ರಾಯಚೂರು: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಿದ ಪರಿಣಾಮ ದೇವದುರ್ಗ ತಾಲೂಕಿನ ಗಡ್ಡೆಗೂಳಿ ಶ್ರೀ ಬಸವೇಶ್ವರ ದೇವಾಲಯ ಜಲಾವೃತಗೊಂಡಿದೆ.
ನಾರಾಯಣಪುರ (ಬಸವಸಾಗರ) ಡ್ಯಾಂಗೆ 65 ಸಾವಿರ ಕ್ಯೂಸೆಕ್ ನೀರು ಒಳ ಹರಿವುಯಿದ್ದು, 99 ಸಾವಿರದ 225 ಕ್ಯೂಸೆಕ್ ನೀರನ್ನು 22 ಗೇಟ್‌ಗಳ ಮೂಲಕ ನದಿಗೆ ಹರಿಸಲಾಗುತ್ತಿದೆ. ಇದರಿಂದಾಗಿ ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ತಾಲೂಕುಗಳ ಗ್ರಾಮಗಳು ಮತ್ತು ನಡುಗಡ್ಡೆ ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ನಡುಗಡ್ಡೆ ಹಾಗೂ ನದಿ ತೀರದ ಗ್ರಾಮಗಳಲ್ಲಿ ವಾಸಿಸುವ ಜನರಿಗೆ ಸುರಕ್ಷತಾ ಸ್ಥಳಕ್ಕೆ ತೆರಳುವಂತೆ ಸೂಚಿಸಿದೆ. ಜತೆಗೆ ಜನ - ಜಾನುವಾರುಗಳನ್ನು ನದಿಯ ಕಡೆ ತೆರಳದಂತೆ ಡಂಗುರ ಸಾರಲಾಗುತ್ತಿದೆ. ಪ್ರವಾಹ ಭೀತಿ ಹಿನ್ನೆಲೆ ತಾಲೂಕಿಗೆ ಒಬ್ಬರಂತೆ ನೋಡಲ್ ಆಫೀಸರ್ ನೇಮಕ ಮಾಡಲಾಗಿದ್ದು, ಸಕಲ ಸಿದ್ದತೆಗಳನ್ನು ಜಿಲ್ಲಾಡಳಿತ ಕೈಗೊಂಡಿದೆ.
ನಿರಂತರ ಮಳೆ: ಉಳಿದಂತೆ ರಾಯಚೂರು ಜಿಲ್ಲಾದ್ಯಂತ ಜಿಟಿಜಿಟಿ ಮಳೆ ಸುರಿಯುತ್ತಿದ್ದು ಇದರಿಂದಾಗಿ ಬಿಸಿಲೂರಿನಲ್ಲಿ ಮಲೆನಾಡು ಪ್ರದೇಶದ ವಾತಾವರಣ ನಿರ್ಮಾಣವಾಗಿದೆ. ಕಳೆದ ಎರಡು ದಿನಗಳಿಂದ ಜಿಲ್ಲಾದ್ಯಂತ ನಿರಂತರ ಮಳೆ ಸುರಿಯುತ್ತಿದೆ. ದೇವದುರ್ಗ, ಲಿಂಗಸುಗೂರು, ಮಾನ್ವಿ, ಸಿರವಾರ ಸೇರಿ ಹಲವಡೆ ಮಳೆಯಾಗುತ್ತಿರುವುದ್ದರಿಂದ ಜನ ಜೀವನ ಅಸ್ತವ್ಯಸ್ತವಾಗಿದೆ, ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗುವ ಆತಂಕ ಉಂಟಾಗಿದೆ.
ಇದನ್ನೂ ಓದಿ:ಮಳೆಯ ಆರ್ಭಟ: ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಈವರೆಗಿನ ಸ್ಥಿತಿಗತಿ ಏನಿದೆ? - KARNATAKA RAIN UPDATE