ಕರ್ನಾಟಕ

karnataka

ETV Bharat / state

ಅಡ್ಡ ಬಂದ ನಾಯಿ ತಪ್ಪಿಸಲು ಹೋಗಿ ಮರಕ್ಕೆ ಕಾರು ಡಿಕ್ಕಿ: ಮಗನ ಮದುವೆ ಸಂಭ್ರಮದಲ್ಲಿದ್ದ ತಾಯಿ ಸಾವು - Road Accident - ROAD ACCIDENT

ಮದುವೆ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ವಿಧಿಯಾಟದಿಂದ ಸೂತಕ ಆವರಿಸಿದೆ. ಕೆಲವೇ ದಿನಗಳಲ್ಲಿ ಮಗನ ಮದುವೆಯನ್ನು ಅದ್ಧೂರಿಯಾಗಿ ಮಾಡಿ ಮುಗಿಸುವ ಕನಸು ಕಂಡಿದ್ದ ತಾಯಿ ರಸ್ತೆ ಅಪಘಾತದಲ್ಲಿ ಮೃತಪಟಿದ್ದಾರೆ. ಈ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.

ROAD ACCIDENT
ರಸ್ತೆ ಅಪಘಾತದಲ್ಲಿ ಮೃತಪಟ್ಟ ಸವಿತಾ (ETV Bharat)

By ETV Bharat Karnataka Team

Published : Aug 28, 2024, 5:29 PM IST

ಚಿಕ್ಕಬಳ್ಳಾಪುರ: ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋಗಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮದುವೆ ಆಗಬೇಕಿದ್ದ ಯುವಕ ಗಂಭೀರ ಗಾಯಗೊಂಡಿದ್ದು, ತಾಯಿ ಮೃತಪಟ್ಟ ಘಟನೆ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಮಂಚೇನಹಳ್ಳಿ ತಾಲೂಕಿನ ಅಲಕಾಪುರ ಬಳಿ ಮಂಗಳವಾರ ರಾತ್ರಿ ಈ ದುರ್ಘಟನೆ ಸಂಭವಿಸಿದೆ.

ಅಪಘಾತದಲ್ಲಿ ತಾಯಿ ಸವಿತಾ ಸ್ಥಳದಲ್ಲೇ ಮೃತಪಟ್ಟಿದ್ದು, ಮಗ ಕುಶಾಲ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಈತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಕುಶಾಲ್​ಗೆ ವಾರದ ಹಿಂದೆಯಷ್ಟೇ ಬಿಶ್ಚಿತಾರ್ಥವಾಗಿದ್ದು, ಡಿಸೆಂಬರ್​ನಲ್ಲಿ ಮದುವೆ ಮಾಡಲು ದಿನ ಫಿಕ್ಸ್​ ಮಾಡಲಾಗಿತ್ತು. ಇವರು ಗೌರಿಬಿದನೂರಿನ ಪಾಂಡುರಂಗ ಜ್ಯುವೆಲರಿ ಅಂಗಡಿ ಮಾಲೀಕರಾಗಿದ್ದು, ಅಂಗಡಿಗೆ ಬೇಕಾಗಿದ್ದ ವಸ್ತುಗಳ ಖರೀದಿಗೆ ಬೆಂಗಳೂರಿಗೆ ಹೋಗಿದ್ದರು. ನಂತರ ವಾಪಸ್ ಬರುವ ವೇಳೆ ಘಟನೆ ನಡೆದಿದೆ.

ಅಂಗಡಿಯೂ ನಗರದಲ್ಲಿ ಸಾಕಷ್ಟು ಹೆಸರನ್ನು ಗಳಿಸಿದೆ. ಇವರ ತಂದೆ ಕೊರೊನಾ ಸಮಯದಲ್ಲಿ ಮೃತಪಟ್ಟಿದ್ದು, ಅಂಗಡಿಯ ಜವಾಬ್ದಾರಿಯನ್ನು ತಾಯಿ ಮತ್ತು ಮಗ ಕುಶಾಲ್ ನಿರ್ವಹಿಸುತ್ತಿದ್ದರು. ಆದರೆ, ವಿಧಿಯಾಟಕ್ಕೆ ಈಗ ಮತ್ತೆ ಕುಟುಂಬದಲ್ಲಿ ಒಬ್ಬರನ್ನು ಕಳೆದುಕೊಳ್ಳುವಂತಾಗಿದೆ.

ಮಂಚೇನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:ಕಾರ್​ಗೆ ಬೈಕ್‌ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು: ಸಿಸಿಟಿವಿ ದೃಶ್ಯ - Biker Died

ABOUT THE AUTHOR

...view details