ರಾಮನಗರ:ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ಸ್ವಕ್ಷೇತ್ರ ಕನಕಪುರ ತಾಲೂಕು ಕಚೇರಿಯಲ್ಲಿ ಚುನಾವಣಾ ಶಾಖಾ ಸಿಬ್ಬಂದಿಯೊಬ್ಬರ ಶವ ಪತ್ತೆಯಾಗಿದೆ. ಕನಕಪುರ ತಾಲೂಕು ಕಚೇರಿಯ ಚುನಾವಣಾ ಶಾಖೆ ಕೊಠಡಿಯಲ್ಲಿ ಶಿರಸ್ತೇದಾರ್ ಸುರೇಶ್ 45 ವರ್ಷ ಅವರೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಇನ್ನು ನಿಖರ ಕಾರಣ ಏನೆಂಬುದು ತಿಳಿದಿಲ್ಲ. ಶವ ಪತ್ತೆಯಾದ ಸ್ಥಳಕ್ಕೆ ಕನಕಪುರ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನಾ ಸ್ಥಳಕ್ಕೆ ರಾಮನಗರ ಎಸ್. ಪಿ. ಕಾರ್ತಿಕ್ ರೆಡ್ಡಿ ಹಾಗೂ ಕನಕಪುರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದರು. ಈ ವೇಳೆ, ಡೆತ್ ನೋಟ್ ಸಿಕ್ಕಿದ್ದು, ಅದನ್ನು ಕೂಡ ಪರಿಶೀಲನೆ ನಡೆಸಲಾಗುತ್ತಿದೆ. ಇದುವರೆಗೂ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕನಕಪುರ ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇತ್ತೀಚಿನ ಪ್ರಕರಣ, ಕಂಪ್ಯೂಟರ್ ಅಪರೇಟರ್ ಆತ್ಮಹತ್ಯೆ(ಮೈಸೂರು): ಡೆತ್ ನೋಟ್ ಬರೆದಿಟ್ಟು ಕಂಪ್ಯೂಟರ್ ಆಪರೇಟರ್ವೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯಲ್ಲಿ ಇತ್ತೀಚೆಗೆ ನಡೆದಿತ್ತು. ಪರಮೇಶ್ವರ್ ಆತ್ಮಹತ್ಯೆ ಶರಣಾಗಿದ್ದ ಕಂಪ್ಯೂಟರ್ ಆಪರೇಟರ್. ಕಳೆದ 20 ವರ್ಷಗಳಿಂದ ಹುಲ್ಲಹಳ್ಳಿ ಹೋಬಳಿಯ ನಾಡ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಹಂಗಾಮಿ ನೌಕರನಾಗಿ ಕೆಲಸ ಮಾಡುತ್ತಿದ್ದರು.
ವಿಕಲಚೇತನರಾಗಿದ್ದ ಪರಮೇಶ್ವರ್ (42) ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಕ್ಷಣ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆ ಅವಶ್ಯ ಇದ್ದುದರಿಂದ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು ಎಂದು ಕುಟುಂಬಸ್ಥರು ಮಾಹಿತಿ ನೀಡಿದರು. ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿತ್ತು.
ಇತ್ತೀಚೆಗೆ ಎಎಸ್ಐ ಆತ್ಮಹತ್ಯೆ(ಹುಬ್ಬಳ್ಳಿ):ಎಎಸ್ಐ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಕುಂದಗೋಳ ತಾಲೂಕಿನ ಗುಡಿಗೇರಿಯಲ್ಲಿ ಇತ್ತೀಚಿಗೆ ನಡೆದಿತ್ತು. ಗುಡಗೇರಿ ಪೊಲೀಸ್ ಠಾಣೆಯ ಎಎಸ್ಐ ಬಸವರಾಜ ಶಾಂತವೀರಪ್ಪ ಪಾಯಣ್ಣವರ (54) ಆತ್ಮಹತ್ಯೆಗೆ ಶರಣಾಗಿದ್ದ ಎಎಸ್ಐ. ರಾತ್ರಿ ಪಾಳಿ ಕೆಲಸ ಮುಗಿಸಿ ವಸತಿ ಗೃಹಕ್ಕೆ ಆಗಮಿಸಿದ್ದ ಬಸವರಾಜ, ವಸತಿ ಗೃಹದ ಆವರಣದಲ್ಲಿ ದೇವಸ್ಥಾನದ ಬಳಿ ಮಲಗಿದ್ದರು. ಕುಟುಂಬಸ್ಥರು ಊಟಕ್ಕೆ ಎಬ್ಬಿಸಲು ಹೋದಾಗ ಅವರು ಎಳಲಿಲ್ಲ. ತಕ್ಷಣ ಕುಟುಂಬಸ್ಥರು ಅವರನ್ನು ಲಕ್ಷೇಶ್ವರ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಷ್ಟೊತ್ತಿಗಾಗಲೇ ಬಸವರಾಜ ಮೃತಪಟ್ಟಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದರು.
ಎಎಸ್‌ಐ ಬಸವರಾಜ ಆತ್ಮಹತ್ಯೆ ಮಾಡಿಕೊಂಡಿರುವುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದಿತ್ತು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿರಲಿಲ್ಲ. ಮೃತ ಎಎಸ್ಐ ಕೆಲ ದಿನಗಳಿಂದ ಕಾಲುನೋವಿನಿಂದ ಬಳಲುತ್ತಿದ್ದರು ಎನ್ನಲಾಗಿತ್ತು. ಈ ಅನಾರೋಗ್ಯವೇ ಆತ್ಮಹತ್ಯೆಗೆ ಕಾರಣವಿರಬಹುದೆಂಬ ಅನುಮಾನ ವ್ಯಕ್ತವಾಗಿತ್ತು. ಮೃತ ಬಸವರಾಜ ಮೂಲತಃ ಗದಗ ಜಿಲ್ಲೆಯ ಗಜೇಂದ್ರಗಡ ಸಮೀಪದ ಶಾಂತಗಿರಿ ಗ್ರಾಮದವರು. ಅವರಿಗೆ ಪತ್ನಿ ಮತ್ತು ಮೂವರು ಮಕ್ಕಳು ಇದ್ದಾರೆ. ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ:ಆನೇಕಲ್: ಬಿಬಿಎ ವಿದ್ಯಾರ್ಥಿ ಆತ್ಮಹತ್ಯೆ, ದೂರು ದಾಖಲು