ಕರ್ನಾಟಕ

karnataka

ETV Bharat / state

20 ವರ್ಷಗಳಿಂದ ಭಕ್ತರಿಗೆ ಅನ್ನಪ್ರಸಾದ ಬಡಿಸುತ್ತಾ ಖುಷಿ ಕಾಣುವ ಶ್ರೀಕೃಷ್ಣ ಭಕ್ತ; ಅಷ್ಟಮಠಗಳ ಶ್ರೀಗಳಿಗೂ ಪ್ರಿಯ ಈ ವ್ಯಕ್ತಿ - SRI KRISHNA DEVOTEE

ಉಡುಪಿ ಶ್ರೀಕೃಷ್ಣ ಮಠದಲ್ಲಿ ಕಳೆದ 20 ವರ್ಷಗಳಿಂದ ಭಕ್ತರಿಗೆ ಊಟ ಬಡಿಸುತ್ತಾ ಭಗವಂತನ ಸೇವೆಯಲ್ಲಿ ತೊಡಗಿರುವ ಪ್ರಭಾಕರ ಉಳ್ಳೂರು ಎಂಬವರ ಕುರಿತೊಂದು ವಿಶೇಷ ವರದಿ.

Prabhakar Ullur
ಭಕ್ತರಿಗೆ ಅನ್ನಪ್ರಸಾದ ಉಣಬಡಿಸುತ್ತಿರುತ್ತಿರುವ ಭಕ್ತ ಪ್ರಭಾಕರ ಉಳ್ಳೂರು (ETV Bharat)

By ETV Bharat Karnataka Team

Published : Dec 5, 2024, 4:16 PM IST

Updated : Dec 5, 2024, 4:48 PM IST

ಉಡುಪಿ:ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆ ಮಾತಿದೆ. ಅದರಂತೆ, ಉಡುಪಿ ಶ್ರೀಕೃಷ್ಣ ಮಠದಲ್ಲಿ ಇಲ್ಲೊಬ್ಬ ವ್ಯಕ್ತಿಯ ಸೇವೆಗೆ ಎಲ್ಲರೂ ಅಚ್ಚರಿಪಡಬೇಕು. ಅಂದಹಾಗೆ ಇವರ ಹೆಸರು ಪ್ರಭಾಕರ ಉಳ್ಳೂರು. ವಯಸ್ಸು 55 ವರ್ಷ. ಕಳೆದ 20 ವರ್ಷಗಳಿಂದಲೂ ಶ್ರೀಕೃಷ್ಣನ ಸೇವೆಯಲ್ಲಿಯೇ ನಿರತರಾಗಿದ್ದಾರೆ. ಸದಾ ಶ್ರೀಕೃಷ್ಣ, ಶ್ರೀಕೃಷ್ಣ ಎನ್ನುತ್ತಿರುವ ಇವರು ಅಷ್ಟಮಠಗಳ ಸ್ವಾಮೀಜಿಗಳಿಗೂ ಪ್ರಿಯರಾದ ವ್ಯಕ್ತಿ. ದೇವರ ದರ್ಶನದ ಬಳಿಕ ಭಕ್ತರು, ಪ್ರವಾಸಿಗರು ಅನ್ನಬ್ರಹ್ಮನಲ್ಲಿಗೆ ತೆರಳಿದರೆ ಇವರನ್ನು ನೋಡಲು ಸಾಧ್ಯ.

ಶ್ರೀಕೃಷ್ಣನಿಗೆ ಹಾಲು ಅಭಿಷೇಕ ಬಹಳ ಪ್ರಮುಖವಾದದ್ದು. ಇದಕ್ಕಾಗಿ ಪ್ರಭಾಕರ ಉಳ್ಳೂರು ಅವರು ಅಂದಿನ ದಿನ ಹಾಗೂ ಉಳಿದ ದಿನಗಳಲ್ಲಿ ಮುಂಜಾನೆ 3 ಗಂಟೆಗೆ ಎದ್ದು ಮಠದ ಪ್ರತಿಯೊಂದು ಗೋವುಗಳ ಹಾಲು ಕರೆಯುತ್ತಾರೆ. ಅಲ್ಲದೇ, ಅಭಿಷೇಕಕ್ಕೆ ಸಿದ್ಧತೆ ಮಾಡಿಕೊಟ್ಟು ಪೂಜೆಯಲ್ಲಿಯೂ ಪಾಲ್ಗೊಳ್ಳುತ್ತಾರೆ.

20 ವರ್ಷಗಳಿಂದ ಭಕ್ತರಿಗೆ ಅನ್ನಪ್ರಸಾದ ಬಡಿಸುತ್ತಾ ಖುಷಿ ಕಾಣುವ ಶ್ರೀಕೃಷ್ಣ ಭಕ್ತ. (ETV Bharat)

''ಮುಂಜಾನೆ 3 ಗಂಟೆಗೆ ಎದ್ದು ಮಠದ ಗೋವುಗಳ ಹಾಲು ಕರೆದು ಶ್ರೀಕೃಷ್ಣನ ಅಭಿಷೇಕಕ್ಕೆ ಸಿದ್ಧತೆ ಮಾಡಿಕೊಡುತ್ತೇನೆ. ದಿನನಿತ್ಯ ಬಂದಂತಹ ಭಕ್ತಾಧಿಗಳಿಗೆ ಬೆಳಿಗ್ಗೆ 8 ಗಂಟೆಗೆ ತಿಂಡಿ ನೀಡುವುದು ಹಾಗೂ ಮಧ್ಯಾಹ್ನ, ಸಂಜೆ, ರಾತ್ರಿ ವೇಳೆಯಲ್ಲಿ ಅನ್ನಪ್ರಸಾದ ಬಡಿಸುವ ಕಾರ್ಯದಲ್ಲಿ ತೊಡಗಿಕೊಳ್ಳುತ್ತೇನೆ. ಏಕಾದಶಿಯಾಗಲಿ, ಮಠದವರು ಯಾರೇ ಕೆಲಸಕ್ಕೆ ಕರೆದರೂ ನಾನು ಹೋಗುತ್ತೇನೆ. ಅಷ್ಟಮಠಗಳ ಸ್ವಾಮೀಜಿಯವರಿಗೆ ನನ್ನ ಮೇಲೆ ಪ್ರೀತಿ, ವಿಶ್ವಾಸವಿದೆ'' ಎಂದು ಪ್ರಭಾಕರ ಉಳ್ಳೂರು ಹೇಳಿದರು.

ಭಕ್ತರಿಗೆ ಅನ್ನಪ್ರಸಾದ ಬಡಿಸುತ್ತಿರುವ ಪ್ರಭಾಕರ ಉಳ್ಳೂರು (ETV Bharat)

ಇವರ ಸ್ನೇಹಿತ ಜಿ.ರಾಘವೇಂದ್ರ ಆಚಾರ್ಯ ಪ್ರತಿಕ್ರಿಯಿಸಿ, ''ಪ್ರಭಾಕರ ಉಳ್ಳೂರು ಅವರು ನನಗೆ ಪರಿಚಯವಾಗಿ 8-10 ವರ್ಷಗಳಾಗಿದೆ. ಸುಮಾರು 22 ವರ್ಷದಿಂದ ಇಲ್ಲಿಯೇ ಇದ್ದಾರೆ. ಭಕ್ತರಿಗೆ ಬೆಳಗ್ಗಿನ ಉಪಹಾರ, ಸಂಜೆ ಹಾಗೂ ರಾತ್ರಿ ಊಟ ಬಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. 55 ವರ್ಷಗಳಾದರೂ ತುಂಬಾ ಆ್ಯಕ್ಟೀವ್ ಆಗಿ ಕೆಲಸ ಮಾಡುತ್ತಿರುತ್ತಾರೆ. ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿಯಲ್ಲಿ ವೇಷ ಧರಿಸಿ, ಜನರು ನೀಡಿದ ಹಣವನ್ನು ಅನಾಥ ಮಕ್ಕಳಿಗೆ, ಗೋ ಸೇವೆಗೆ ನೀಡುತ್ತಾರೆ'' ಎಂದು ತಿಳಿಸಿದರು.

ಇದನ್ನೂ ಓದಿ:ಉಡುಪಿ: 53 ದಿನಗಳಲ್ಲಿ 20 ರಾಜ್ಯ ಪ್ರವಾಸ ಮಾಡಿದ ಯುವಕರು, ಕರಾವಳಿ ಧಾರ್ಮಿಕ ಮಹತ್ವದ ಕುರಿತು ಪ್ರಚಾರ

Last Updated : Dec 5, 2024, 4:48 PM IST

ABOUT THE AUTHOR

...view details