ಕರ್ನಾಟಕ

karnataka

ETV Bharat / state

ಸಿಲಿಕಾನ್ ಸಿಟಿಯ ಪರಿಸರ ಪ್ರೇಮಿಯಿಂದ ಮನೆಯಲ್ಲಿಯೇ ಮಿನಿ ಉದ್ಯಾನವನ - mini garden - MINI GARDEN

ಬೆಂಗಳೂರಿನ ಡಾಲರ್ಸ್‌ ಕಾಲೋನಿಯಲ್ಲಿರುವ ಪರಿಸರ ಪ್ರೇಮಿ ಮಟಿಲ್ಡಾ ಡಿಸೋಜ ಅವರು ತಮ್ಮ ಮನೆಯಲ್ಲಿಯೇ ಮಿನಿ ಉದ್ಯಾನವನ ನಿರ್ಮಿಸಿದ್ದಾರೆ. ಅವರ ಈ ಪರಿಸರ ಕಾಳಜಿ ಮತ್ತು ಐಡಿಯಾ ಗಾರ್ಡನ್​ ಸಿಟಿಯ ಜನರ ಗಮನ ಸೆಳೆದಿದೆ. ಅವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ..

mini-garden
ಮಿನಿ ಉದ್ಯಾನವನ (ETV Bharat)

By ETV Bharat Karnataka Team

Published : Jun 17, 2024, 7:50 PM IST

ಬೆಂಗಳೂರು : ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುತ್ತಿದ್ದ ಬೆಂಗಳೂರು ಇತ್ತೀಚಿನ ದಿನಗಳಲ್ಲಿ ಆಧುನೀಕರಣದ ಹೊಡೆತಕ್ಕೆ ಸಿಲುಕಿ ಒದ್ದಾಡುತ್ತಿದೆ. ಒಂದು ಕಾಲದಲ್ಲಿ ಉದ್ಯಾನನಗರಿ ಎಂದೇ ಹೆಸರಾಗಿದ್ದ ಸಿಲಿಕಾನ್ ಸಿಟಿ ಈಗ ಪರಿಸರ ಜಾಗೃತಿಯ ಅರಿವು ಮೂಡಿಸಿಕೊಳ್ಳುವ ಅನಿವಾರ್ಯತೆಯ ಹಂತಕ್ಕೆ ಬಂದು ನಿಂತಿದೆ.

ಮಿನಿ ಉದ್ಯಾನವನ (ETV Bharat)

ಹಲವೆಡೆ ಪರಿಸರ ನಾಶವಾಗುತ್ತಿರುವ ಈ ಸಂದರ್ಭದಲ್ಲಿ ಅಪ್ಪಟ ಪರಿಸರ ಪ್ರೇಮಿಗಳ ಕಾಳಜಿ ಕೆಲವೆಡೆ ಕಾಣಸಿಗುತ್ತದೆ. ಅಂತಹವರಲ್ಲಿ ಒಬ್ಬರು ಡಾಲರ್ಸ್‌ ಕಾಲೋನಿಯಲ್ಲಿರುವ ಮಟಿಲ್ಡಾ ಡಿಸೋಜ ಎಂದರೆ ಅತಿಶಯೋಕ್ತಿಯಲ್ಲ. ಪರಿಸರ ಪ್ರೇಮಿಯಾಗಿರುವ ಇವರು ತಮ್ಮ ಮನೆಯಲ್ಲೇ ಮಿನಿ ಉದ್ಯಾನವನ ಸೃಷ್ಟಿಸಿ ಮರ, ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಕಳೆದ 10 ವರ್ಷಗಳಿಂದ ಬೇರೆ ಬೇರೆ ನಗರದಿಂದ ಗಿಡಗಳನ್ನು ತಂದು ನೆಡುವ ಮೂಲಕ 200ಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಿದ್ದಾರೆ.

ಮಟಿಲ್ಡಾ ಡಿಸೋಜ ಮನೆಯಲ್ಲಿರುವ ಮಿನಿ ಉದ್ಯಾನವನ (ETV Bharat)

ಮಟಿಲ್ಡಾ ಡಿಸೋಜ ತಮ್ಮ ಮನೆಯ 1500 ಚದರ್​ ಅಡಿ ಜಾಗದಲ್ಲಿ ಮನಿ ಪ್ಲಾಂಟ್, ಲಿಲ್ಲಿ ಹೂ, ದಾಸವಾಳ, ಗುಲಾಬಿ, ಲ್ಯಾವೆಂಡರ್, ಬಿದಿರು, ಹಾವಿನ ಗಿಡ (ಸ್ನೇಕ್ ಪ್ಲಾಂಟ್), ಜೇಡ್ ಸಸ್ಯಗಳು, ಪಿಯೋನಿ, ತುಳಸಿ, ರಬ್ಬರ್ ಪ್ಲಾಂಟ್ ಸೇರಿದಂತೆ ಹಲವು ರೀತಿಯ ಹಸಿರು ಗಿಡಗಳನ್ನು ಬೆಳೆಸಿದ್ದಾರೆ. ಜತೆಗೆ ಮನೆಯ ಹೊರಾಂಗಣದಲ್ಲಿ ಬೇವು, ಮಾವು, ಪಪ್ಪಾಯ, ಡ್ರಾಗನ್ ಫ್ರೂಟ್ ಸೇರಿದಂತೆ ಹಲವು ಹಣ್ಣಿನ ಮರಗಳನ್ನು ಸಹ ಬೆಳೆಸಿದ್ದಾರೆ.

ಮಟಿಲ್ಡಾ ಡಿಸೋಜ ಅವರು ಕಳೆದ ಹತ್ತು ವರ್ಷಗಳಿಂದ ತಮ್ಮ ಮನೆಯಲ್ಲಿ ಗಿಡ ನೆಡುವ ಕೆಲಸವನ್ನು ಮಾಡುತ್ತಿದ್ದಾರೆ. ಅವರು ಮೂಲತಃ ಕೊಡಗಿನವರಾಗಿದ್ದು, ಮಂಗಳೂರು, ಕೇರಳ, ಆಂಧ್ರ, ಹಾಸನ ಹೀಗೆ ಹಲವು ಜಿಲ್ಲೆಗಳಿಂದ ಹೊರಾಂಗಣ ಮತ್ತು ಒಳಾಂಗಣದಲ್ಲಿ ಬೆಳೆಸಬಹುದಾದಂತಹ ಗಿಡಗಳನ್ನು ಬೆಳೆಸಿ ಮಾದರಿಯಾಗಿದ್ದಾರೆ.

ಮಿನಿ ಉದ್ಯಾನವನ (ETV Bharat)

''ಭೂಮಿಯ ಮೇಲೆ ಪ್ರಾಣಿ, ಪಕ್ಷಿ, ಮಾನವ ಸೇರಿದಂತೆ ಪ್ರತಿಯೊಂದು ಜೀವ ಸಂಕುಲವು ಆಹಾರ, ಗಾಳಿ, ನೀರು ಇತರೆ ಅಗತ್ಯತೆಗಳಿಗೆ ಪರಿಸರವನ್ನು ಅವಲಂಬಿಸಿವೆ. ಪ್ರತಿಯೊಂದು ಮನೆಯಲ್ಲಿ ಐದರಿಂದ ಹತ್ತು ಗಿಡಗಳನ್ನು ಬೆಳೆಸಿದರೆ ನಮ್ಮ ಪರಿಸರವನ್ನು ನಾವೇ ಸಂರಕ್ಷಣೆ ಮಾಡಬಹುದು'' ಎಂದು ಡಿಸೋಜಾ ಹೇಳಿದ್ದಾರೆ.

ಮನೆಯ ಮುಂದಿನ ಮೆಟ್ಟಿಲುಗಳಲ್ಲಿ ಹೂವಿನ ಗಿಡ (ETV Bharat)

''ಪರಿಸರ ಎಷ್ಟು ಮುಖ್ಯ ಎನ್ನುವುದನ್ನು ನಾಗರೀಕರು ಮರೆತಿದ್ದಾರೆ. ಇಂದು ಕಾಡು ಇದ್ದಂತಹ ಜಾಗದಲ್ಲಿ ನೆಮ್ಮದಿ ಹುಡುಕಲು ಹೊರಟ ಮಾನವ ಅಲ್ಲೂ ರೆಸಾರ್ಟ್ ಹೆಸರಿನಲ್ಲಿ ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ ನಿರ್ಮಿಸುತ್ತಿದ್ದಾನೆ. ಇಂದಿನ ದಿನಗಳಲ್ಲಿ ಪರಿಸರವನ್ನು ನಾವು ಉಳಿಸಿ ಬೆಳಸಲಿಲ್ಲ ಎಂದರೆ ಮುಂದಿನ ದಿನಗಳಲ್ಲಿ ನಮಗೆ ಪಶ್ಚಾತ್ತಾಪ ಪಡುವುದು ಖಂಡಿತ'' ಎಂಬ ಎಚ್ಚರಿಕೆ ಸಂದೇಶವನ್ನು ಸಹ ರವಾನಿಸಿದ್ದಾರೆ.

ಇದನ್ನೂ ಓದಿ :ಶಾಲೆಯಲ್ಲಿ ಉದ್ಯಾನ ನಿರ್ಮಿಸಿ ಬಾನಾಡಿಗಳ ಬಾಯಾರಿಕೆ ತೀರಿಸುತ್ತಿರುವ ಸರ್ಕಾರಿ ಶಾಲಾ ಶಿಕ್ಷಕಿ - garden at school

ABOUT THE AUTHOR

...view details