ಬೆಳಗಾವಿ: ಬ್ರಿಟಿಷರ ವಿರುದ್ಧ ವೀರರಾಣಿ ಕಿತ್ತೂರು ಚನ್ನಮ್ಮ ದಿಗ್ವಿಜಯ ಸಾಧಿಸಿದ ಐತಿಹಾಸಿಕ ಘಟನೆಗೆ 200 ವರ್ಷಗಳ ಸಂಭ್ರಮ. ಈ ವಿಜಯೋತ್ಸವಕ್ಕೆ ಕಾರಣಿಕರ್ತ ಗುರಿಕಾರ(ಶಾರ್ಪ್ ಶೂಟರ್) ಅಮಟೂರ ಬಾಳಪ್ಪ. ಬ್ರಿಟಿಷ್ ಕಲೆಕ್ಟರ್ ಥ್ಯಾಕರೆ ಎದೆಗೆ ಗುಂಡಿಟ್ಟು ಹೊಡೆದುರುಳಿಸಿ, ಇತ್ತ ರಾಣಿ ಚನ್ನಮ್ಮನನ್ನು ರಕ್ಷಿಸಿ ಗೆಲುವು ತಂದು ಕೊಡುತ್ತಿದ್ದಂತೆ ಕಿತ್ತೂರಿನಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು.
ವೀರಕೇಸರಿ ಬಾಳಪ್ಪನ ಶೌರ್ಯ, ಪರಾಕ್ರಮ ಕಿತ್ತೂರು ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದೆ. ಆದರೆ, ಬಾಳಪ್ಪನಿಗೆ ಸಿಗಬೇಕಾದ ಗೌರವ ಮತ್ತು ಪ್ರಚಾರ ಸಿಗದೇ ಇರುವುದು ವಿಪರ್ಯಾಸದ ಸಂಗತಿ. ಕಿತ್ತೂರು ಉತ್ಸವದ ನಿಮಿತ್ತ ಈಟಿವಿ ಭಾರತದ ವಿಶೇಷ ವರದಿ ಇಲ್ಲಿದೆ.
ಅಮಟೂರ ಬಾಳಪ್ಪ (ETV Bharat) ಅದು ಬ್ರಿಟಿಷರನ್ನು ಕಂಡರೆ ಬೆಚ್ಚಿ ಬೀಳುತ್ತಿದ್ದ ಕಾಲ. ಎಂತೆಂಥ ದೊಡ್ಡ ದೊಡ್ಡ ಸಾಮ್ರಾಜ್ಯಗಳೇ ಆಂಗ್ಲರ ಮುಂದೆ ಶರಣಾಗಿ, ಮಂಡಿಯೂರುತ್ತಿದ್ದವು. ಆದರೆ, ಕಿತ್ತೂರು ರಾಣಿ ಚನ್ನಮ್ಮ ಮಾತ್ರ ಆಂಗ್ಲರಿಗೆ ತಲೆಬಾಗಲಿಲ್ಲ. ಪುಟ್ಟ ಸಂಸ್ಥಾನವಾದರೂ ಯುದ್ಧಕ್ಕೆ ಪಂಥಾಹ್ವಾನ ಕೊಟ್ಟರು. ಕಿತ್ತೂರು ಕೋಟೆ ಮೇಲೆ ದಂಡೆತ್ತಿ ಬಂದ ಧಾರವಾಡ ಕಲೆಕ್ಟರ್ ಥ್ಯಾಕರೆಯನ್ನು 1824ರ ಅ.23ರಂದು ತನ್ನ ಬಂದೂಕಿನ ಹೊರ ಬಂದ ಗುಂಡಿನಿಂದ ಗುರಿಕಾರ ಬಾಳಪ್ಪ ಹೊಡೆದುರುಳಿಸಿ ಕಿತ್ತೂರು ವಿಜಯೋತ್ಸವಕ್ಕೆ ಮುನ್ನುಡಿ ಬರೆದರು.
ಅಮಟೂರ ಬಾಳಪ್ಪ ಕುರಿತು ಇತಿಹಾಸಕಾರರ ಮಾತು (ETV Bharat) ಕಿತ್ತೂರು ವಿಜಯೋತ್ಸವದ ಪ್ರಮುಖ ರೂವಾರಿ ಎಂದರೆ ಅದು ಅಮಟೂರ ಬಾಳಪ್ಪ. ಚನ್ನಮ್ಮನ ಪ್ರಮುಖ ಅಂಗರಕ್ಷಕನಾಗಿದ್ದು, ರಣರಂಗದಲ್ಲಿ ಹೋರಾಡುತ್ತಲೆ ಬ್ರಿಟಿಷ್ ಅಧಿಕಾರಿ ಥ್ಯಾಂಕರೆ ಗುಂಡು ಚನ್ನಮ್ಮನಿಗೆ ತಾಗುವುದನ್ನು ತಪ್ಪಿಸಿದ್ದರು. ಮತ್ತೊಂದು ಕಡೆ ಥ್ಯಾಕರೆ ಎದೆಗೆ ನೇರವಾಗಿ ಗುಂಡಿಟ್ಟು ಬೇಟೆಯಾಡುವ ಮೂಲಕ ಇಡೀ ದೇಶದಲ್ಲೇ ಮೊದಲ ಬಾರಿಗೆ ಬ್ರಿಟಿಷರ ವಿರುದ್ಧ ಕಿತ್ತೂರು ಗೆಲುವು ಸಾಧಿಸುವಂತೆ ಮಾಡಿದರು.
ಹೌದು, ವೀರಕೇಸರಿ ಬಾಳಪ್ಪ ತನ್ನ ಜೀವ ಇರೋವರೆಗೂ ರಾಣಿ ಚನ್ನಮ್ಮನ ಅಂಗರಕ್ಷಕನಾಗಿ, ನೆರಳಂತೆ ಕಾಯ್ದವರು. ಗುರಿಯಿಟ್ಟು ಬಂದೂಕಿನಿಂದ ಗುಂಡು ಹಾರಿಸುವುದರಲ್ಲಿ, ಖಡ್ಗ ಝಳಪಿಸುವುದರಲ್ಲಿ, ಬರ್ಚಿ ಎಸೆಯುವುದರಲ್ಲಿ ಪ್ರವೀಣನಾಗಿದ್ದರು. ಅವರ ಗುಂಡು, ಖಡ್ಗ ಮತ್ತು ಬರ್ಚಿಯ ಗುರಿ ಎಂದೂ ತಪ್ಪುತ್ತಿರಲಿಲ್ಲ. ಹಾಗಾಗಿಯೇ ಬಾಳಪ್ಪನಿಗೆ "ಗುರಿಕಾರ"(ಶಾರ್ಪ್ ಶೂಟರ್) ಎಂದು ಕರೆಯುತ್ತಿದ್ದರು.
ಅಮಟೂರ ಬಾಳಪ್ಪ (ETV Bharat) ಥ್ಯಾಕರೆ ಆಮಿಷಕ್ಕೆ ಸೊಪ್ಪು ಹಾಕದ ಬಾಳಪ್ಪ: "ಮುಗಿಲು ಹರಿದು ಮೇಲೆ ಬಿದ್ದರೂ, ಭೂಮಿ ಬಿರುಕು ಬಿಟ್ಟು ನುಂಗಲೂ ಸಿದ್ಧವಾದರೂ, ಸಾವು ಕಣ್ಮುಂದೆ ಬಂದು ನಿಂತರೂ ಒಂದಿಷ್ಟು ಎದೆಗುಂದದ ಧೈರ್ಯಶಾಲಿ ಗಂಡುಗಲಿ ಬಾಳಪ್ಪ. ಇಂಥ ರಣಧೀರನನ್ನು ತಮ್ಮತ್ತ ಸೆಳೆಯಲು ಬ್ರಿಟಿಷ್ ಅಧಿಕಾರಿ ಥ್ಯಾಕರೆ ಕೇಳಿದಷ್ಟು ಹಣ, ಬಂಗಾರ ಕೊಡುವುದಾಗಿ ಆಮಿಷವೊಡ್ಡುತ್ತಾನೆ. ಆದರೆ, ಇದಕ್ಕೆ ಸೊಪ್ಪು ಹಾಕದ ಬಾಳಪ್ಪ ಕನ್ನಡದ ನೀರು ಕುಡಿದು, ಕನ್ನಡ ನೆಲದಲ್ಲಿ ನಡೆದಾಡಿ, ಕನ್ನಡದ ಗಾಳಿ ಸೇವಿಸಿದ ಈ ದೇಹ, ನನ್ನ ಬಂದೂಕು ಮತ್ತು ಕತ್ತಿ ಕನ್ನಡ ನಾಡು, ಕಿತ್ತೂರು ನಾಡಿನ ರಕ್ಷಣೆಗೆ ಮಾತ್ರ ಮೀಸಲು. ನಿಮ್ಮಂಥ ಪರದೇಶಿಗಳಿಗೆ ಅಲ್ಲ ಎಂಬ ದಿಟ್ಟ ಉತ್ತರ ನೀಡಿ ಕಾದಾಟಕ್ಕೆ ಸಜ್ಜಾಗಿ ನಿಂತ ಧೀರ" ಎಂದು ಹಿರಿಯ ಜಾನಪದ ತಜ್ಞ ಮತ್ತು ಇತಿಹಾಸಕಾರ ಡಾ. ಸಿ.ಕೆ. ನಾವಲಗಿ ಸ್ಮರಿಸಿದರು.
2ನೇ ಯುದ್ಧದಲ್ಲಿ ಬ್ರಿಟಿಷರು ಮೇಲುಗೈ ಸಾಧಿಸುತ್ತಿದ್ದಂತೆ ರಣರಂಗದಲ್ಲಿ ಚಾಪ್ಲಿನ್ ಗುಂಡಿನೇಟಿನಿಂದ ಚನ್ನಮ್ಮನ ಪ್ರಾಣ ರಕ್ಷಿಸಿ, ಆ ಗುಂಡಿನೇಟಿಗೆ ತಾನು ಗುರಿಯಾಗಿ ಕಿತ್ತೂರು ನೆಲದಲ್ಲಿ ರಕ್ತ ಚೆಲ್ಲಿದ ಬಾಳಪ್ಪ ನಿಜವಾದ ಕಿತ್ತೂರು ವಿಜಯೋತ್ಸವದ ರೂವಾರಿ. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಅಮಟೂರ ಬಾಳಪ್ಪ, ರಾಣಿ ಚನ್ನಮ್ಮನಿಗೆ ನೀವು ಇಲ್ಲಿಂದ ಹೋಗಿರಿ, ಅಮ್ಮ ನೀವು ಬದುಕಬೇಕು. ನೀವು ಬದುಕುಳಿದರೆ ಎಲ್ಲವೂ ಎನ್ನುತ್ತಾನೆ.
ಅದೇ ರೀತಿ ಸಂಗೊಳ್ಳಿ ರಾಯಣ್ಣ, ಸರ್ದಾರ್ ಗುರುಶಿದ್ಧಪ್ಪ, ಗಜವೀರ ಸೇರಿ ಮೊದಲಾದ ಹೋರಾಟಗಾರರಿಗೂ ತಪ್ಪಿಸಿಕೊಳ್ಳಲು ಹೇಳುತ್ತಾನೆ. ತನ್ನ ಎದೆಯಿಂದ ಹರಿದು ಬರುತ್ತಿದ್ದ ರಕ್ತವನ್ನು ರಾಯಣ್ಣನ ಹಣೆಗೆ ಹಚ್ಚಿ, ಕಿತ್ತೂರು ಕೋಟೆಯಲ್ಲಿ ಕಾಲು ಹಾಕಿದ ಬ್ರಿಟಿಷರನ್ನು ಚೆಂಡಾಡು. ಚನ್ನಮ್ಮ ರಾಣಿಯನ್ನು ಮತ್ತೆ ಕಿತ್ತೂರಿನ ಆಡಳಿತದ ಚುಕ್ಕಾಣಿ ಹಿಡಿಯುವಂತೆ ಮಾಡುವುದು ನಿನ್ನ ಕರ್ತವ್ಯ. ನನ್ನ ಶಕ್ತಿಯನ್ನು ನಿನ್ನಲ್ಲಿ ತುಂಬುವೇನು ಎಂದು ಹೇಳಿ ಬಾಳಪ್ಪ ಉಸಿರು ಚೆಲ್ಲುತ್ತಾನೆ. ಬಾಳಪ್ಪನ ನಾಡಪ್ರೇಮ, ತ್ಯಾಗ, ಬಲಿದಾನ ನಾವು ಯಾರೂ ಮರೆಯಬಾರದು ಎಂದು ಮನವಿ ಮಾಡಿದರು.
ಕಿತ್ತೂರು ಇತಿಹಾಸದಲ್ಲಿ ಬಾಳಪ್ಪ ಚಿರಸ್ಥಾಯಿ:ಈಟಿವಿ ಭಾರತ ಜೊತೆಗೆ ಮಾತನಾಡಿದ ಸಂಶೋಧಕ ಮಹೇಶ ಚನ್ನಂಗಿ, ಮೊದಲ ಯುದ್ಧದಲ್ಲಿ ಐಸಿಎಸ್ ಅಧಿಕಾರಿ ಥ್ಯಾಕರೆಯನ್ನು ಅಮಟೂರ ಬಾಳಪ್ಪ ಗುಂಡಿಕ್ಕಿ ಕೊಲ್ಲುತ್ತಾರೆ. ಹಾಗಾಗಿ, ಇಂದು ನಾವೆಲ್ಲಾ 200ನೇ ಕಿತ್ತೂರು ರಾಣಿ ಚನ್ನಮ್ಮನ ವಿಜಯೋತ್ಸವ ವಿಜೃಂಭಣೆಯಿಂದ ಆಚರಿಸುವಂತಾಗಿದೆ. ಥ್ಯಾಕರೆ ಹತ್ಯೆಯಿಂದ ಸಿಟ್ಟಿಗೆದ್ದಿದ್ದ ಬ್ರಿಟಿಷರು ಕಿತ್ತೂರಿನ ಮೇಲೆ ಮತ್ತೆ ಯುದ್ಧ ಸಾರುತ್ತಾರೆ. 1824ರ ನವೆಂಬರ್ 30ರಿಂದ ಡಿಸೆಂಬರ್ 5ರ ವರೆಗೆ ನಡೆದ 2ನೇ ಯುದ್ಧದಲ್ಲಿ ಡಿ.4ರಂದು ಕಿತ್ತೂರಿನ ಗಡಾದಮರಡಿ ವಶಕ್ಕೆ ಪಡೆಯುವ ವೇಳೆ ಬ್ರಿಟಿಷ್ ಅಧಿಕಾರಿ ಚಾಪ್ಲಿನ್ ಬಂದೂಕಿನ ನಳಿಗೆಯಿಂದ ಹೊರ ಬಂದ ಗುಂಡಿನಿಂದ ಬಾಳಪ್ಪ ವೀರ ಮರಣವನ್ನಪ್ಪುತ್ತಾರೆ. ತನ್ನ ಕೊನೆಯುಸಿರು ಇರೋವರೆಗೂ ಕಿತ್ತೂರಿಗಾಗಿ ಕಾದಾಡಿದ ವೀರಕೇಸರಿ ಬಾಳಪ್ಪ ಎಂದೆಂದೂ ಚಿರಸ್ಥಾಯಿ ಎಂದು ತಿಳಿಸಿದರು.
ಅಮಟೂರ ಬಾಳಪ್ಪನಿಗೆ ಸಿಗಲಿ ಗೌರವ:200ನೇ ಕಿತ್ತೂರು ವಿಜಯೋತ್ಸವಕ್ಕೆ ಕಾರಣಿಕರ್ತನಾಗಿರುವ ಅಮಟೂರ ಬಾಳಪ್ಪನಿಗೆ ಈ ಬಾರಿಯ ಉತ್ಸವದಲ್ಲಿ ವಿಶೇಷ ಗೌರವ ಸಿಗಬೇಕು. ಆತನ ಹುಟ್ಟೂರು ಬೈಲಹೊಂಗಲ ತಾಲ್ಲೂಕಿನ ಅಮಟೂರ ಗ್ರಾಮದಲ್ಲೂ ಕಾರ್ಯಕ್ರಮ ಆಯೋಜಿಸಬೇಕು. ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ಬಾಳಪ್ಪನ ಪುತ್ಥಳಿ ಸ್ಥಾಪಿಸಬೇಕು. ಶಾಲಾ, ಕಾಲೇಜುಗಳ ಪಠ್ಯದಲ್ಲೂ ಗುರಿಕಾರ ಬಾಳಪ್ಪನ ಶೌರ್ಯ, ಸಾಹಸದ ಬಗ್ಗೆ ಮಕ್ಕಳಿಗೆ ತಿಳಿಸುವಂತಾಗಬೇಕು. ಪ್ರತಿ ವರ್ಷ ಅಮಟೂರಿನಲ್ಲಿ ಸರ್ಕಾರದಿಂದಲೇ ಉತ್ಸವ ಆಚರಿಸಬೇಕು ಮತ್ತು ಉತ್ಸವದ ಸಂದರ್ಭದಲ್ಲಿ ಪ್ರತಿವರ್ಷ ಸಾಹಸ ಮೆರೆದ ಯುವಕರಿಗೆ ಅಮಟೂರ ಬಾಳಪ್ಪ ಹೆಸರಿನ ಶೌರ್ಯ ಪ್ರಶಸ್ತಿ ಪ್ರದಾನ ಮಾಡಬೇಕು ಎಂಬುದು ವೀರಕೇಸರಿ ಅಮಟೂರ ಬಾಳಪ್ಪ ಟ್ರಸ್ಟ್ ಕಮಿಟಿ ಅಧ್ಯಕ್ಷ ಸೋಮನಗೌಡ ಪಾಟೀಲ ಒತ್ತಾಯಿಸಿದರು.
ಅಮಟೂರನ್ನು ಕಿತ್ತೂರು ನಾಡ ಪಾರಂಪರಿಕ ಅಭಿವೃದ್ಧಿಗೊಳ್ಳುವ ಪ್ರದೇಶವೆಂದು ಸರ್ಕಾರ ಘೋಷಿಸಬೇಕು. ಅಮಟೂರ ಗ್ರಾಮದ ಹೆಸರನ್ನು ಬಾಳಪ್ಪನ ಅಮಟೂರ ಎಂದು ಮರು ನಾಮಕರಣ ಮಾಡಬೇಕು. ಗ್ರಾಮದಲ್ಲಿರುವ ಶಾಲೆ, ಕೃಷಿಪತ್ತಿನ ಸಹಕಾರಿ ಸಂಘ, ಗ್ರಂಥಾಲಯ ಸೇರಿ ಮತ್ತಿತರ ಸಂಸ್ಥೆಗಳಿಗೆ ಬಾಳಪ್ಪನವರ ಹೆಸರಿಡಬೇಕು. ಹೀಗೆ ಗೌರವ ಸಲ್ಲಿಸುವ ಮೂಲಕ ಬಾಳಪ್ಪನವರನ್ನು ಅಜರಾಮರಗೊಳಿಸಬೇಕು ಎಂಬುದು ಅವರ ಅಭಿಮಾನಿಗಳ ಆಗ್ರಹವಾಗಿದೆ.
ಇದನ್ನೂ ಓದಿ:ಸವದತ್ತಿ ಯಲ್ಲಮ್ಮ ದೇವಿ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ: ಪತ್ನಿ ಪಾರ್ವತಿ ಹೆಸರಲ್ಲಿ ವಿಶೇಷ ಪೂಜೆ