ಬೆಳಗಾವಿ:ಒಂದೇ ಬೆಳೆಗೆ ಅಂಟಿಕೊಂಡು ಕೂರುವ ರೈತರ ನಡುವೆ, ಇಲ್ಲೊಂದು ರೈತ ಕುಟುಂಬ ಮಿಶ್ರ ಬೆಳೆ ಬೆಳೆದು ಆರ್ಥಿಕ ಅಭಿವೃದ್ಧಿ ಕಾಣುತ್ತಿದೆ. ಅಲ್ಲದೇ ಕೃಷಿಯಲ್ಲಿ ಖುಷಿ ಕಾಣಬಹುದು ಎಂಬುದನ್ನು ಸಾಧಿಸಿ ತೋರಿಸಿದೆ. ಇವರ ಶಿಸ್ತಿನ ಕೃಷಿ ಕಾಯಕ ಇತರರಿಗೂ ಮಾದರಿಯಾಗಿದೆ.
ಹೌದು, ಕಬ್ಬಿನ ಬೆಳೆ, ಕಬ್ಬಿನ ನಡುವೆ ಕ್ಯಾಬೇಜ್, ಬೀನ್ಸ್, ಕೊತ್ತಂಬರಿ, ಮೆಂತ್ಯೆ, ಮೂಲಂಗಿ, ನವಲಕೋಲ್, ಮೆಣಸಿನಕಾಯಿ, ಬೆಂಡಿಕಾಯಿ.. ಹೀಗೆ ಆರೇಳು ಬೆಳೆಗಳನ್ನು ಸಮೃದ್ಧವಾಗಿ ಬೆಳೆದವರು ಬೆಳಗಾವಿ ತಾಲೂಕಿನ ದೇವಗಿರಿ ಗ್ರಾಮದ ಕವಿತಾ- ಬಾಬು ಚೌಗುಲೆ ದಂಪತಿ. ತಮ್ಮ 5 ಎಕರೆ ಜಮೀನು ಪೈಕಿ 2 ಎಕರೆಯಲ್ಲಿ ಈ ರೀತಿ ಮಿಶ್ರ ಬೆಳೆ ಪ್ರಯೋಗಿಸಿ ಸೈ ಯಶಸ್ವಿಯಾಗಿದ್ದಾರೆ.
ಸಾಮಾನ್ಯವಾಗಿ ರೈತರು ಕಬ್ಬಿನ ಬೆಳೆ ನಡುವೆ ಬೇರೆ ಬೆಳೆ ಬೆಳೆಯುವುದು ವಿರಳ. ಆದರೆ, ರೈತ ಬಾಬು ಚೌಗುಲೆ ಅವರು ಕಬ್ಬಿನ ಸಾಲುಗಳ ನಡುವಿನ ಜಾಗ ಬಳಸಿಕೊಂಡು. ಈ ರೀತಿ ತರಕಾರಿ ಬೆಳೆದಿದ್ದಾರೆ. ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಇವರು, ತಮ್ಮ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿದ್ದಾರೆ. ಬೋರ್ವೆಲ್ ಮತ್ತು ಬಾವಿ ಮೂಲಕ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಬಾಬು ಚೌಗುಲೆ ಅವರಿಗೆ ಪತ್ನಿ ಕವಿತಾ ಮತ್ತು ಪುತ್ರ ಲಖನ್ ಕೂಡ ಸಾಥ್ ಕೊಟ್ಟಿದ್ದು, ಮೂವರು ತಮ್ಮನ್ನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಹೈನುಗಾರಿಕೆಯನ್ನೂ ಮಾಡ್ತಿರೋ ಚೌಗುಲೆ ಕುಟುಂಬ, ತಮ್ಮ ಹೊಲದ ಬದುವಿನಲ್ಲಿ ಪಪ್ಪಾಯಿ, ತೆಂಗಿನ ಮರಗಳನ್ನು ಸಹ ಬೆಳೆದಿದೆ. ಇನ್ನುಳಿದ ಮೂರು ಎಕರೆಯಲ್ಲಿ ಕಬ್ಬು, ಕ್ಯಾಬೇಜ್ ಸೇರಿ ಮತ್ತಿತರ ಬೆಳೆ ಬೆಳೆದಿದ್ದಾರೆ. ಒಟ್ಟಾರೆ ಜಮೀನಿನಲ್ಲಿ ಸ್ವಲ್ಪವೂ ಜಾಗ ವ್ಯರ್ಥ ಆಗದಂತೆ ಬೆಳೆ ಬೆಳೆದು ವರ್ಷಕ್ಕೆ 8 ಲಕ್ಷ ರೂಪಾಯಿಗೂ ಅಧಿಕ ಆದಾಯ ಗಳಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.