ಬೆಂಗಳೂರು:ಭಾರತ ಗಣರಾಜ್ಯದಲ್ಲಿ ಮೂರು ರೀತಿಯ ಪಾಸ್‌ಪೋರ್ಟ್ ವಿತರಣಾ ವ್ಯವಸ್ಥೆ ಇದೆ. ದೇಶದ ನಾಗರಿಕರಿಗೆ ಕಡುನೀಲಿ ಬಣ್ಣದ ಪಾಸ್‌ಪೋರ್ಟ್ ನೀಡಲಾಗುತ್ತದೆ. ಇದು 36 ಪುಟಗಳು ಹಾಗು 60 ಪುಟಗಳಿರುವ ಪಾಸ್‌ಪೋರ್ಟ್. ಇದನ್ನು 10 ವರ್ಷದ ಅವಧಿಗೆ ಕೇಂದ್ರ ಸರ್ಕಾರ ನೀಡುತ್ತದೆ.
ದೇಶದ ಉನ್ನತ ಅಧಿಕಾರಿಗಳಿಗೆ ಬಿಳಿ ಬಣ್ಣದ ಪಾಸ್‌ಪೋರ್ಟ್ ನೀಡಲಾಗುತ್ತದೆ. ಮೂರನೆಯದಾಗಿ, ಈಗ ಹೆಚ್ಚು ಚರ್ಚೆಯಲ್ಲಿರುವ ರಾಜತಾಂತ್ರಿಕ ಪಾಸ್‌ಪೋರ್ಟ್. ಇದು ಕೆಂಗಂದು (ಮರೂನ್) ಬಣ್ಣದಲ್ಲಿದೆ.
ರಾಜತಾಂತ್ರಿಕ ಅಧಿಕಾರಿಗಳು ಮತ್ತು ದೇಶವನ್ನು ಪ್ರತಿನಿಧಿಸುವ ವ್ಯಕ್ತಿಗಳಿಗೆ ಈ ಪಾಸ್‌ಪೋರ್ಟ್ ಕೊಡಲಾಗುತ್ತದೆ. 28 ಪುಟಗಳಿರುವ ಈ ಪಾಸ್‌ಪೋರ್ಟ್ ಅನ್ನು ಗರಿಷ್ಠ 5 ವರ್ಷಗಳ ಅವಧಿಗೆ ಸೀಮಿತವಾಗಿ ವಿತರಿಸಲಾಗುತ್ತದೆ. ಇದಕ್ಕೆ ಟೈಪ್ ಡಿ ಪಾಸ್‌ಪೋರ್ಟ್ ಎಂಬ ಹೆಸರೂ ಇದೆ.
ಭಾರತೀಯ ವಿದೇಶಾಂಗ ಸೇವೆಗಳ ಎ ಬ್ರ್ಯಾಂಚ್‌ನಲ್ಲಿ ಕೆಲಸ ಮಾಡುವ ಅಧಿಕಾರಿಗಳು, ಬಿ ಬ್ರ್ಯಾಂಚ್‌ನಲ್ಲಿ ಕೆಲಸ ಮಾಡುವ ಆಯ್ದ ಅಧಿಕಾರಿಗಳು, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಮತ್ತು ಅಧಿಕೃತ ಉದ್ದೇಶಗಳಿಗಾಗಿ ವಿದೇಶಕ್ಕೆ ಭೇಟಿ ನೀಡುವ ಸಾಂವಿಧಾನಿಕ ಹುದ್ದೆಯ ವ್ಯಕ್ತಿಗಳು, ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಕೆಲಸ ಮಾಡುವ ಅಧಿಕಾರಿಗಳ ಕುಟುಂಬಸ್ಥರು, ರಾಜತಾಂತ್ರಿಕ ಸ್ಥಾನಮಾನ ಹೊಂದಿರುವ ವ್ಯಕ್ತಿಗಳು, ವಿದೇಶಿ ಪ್ರವಾಸಗಳಿಗಾಗಿ ಭಾರತ ಸರ್ಕಾರದಿಂದ ನೇಮಕಗೊಂಡ ಅಧಿಕಾರಿಗಳಿಗೆ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ನೀಡಲಾಗುತ್ತದೆ.
ಭಾರತವನ್ನು ಪ್ರತಿನಿಧಿಸುವ ವ್ಯಕ್ತಿಗಳು ಟೈಪ್ ಡಿ ಪಾಸ್ ಪೋರ್ಟ್ ಪಡೆಯಲು ಅರ್ಹರು. ಅದರಂತೆ ಸಂವಿಧಾನಬದ್ಧವಾಗಿ ಜನತೆಯಿಂದ ಆಯ್ಕೆಯಾಗುವ ಜನಪ್ರತಿನಿಧಿಗಳು ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ಪಡೆಯಬಹುದು. ಇದರಂತೆ ಹಾಸನ ಸಂಸತ್ ಸದಸ್ಯರಾಗಿರುವ ಪ್ರಜ್ವಲ್ ರೇವಣ್ಣ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ಪಡೆದುಕೊಂಡಿದ್ದಾರೆ.
ರಾಜತಾಂತ್ರಿಕ ಪಾಸ್‌ಪೋರ್ಟ್ ಅವಧಿ ಐದು ವರ್ಷ ಹಾಗು ಅದಕ್ಕಿಂತ ಕಡಿಮೆ ಅವಧಿಯದ್ದು. ಹಾಗಾಗಿ ಈ ಪಾಸ್ಪೋರ್ಟ್ನ ಅವಧಿ ಶೀಘ್ರದಲ್ಲೇ ಮುಗಿಯುತ್ತದೆ. ಐದು ವರ್ಷದ ಸಂಸತ್ ಸದಸ್ಯ ಸ್ಥಾನದ ಅವಧಿ ಮುಗಿಯುವ ಸಮಯಕ್ಕೆ ಇವರ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ಅವಧಿಯೂ ಮುಕ್ತಾಯವಾಗುತ್ತದೆ. ನಂತರ ಸಂಸದರಾಗಿ ಮರು ಆಯ್ಕೆಯಾದಲ್ಲಿ ಮಾತ್ರ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ನವೀಕರಿಸಿಕೊಳ್ಳಬಹುದು. ಇಲ್ಲದೇ ಇದ್ದಲ್ಲಿ ಆ ಪಾಸ್‌ಪೋರ್ಟ್ ಅವಧಿ ಕೊನೆಗೊಳ್ಳುತ್ತದೆ.
2019ರ ಮೇ 30ರಂದು ಪ್ರಧಾನಿ ಮೋದಿ ಎರಡನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಆ ಮೂಲಕ 17ನೇ ಸಂಸತ್ ರಚನೆಯಾಯಿತು. ಈ ಸಂಸತ್ನ ಅವಧಿಯವರೆಗೂ ಪ್ರಜ್ವಲ್ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ಹೊಂದಬಹುದಾಗಿದೆ. ಅಂದರೆ ಈಗ ದೇಶದಲ್ಲಿ 18ನೇ ಸಂಸತ್ ರಚನೆಗಾಗಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ಜೂನ್ 4ರಂದು ಫಲಿತಾಂಶ ಹೊರಬೀಳಲಿದೆ. ಅಂದು ಸಹಜವಾಗಿಯೇ 17ನೇ ಸಂಸತ್ ನ ಸಂಸದ ಸ್ಥಾನವನ್ನು ಪ್ರಜ್ವಲ್ ರೇವಣ್ಣ ಕಳೆದುಕೊಳ್ಳಲಿದ್ದಾರೆ. ಅದರ ಜೊತೆಯಲ್ಲೇ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ಅವಧಿಯೂ ಮುಕ್ತಾಯವಾಗಲಿದೆ.
ಸಂಸತ್ ಸದಸ್ಯ ಸ್ಥಾನದ ಅವಧಿ ನೋಡಿಯೇ ಗರಿಷ್ಠ 5 ವರ್ಷ ಅಥವಾ ಅದಕ್ಕೂ ಕಡಿಮೆ ಅವಧಿ ನೀಡುವುದು ಈ ಕಾರಣಕ್ಕಾಗಿ. ಅದರಂತೆ ಪ್ರಜ್ವಲ್ ರೇವಣ್ಣ ಚುನಾವಣೆಯಲ್ಲಿ ಗೆದ್ದರೂ ಸಹ ಅವರ ಈಗಿರುವ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ಅವಧಿ ಮುಕ್ತಾಯಗೊಂಡು ಅವರು ದೇಶಕ್ಕೆ ವಾಪಸಾಗಲೇಬೇಕು. ಎಸ್ಐಟಿ ನೋಟಿಸ್ನಂತೆ ಖುದ್ದು ಹಾಜರಾಗದೆ ತುಂಬಾ ಸಮಯ ವಿದೇಶದಲ್ಲಿ ಇರಲು ಸಾಧ್ಯವಿಲ್ಲ. ಹೆಚ್ಚೆಂದರೆ ಇನ್ನೊಂದು ತಿಂಗಳು ಮಾತ್ರವೇ ಅವರು ವಿದೇಶದಲ್ಲಿರಬಹುದು. ಪಾಸ್‌ಪೋರ್ಟ್ ಅವಧಿ ಮುಗಿಯುತ್ತಿದ್ದಂತೆ ಅವರು ವಾಪಸ್ ಬರಲೇಬೇಕು. ಇಲ್ಲದೇ ಇದ್ದಲ್ಲಿ ಕಾನೂನು ರೀತಿ ಅವರನ್ನು ಆ ದೇಶವೇ ವಾಪಸ್ ಕಳುಹಿಸಲಿದೆ.
ಇನ್ನು ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ಇರುವ ಕಾರಣ ಜರ್ಮನ್ ದೇಶದಲ್ಲಿ ಪ್ರಜ್ವಲ್ ರೇವಣ್ಣ ಬಂಧನ ಸಾಧ್ಯವಿಲ್ಲ. ಆದರೆ ಕೇಂದ್ರ ಸರ್ಕಾರ ವಿದೇಶಾಂಗ ವ್ಯವಹಾರಗಳ ಇಲಾಖೆ ಮೂಲಕ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ರದ್ದುಪಡಿಸಿ ಪ್ರಜ್ವಲ್ ಬಂಧಿಸಿ ಹಸ್ತಾಂತರ ಮಾಡುವಂತೆ ಜರ್ಮನ್ ರಾಯಭಾರ ಕಚೇರಿಗೆ ಸೂಚಿಸಿದರೆ ಆಗ ರಾಜತಾಂತ್ರಿಕ ನಿಯಮಾವಳಿಗಳಂತೆ ಬಂಧಿಸಿ ಭಾರತಕ್ಕೆ ಹಸ್ತಾಂತರ ಮಾಡಲಾಗುತ್ತದೆ.
ಇದೇ ಅವಕಾಶವನ್ನು ರಾಜ್ಯ ಸರ್ಕಾರ ಬಯಸಿದೆ. ಕೇಂದ್ರಕ್ಕೆ ಪತ್ರವನ್ನೂ ಬರೆದು ಡಿಪ್ಲೊಮ್ಯಾಟಿಕ್ ಪಾಸ್ ಪೋರ್ಟ್ ರದ್ದತಿಗೆ ಮನವಿ ಸಲ್ಲಿಸಿದೆ. ಆದರೆ ಸದ್ಯ ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ಇನ್ನೊಂದು ತಿಂಗಳಿನಲ್ಲಿ ಫಲಿತಾಂಶವೂ ಬರಲಿದೆ. ಆಗ ಸಹಜವಾಗಿಯೇ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ಅವಧಿ ಮುಕ್ತಾಯವಾಗುವ ಹಿನ್ನೆಲೆಯಲ್ಲಿ ಕೇಂದ್ರ ಈಗ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ರದ್ದುಪಡಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ಹೊಂದಿರುವ ಸವಲತ್ತುಗಳೇನು?:ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿರುವವರು ಭಾರತವನ್ನು ಪ್ರತಿನಿಧಿಸುವ ಗುರುತು ಹೊಂದಿರುತ್ತಾರೆ. ಹಾಗಾಗಿ ವಿಶೇಷ ಸವಲತ್ತು ಮತ್ತು ಗೌರವ ಪಡೆಯುತ್ತಾರೆ. ಯಾವುದೇ ದೇಶದಲ್ಲಿದ್ದರೂ ಆ ಆತಿಥೇಯ ದೇಶದಲ್ಲಿ ಬಂಧನ ಮತ್ತು ಸ್ಥಳೀಯ ಕಾನೂನು ಪ್ರಕ್ರಿಯೆಗಳಿಂದ ವಿನಾಯಿತಿ ಸಿಗುತ್ತದೆ. ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿದವರಿಗೆ ವಿಶೇಷ ವೀಸಾ ಸವಲತ್ತುಗಳು ಸಿಗುತ್ತವೆ. ಹಲವು ದೇಶಗಳು ವೇಗವಾಗಿ ವೀಸಾ ವಿತರಣೆ ಮಾಡುತ್ತದೆ ಮತ್ತು ವೀಸಾ ಪ್ರಕ್ರಿಯೆ ಸರಳವಾಗಿರುತ್ತದೆ. ಕೆಲವು ದೇಶಗಳಿಗೆ ವೀಸಾ ವಿನಾಯಿತಿಯೂ ಸಿಗಲಿದೆ.
ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿದವರು ಯಾವುದೇ ದೇಶದಲ್ಲಿ ಭಾರತೀಯ ರಾಯಭಾರ ಕಚೇರಿಗಳು, ದೂತಾವಾಸಗಳ ಸಂಪರ್ಕಿಸಲು ಸಹಕಾರಿಯಾಗಿವೆ. ವಿಮಾನ ನಿಲ್ದಾಣಗಳಲ್ಲಿ ಮತ್ತು ವಲಸೆ ಪ್ರಕ್ರಿಯೆಗಳಲ್ಲಿ ಮೊದಲ ಆದ್ಯತೆ ಸಿಗುತ್ತದೆ. ಈ ಪಾಸ್‌ಪೋರ್ಟ್ ಹೊಂದಿದವರಿಗೆ ಪ್ರತ್ಯೇಕ ಕೌಂಟರ್ ಇರುತ್ತದೆ. ಒಂದು ರೀತಿಯಲ್ಲಿ ವಿಶೇಷ ಸ್ಥಾನಮಾನಗಳು ಇವರಿಗೆ ಲಭ್ಯವಾಗಲಿವೆ. ಈ ಎಲ್ಲ ಸವಲತ್ತುಗಳನ್ನು ಪ್ರಜ್ವಲ್ ರೇವಣ್ಣ ಹೊಂದಿದ್ದಾರೆ.
ಇದನ್ನೂ ಓದಿ:ನಿರೀಕ್ಷಣಾ ಜಾಮೀನು ಅರ್ಜಿ ಹಿಂಪಡೆದ ಹೆಚ್ ಡಿ ರೇವಣ್ಣ - HD Revanna Case