂಡ ಮಕ್ಕಳು ಕೊನೆಗೂ ಮತ್ತೆ ತಾಯಿಯನ್ನು ಸೇರಿದ್ದಾರೆ. ಇದಕ್ಕೆ ಕಾರಣವಾಗಿದ್ದು ಮಂಗಳೂರಿನ ವೈಟ್ ​ಡೌಸ್​ ಸಂಸ್ಥೆಯ ಕೊರಿನಾ ರಸ್ಕಿನ್​.

ಪೂರ್ಣ ವಿವರ: ಅಸ್ಮಾ ಎಂಬಾಕೆ 2019ರ ಜೂನ್​​​ 9ರ ನಡುರಾತ್ರಿ ಮಂಗಳೂರಿನ ಪಣಂಬೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ವೈಟ್‌ಡೌಸ್​​​​ ಸಂಸ್ಥೆಯ ಸಂಸ್ಥಾಪಕಿ ಕೊರಿನಾ ರಸ್ಕಿನ್​ ಅವರಿಗೆ ಸಿಕ್ಕಿದ್ದರು. ಮಾನಸಿಕ ಸ್ಥಿಮಿತ ಕಳೆದುಕೊಂಡ ಅಸ್ಮಾ ಅದು ಹೇಗೋ ಮಹಾರಾಷ್ಟ್ರದಿಂದ ಮಂಗಳೂರಿಗೆ ನಡೆದುಕೊಂಡೇ ಬಂದಿದ್ದರಂತೆ. ಹೀಗೆಯೇ ಬಿಟ್ಟರೆ ಬೀದಿ ಕಾಮುಕರ ಕೈಗೆ ಸಿಕ್ಕರೆ ಖಂಡಿತಾ ನಲುಗಿ ಹೋಗುವರೆಂದು ಯೋಚಿಸಿ, ಕೊರಿನಾ ರಸ್ಕಿನ್​ ಅವರು ಆಕೆಯನ್ನು ರಕ್ಷಿಸಿ ನಿರ್ಗತಿಕರ ಆಶ್ರಯತಾಣ ವೈಟ್‌ಡೌಸ್‌ಗೆ ಕರೆತಂದಿದ್ದರು. ಬಳಿಕ ಅಸ್ಮಾ ನೀಡಿರುವ ವಿಳಾಸವನ್ನು ಇಟ್ಟುಕೊಂಡು ಆಕೆಯ ಮನೆಯವರನ್ನು ಪತ್ತೆ ಹಚ್ಚಲು ಸತತ ಪ್ರಯತ್ನ ಮಾಡಿದರೂ ಫಲ ಸಿಕ್ಕಿರಲಿಲ್ಲ.

ಮತ್ತೆ ಒಂದಾದ ತಾಯಿ-ಮಕ್ಕಳ ಮನ ಮಿಡಿಯುವ ಕಥೆ. (ETV Bharat)

ಇತ್ತೀಚೆಗೆ ಅಸ್ಮಾ ಮುಂಬೈನ ಬೈಕಲಾದ ತವರು ಮನೆಯ ವಿಳಾಸ ಕೊಟ್ಟಿದ್ದರು. ಆ ವಿಳಾಸದ ಜಾಡು ಹಿಡಿದು ಬೈಕಲಾ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ ವೈಟ್‌ಡೌಸ್ ಸಂಸ್ಥೆಗೆ ಅಸ್ಮಾ ಮನೆಯವರು ಸಂಪರ್ಕಕ್ಕೆ ಸಿಕ್ಕಿದ್ದಾರೆ. ತಕ್ಷಣ ವಿಮಾನ ಹತ್ತಿ ಬಂದ ಅಸ್ಮಾ ಮನೆಯವರು ಮಹಿಳೆಯನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ.

ಅಸ್ಮಾ ಹತ್ತಾರು ವರ್ಷಗಳ ಕಾಲ ಪತಿಯೊಂದಿಗೆ ವಿದೇಶದಲ್ಲಿದ್ದವರು. ಬಳಿಕ ಮುಂಬೈನ ಥಾಣೆಯ ಮಂಬ್ರಿಲ್‌ನ ಪತಿ ಮನೆಯಲ್ಲಿದ್ದರು. ಈ ನಡುವೆ ಮಾನಸಿಕವಾಗಿ ಅಸ್ವಸ್ಥರಾಗಿದ್ದ ಅಸ್ಮಾ, ಪತಿ ಮನೆಯಿಂದ ತಾಯಿ ಮನೆಯ ನಡುವೆ ರೈಲಿನಲ್ಲಿ ಓಡಾಟ ಮಾಡುತ್ತಿದ್ದರು. 2019ರ ಮೇಯಲ್ಲಿ ಅದು ಹೇಗೋ ಮನೆಯಿಂದ ನಾಪತ್ತೆಯಾಗಿದ್ದಾರೆ. ಇದೀಗ 5 ವರ್ಷಗಳ ಬಳಿಕ ಮರಳಿ ಮನೆಗೆ ಸೇರಿದ್ದಾರೆ.

ತಾಯಿಯನ್ನು ಕಂಡು ಮಕ್ಕಳ ಆನಂದಭಾಷ್ಪ (ETV Bharat)

ಈ ಕುರಿತು 'ಈಟಿವಿ ಭಾರತ'ದ ಜೊತೆಗೆ ಮಾತನಾಡಿದ ವೈಟ್ ಡೌಸ್ ಸಂಸ್ಥೆಯ ಸಂಸ್ಥಾಪಕಿ ಕೊರಿನಾ ರಸ್ಕಿನ್, "2019ರ ಜೂನ್‌ 12ರಂದು ರಾತ್ರಿ ಪಣಂಬೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ರಸ್ತೆಬದಿಯಲ್ಲೊಬ್ಬ ಮಹಿಳೆಯನ್ನು ಕಂಡೆ. ಆಕೆಯ ಬೆನ್ನತ್ತಿದಾಗ, ಆಕೆ ಮಾನಸಿಕ ಸ್ಥಿಮಿತ ಕಳೆದುಕೊಂಡು, ಮಹಾರಾಷ್ಟ್ರದಿಂದ ಮಂಗಳೂರಿಗೆ ಹೇಗೋ ತಲುಪಿದ್ದು ಗೊತ್ತಾಯಿತು. ರಾತ್ರಿಯೇ ಆಕೆಯನ್ನು ನಮ್ಮ ಆಶ್ರಯ ಕೇಂದ್ರಕ್ಕೆ ಕರೆತಂದೆ. ಅಸ್ಮಾ ದುಬೈನಲ್ಲಿ 10 ವರ್ಷಗಳಿಂದ ಪತಿಯ ಜೊತೆಗಿದ್ದರು. ಅವರ ಮಾನಸಿಕ ಆರೋಗ್ಯದಲ್ಲಿ ಸಮಸ್ಯೆ ಉಂಟಾದ ನಂತರ ನಾಪತ್ತೆಯಾಗಿದ್ದರು. ತಾಯಿಯನ್ನು ಮತ್ತೆ ನೋಡಿ ಸಂತೋಷಗೊಂಡ ಮಕ್ಕಳು ಮತ್ತು ಕುಟುಂಬದವರು, ಕೊನೆಗೂ ಆಕೆಯನ್ನು ಮತ್ತೆ ಗಂಡುಮಕ್ಕಳ ಜೊತೆ ಸೇರಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂಬ ಸಂತೋಷವಿದೆ" ಎಂದರು.

ಐದು ವರ್ಷಗಳ ಬಳಿಕ ತಾಯಿ ಮತ್ತು ಮಕ್ಕಳ ಸಂಗಮ (ETV Bharat)

ವೈಟ್ ಡೌಸ್ ಸಂಸ್ಥೆ ಬಗ್ಗೆ:ಮಂಗಳೂರಿನ ಮರೋಳಿಯಲ್ಲಿ 1992 ರಲ್ಲಿ ವೈಟ್ ಡೌಸ್ ಸಂಸ್ಥೆಯನ್ನು ಆರಂಭಿಸಲಾಯಿತು. ಈ ಸಂಸ್ಥೆಯಿಂದ ನಿರ್ಗತಿಕರ, ಮಾನಸಿಕ ಅಸ್ವಸ್ಥರ ಸೇವೆ ಮಾಡುವ ಕಾರ್ಯ ನಡೆಯುತ್ತಿದೆ. ಈಗಾಗಲೇ ಮಂಗಳೂರಿನ ವಿವಿಧೆಡೆ ಸಿಕ್ಕಿದ 449 ನಿರ್ಗತಿಕರನ್ನು, ಮಾನಸಿಕ ಅಸ್ವಸ್ಥರನ್ನು ಮನೆಗೆ ಸೇರಿಸಿದೆ. ಇತ್ತೀಚೆಗೆ ಉತ್ತರ ಪ್ರದೇಶದ ಮೌಸೀನ್ ಎಂಬಾತನನ್ನು 15 ವರ್ಷದ ಬಳಿಕ ಮನೆಗೆ ಸೇರಿಸಲಾಗಿತ್ತು. ಇದು ಅತೀ ಹೆಚ್ಚು ಅವಧಿಯ ಬಳಿಕ ಮನೆಗೆ ಸೇರಿಸಿದ ಪ್ರಕರಣವಾಗಿದೆ. ಸದ್ಯ ವೈಟ್ ಡೌಸ್ ಸಂಸ್ಥೆಯಲ್ಲಿ 198 ನಿರ್ಗತಿಕರು ಇದ್ದಾರೆ. ಇವರಲ್ಲಿ ಸುಮಾರು 21 ವರ್ಷಕ್ಕೂ ಹಿಂದೆ ಸಿಕ್ಕವರು ಇದ್ದಾರೆ.

ಇದನ್ನೂ ಓದಿ:ಮಂಗಳೂರು: ಮಾನಸಿಕ ಅಸ್ವಸ್ಥತೆಯಿಂದ ಓಡಿಬಂದಿದ್ದ ಮಹಾರಾಷ್ಟ್ರದ ವ್ಯಕ್ತಿ ಮರಳಿ ಮನೆಗೆ

Last Updated : Nov 4, 2024, 11:49 AM IST

ABOUT THE AUTHOR

...view details