ಹುಬ್ಬಳ್ಳಿ (ಧಾರವಾಡ ) :ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ತೀವ್ರಗೊಳಿಸಿದ್ದಾರೆ. ಅಂಜಲಿ ಹಂತಕ ಗಿರೀಶ್ ಕಸ್ಟಡಿ ಅವಧಿ ನಾಳೆಗೆ ಕೊನೆಗೊಳ್ಳಲಿದೆ. ಹೀಗಾಗಿ ಆರೋಪಿಯು ಕೊಲೆಗೆ ಬಳಸಿದ ಚಾಕುವಿಗಾಗಿ ತೀವ್ರ ಶೋಧ ನಡೆಸಿದ್ದು, ಕೊನೆಗೂ ಸಿಐಡಿ ಅಧಿಕಾರಿಗಳಿಗೆ ಚಾಕು ಸಿಕ್ಕಿದೆ.
ದಾವಣಗೆರೆ ತಾಲೂಕಿನ ಮಾಯಕೊಂಡ ಸಮೀಪದ ಬೊಮ್ಮನಹಳ್ಳಿ ಬಳಿ ರೈಲು ಹಳಿಯ ಪಕ್ಕದಲ್ಲಿ ಈ ಚಾಕು ಪತ್ತೆಯಾಗಿದೆ. ಸಿಐಡಿ ಪೊಲೀಸ್ ತಂಡ ಹುಬ್ಬಳ್ಳಿಯಿಂದ ಆರೋಪಿಯೊಂದಿಗೆ ದಾವಣಗೆರೆಗೆ ಬಂದು ಚಾಕುವಿಗಾಗಿ ಹುಡುಕಾಟ ನಡೆಸಿದ್ದು, ರೈಲು ಹಳಿಪಕ್ಕದಲ್ಲಿಯೇ ಚಾಕು ಪತ್ತೆಯಾಗಿದೆ ಎಂದು ರೈಲ್ವೆ ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಆರೋಪಿಯು ರೈಲಿನಲ್ಲಿ ಬರುವಾಗ ಚಿಕ್ಕಜಾಜೂರು-ಮಾಯಕೊಂಡ ಮಧ್ಯೆ ಗದಗ ಜಿಲ್ಲೆಯ ಮಹಿಳೆ ಲಕ್ಷ್ಮಿ ಎಂಬುವವರಿಗೆ ಚಾಕುವಿನಿಂದ ಇರಿದಿದ್ದ. ಬಳಿಕ ಆತ ಚಲಿಸುವ ರೈಲಿನಿಂದ ಕೆಳಗೆ ಜಿಗಿದಿದ್ದ. ನಿನ್ನೆ ಆರೋಪಿಯನ್ನೇ ಕರೆತಂದು ಸ್ಥಳಕ್ಕೆ ಭೇಟಿ ನೀಡಿದ ವೇಳೆ ಹಳಿಯ ಪಕ್ಕದಲ್ಲಿ ಚಾಕು ಪತ್ತೆಯಾಗಿದೆ. ಇದೀಗ ಚಾಕುವನ್ನು ಸಿಐಡಿ ತಂಡ ವಶಕ್ಕೆ ಪಡೆದುಕೊಂಡಿದೆ.
ಕಳೆದ ಏಳು ದಿನಗಳಿಂದ ಚಾಕುವಿಗಾಗಿ ಸಿಐಡಿ ಹುಡುಕಾಟ ನಡೆಸಿತ್ತು. ಅಲ್ಲದೇ ಕೊಲೆಯಾದ ದಿನದಿಂದಲೂ ಬೆಂಡಿಗೇರಿ ಪೊಲೀಸರು ಚಾಕುವಿಗಾಗಿ ತಲಾಷ್ ನಡೆಸಿದ್ದರು. ಆದ್ರೆ ಬೆಂಡಿಗೇರಿ ಪೊಲೀಸರಿಗೂ ಮತ್ತು ಸಿಐಡಿ ಟೀಮ್ಗೂ ಚಾಕು ಸಿಕ್ಕಿರಲಿಲ್ಲ. ಅಲ್ಲದೇ ತನಿಖಾ ಹಾದಿಯನ್ನ ತಪ್ಪಿಸಲು ಚಾಕು ಎಲ್ಲಿ ಎಸೆದಿದ್ದಾನೆ ಎಂಬುದನ್ನು ಆರೋಪಿ ಬಾಯ್ಬಿಟ್ಟಿರಲಿಲ್ಲ.
ಇದರ ಮಧ್ಯೆ ನಿನ್ನೆ ಚಾಕು ಪತ್ತೆಯಾಗಿದ್ದು, ಅಂಜಲಿ ಅಂಬಿಗೇರ ಹತ್ಯೆ ಹಾಗೂ ರೈಲಿನಲ್ಲಿನ ಮಹಿಳೆಗೆ ಇರಿದ ಚಾಕು ಇದೆನಾ ಅಥವಾ ಇದು ಬೇರೆ ಕೃತ್ಯಕ್ಕೆ ಬಳಸಿದ ಚಾಕುನಾ? ಎಂಬ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ್ದು, ಚಾಕುವನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಸಾಧ್ಯತೆ ಹೆಚ್ಚಿದೆ.
ನಾಳೆ ಆರೋಪಿ ಕಸ್ಟಡಿ ಅವಧಿಪೂರ್ಣಗೊಳ್ಳಲಿರುವ ಕಾರಣ ಇಂದು ಆರೋಪಿ ಗಿರೀಶ್‌ನನ್ನು ಆತ ಕೆಲಸ ಮಾಡುತ್ತಿದ್ದ ಮೈಸೂರಿನ ಹೋಟೆಲ್ಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಯೂ ಕೂಡ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
ಇದನ್ನೂ ಓದಿ :ನೇಹಾ, ಅಂಜಲಿ ಕೊಲೆ ಪ್ರಕರಣ : ರೌಡಿಶೀಟರ್ ಮನೆಗಳ ಮೇಲೆ ಪೊಲೀಸರ ದಿಢೀರ್ ದಾಳಿ - Rowdies Houses Raid