ಡಿಸಿಎಂ ಡಿ.ಕೆ.ಶಿವಕುಮಾರ್ (ETV Bharat) ಬೆಂಗಳೂರು: ನೆಲಮಂಗಲದಲ್ಲಿ ಬಿಜೆಪಿ ಸಂಸದ ಸುಧಾಕರ್ ಅಭಿನಂದನಾ ಕಾರ್ಯಕ್ರಮದಲ್ಲಿ ಮದ್ಯ ಹಂಚಿಕೆ ಪ್ರಕರಣ ಸಂಬಂಧ ವರದಿ ತರಿಸುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಅಭಿನಂದನಾ ಕಾರ್ಯಕ್ರಮದಲ್ಲಿ ಎಣ್ಣೆ ಪಾರ್ಟಿ ಮಾಡುವುದು ಯಾವ ಸಂಸ್ಕೃತಿ, ಯಾವ ಸಂಪ್ರದಾಯ ಎಂಬುದನ್ನು ಬಿಜೆಪಿ ರಾಷ್ಟ್ರೀಯ, ರಾಜ್ಯ ನಾಯಕರೇ ಹೇಳಬೇಕು. ಬಿಜೆಪಿಯವರದ್ದು ಯಾವ ಪದ್ದತಿ, ಯಾವ ಸಂಸ್ಕೃತಿ ಎಂದು ಅವರೇ ಉತ್ತರಿಸಬೇಕು. ಏನು ಕಾನೂನು ನಿಯಮ ಉಲ್ಲಂಘನೆ ಆಗಿದೆ ಎಂದು ವರದಿ ತರಿಸುತ್ತೇವೆ ಎಂದರು.
ಇದಕ್ಕೂ ಮುಂಚೆ ಈ ವಿಚಾರವಾಗಿ ಮಾತನಾಡಿ, ಬಿಜೆಪಿ ಸಂಸದ ಡಿ.ಸುಧಾಕರ್ ಅವರು ಕಾರ್ಯಕರ್ತರಿಗೆ ಮದ್ಯ ಹಂಚಿಕೆ ಮಾಡಿರುವ ಬಗ್ಗೆ ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಉತ್ತರಿಸಬೇಕು. ಈ ಸಂಬಂಧ ಪ್ರಕರಣ ದಾಖಲಿಸುವುದು ಬೇರೆ ವಿಚಾರ. ಆದರೆ, ಬಿಜೆಪಿ ನಾಯಕರ ಸಂಸ್ಕೃತಿ ಇದೇನಾ ಎಂದು ಉತ್ತರಿಸಲಿ ಎಂದು ಟೀಕಿಸಿದ್ದರು.
ಇದನ್ನೂ ಓದಿ:ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಅಭಿನಂದನಾ ಸಮಾರಂಭದಲ್ಲಿ ಮದ್ಯ ವಿತರಣೆ ಆರೋಪ - Liquor Distribution
ಈ ಕುರಿತು ಆರೋಗ್ಯ ಸಚಿವ ದಿನೇಶ್ ಗೂಂಡೂರಾವ್ ಕೂಡ ತಮ್ಮ 'ಎಕ್ಸ್' ಖಾತೆಯಲ್ಲಿ ಪ್ರತಿಕ್ರಿಯಿಸಿದ್ದು, 'ಹೇಳುವುದು ಒಂದು ಮಾಡುವುದು ಇನ್ನೊಂದು ನಂಬುವುದು ಹೇಗೋ ಕಾಣೆ. ರಾಜ್ಯ ಡೆಂಗ್ಯೂ ಪೀಡಿತವಾಗಿರುವಾಗ ಬಿಜೆಪಿ ನಾಯಕರು ಮದ್ಯ ಹಂಚಿಕೆಯಲ್ಲಿ ನಿರತರಾಗಿದ್ದಾರೆ. ನಾನು ಮಂಗಳೂರಿಗೆ ಭೇಟಿ ಕೊಟ್ಟಾಗ ಈಜು ಕೊಳದಲ್ಲಿ ಈಜಿದ್ದನ್ನೇ ಪ್ರಶ್ನಿಸಿದ ಬಿಜೆಪಿ ನಾಯಕರು ಈಗೆಲ್ಲಿದ್ದಾರೆ?. ಇದೇನಾ ನಿಮ್ಮ ಸಂಸ್ಕ್ರತಿ?' ಎಂದು ತಿರುಗೇಟು ನೀಡಿದ್ದಾರೆ.