ಕರ್ನಾಟಕ

karnataka

ETV Bharat / state

ದಂಪತಿ ಅನ್ಯೋನ್ಯತೆಯನ್ನು ಒಂದು ಛಾಯಾಚಿತ್ರದಿಂದ ನಿರ್ಧರಿಸಲಾಗದು: ಹೈಕೋರ್ಟ್ - High Court - HIGH COURT

ಒಂದು ಛಾಯಾಚಿತ್ರದ ಆಧಾರದ ಮೇಲೆ ದಂಪತಿಯ ನಡುವಿನ ಅನ್ಯೋನ್ಯತೆ ನಿರ್ಧರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಹೈಕೋರ್ಟ್
ಹೈಕೋರ್ಟ್ (ETV Bharat)

By ETV Bharat Karnataka Team

Published : May 21, 2024, 4:46 PM IST

ಬೆಂಗಳೂರು:ದಂಪತಿಯ ನಡುವಿನ ಅನ್ಯೋನ್ಯತೆಯನ್ನು ಒಂದು ಛಾಯಾಚಿತ್ರದ ಆಧಾರದ ಮೇಲೆ ನಿರ್ಧರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ತುಮಕೂರಿನ ಮಹಿಳೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನು ಸಿವರಾಮನ್ ಮತ್ತು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ವಿಚ್ಛೇದನ ಮಂಜೂರು ಮಾಡಿ ಆದೇಶಿಸಿದೆ.

ದಂಪತಿ ವಿವಾಹವೊಂದರಲ್ಲಿ ಭಾಗಿಯಾಗಿ ಸಂತೋಷದಿಂದ ಛಾಯಚಿತ್ರಕ್ಕೆ ಪೋಸ್​ ನೀಡಿದ್ದಾರೆ. ಅದರ, ಆಧಾರದ ಮೇಲೆ ದಂಪತಿ ನಡುವೆ ಎಲ್ಲವೂ ಸರಿಯಾಗಿದೆ ಎಂದು ಅರ್ಥವಲ್ಲ. ಇದೇ ಆಧಾರದಲ್ಲಿ ಇಬ್ಬರ ನಡುವಿನ ಸಂಬಂಧದ ಕುರಿತು ಸ್ಪಷ್ಟ ಚಿತ್ರಣ ನೀಡುವುದಿಲ್ಲ. ಅಲ್ಲದೇ, ಪತ್ನಿಯ ವಿರುದ್ಧ ಅಕ್ರಮ ಸಂಬಂಧವಿದೆ ಎಂಬುದಾಗಿ ಪತಿ ಆರೋಪಿಸಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳನ್ನು ಒದಗಿಸಲು ವಿಫಲರಾಗಿದ್ದಾರೆ. ಆದ್ದರಿಂದ ಈ ರೀತಿಯ ಆರೋಪ ಮಾಡುವುದು ಕ್ರೌರ್ಯಕ್ಕೆ ಸಮಾನವಾಗಿದೆ ಎಂದು ಪೀಠ ತಿಳಿಸಿದೆ.

ವಿವಾಹ ಪದ್ಧತಿ ಎಂಬುವುದು ದಂಪತಿಗಳ ನಡುವಿನ ಪರಸ್ಪರ ನಂಬಿಕೆ, ವಿಶ್ವಾಸ, ಪ್ರೀತಿ ಮತ್ತು ಗೌರವದ ಆಧಾರದಲ್ಲಿ ಮುಂದುವರೆಯಲಿದೆ. ದಂಪತಿಗಳಲ್ಲಿ ಒಬ್ಬರು ಮತ್ತೊಬ್ಬರ ನಡೆಯನ್ನು ಶಂಕಿಸಿ ಆರೋಪ ಮಾಡಿ ಅದನ್ನು ಸಾಬೀತುಪಡಿಸದಿದ್ದರೆ, ಅಂತಹ ಆರೋಪ ಆಧಾರ ರಹಿತ ಆರೋಪವಾಗಲಿದ್ದು, ವೈವಾಹಿಕ ಸಂಬಂಧಗಳನ್ನು ಅಲುಗಾಡಿಸಲಿವೆ. ಅಂತಹ ಸಂದರ್ಭದಲ್ಲಿ ಪತ್ನಿ ಶಾಂತಿಯುತವಾಗಿ ವೈವಾಹಿಕ ಜೀವನ ಮುಂದುವರೆಸುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಪೀಠ ಹೇಳಿದೆ.

ಏನಿದು ಪ್ರಕರಣ?:ಅರ್ಜಿದಾರರು(ಪತ್ನಿ) ಮತ್ತು ಪ್ರತಿವಾದಿಗಳು(ಪತಿ) ನಡುವೆ 2008 ರಿಂದ ಪರಿಚಯವಿತ್ತು. ಇದಾದ ಬಳಿಕ 2013 ರಲ್ಲಿ ವಿವಾಹವಾಗಿದ್ದರು. ಬಳಿಕ ಪತ್ನಿ ಎಂಜಿನಿಯರಿಂದ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದರು. ಇದಾದ ಎರಡು ವರ್ಷಗಳ ಕಾಲ ಜತೆಗಿದ್ದರು. ನಂತರ ಪತ್ನಿಯ ಮೇಲೆ ಸಂಶಯ ಪಡುತ್ತಿದ್ದ ಪತಿ, ಮತ್ತೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸುತ್ತಿದ್ದರು. ಆಕೆಯ ಮೊಬೈಲ್ ಫೋನ್‌ನ ಕರೆಗಳನ್ನು ಪರಿಶೀಲಿಸುವುದು ಮತ್ತು ದೈಹಿಕ ಹಲ್ಲೆ ನಡೆಸುತ್ತಿದ್ದರು. ಜತೆಗೆ, ಚಿತ್ರಹಿಂಸೆ ನೀಡುವುದಕ್ಕೆ ಪ್ರಾರಂಭಿಸಿ ಕೊಲೆ ಮಾಡುವುದಕ್ಕೆ ಯತ್ನಿಸಿದ್ದರು ಎಂದು ಅರ್ಜಿಯಲ್ಲಿ ಆರೋಪಿಸಿದ್ದರು.

ಇದಾದ ಬಳಿಕ 2017 ರಿಂದ ಪತ್ನಿ ಬೆಂಗಳೂರಿನಲ್ಲಿರುವ ತನ್ನ ಅಜ್ಜಿಯ ಮನೆಯಲ್ಲಿ ವಾಸಿಸುತ್ತಿದ್ದರು. ಈ ನಡುವೆ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಪತಿಯ ಪರ ವಾದ ಮಂಡಿಸಿದ್ದ ವಕೀಲರು, ಕಕ್ಷಿದಾರರ ಪತ್ನಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಅಹಂನಿಂದ ವರ್ತಿಸುತ್ತಿದ್ದರು. ಅಲ್ಲದೆ, ಆಕೆಯ ಪೋಷಕರೊಂದಿಗೆ ನೆಲೆಸುವಂತೆ ನನ್ನೂ ಒತ್ತಾಯಿಸಿದ್ದಾರೆ. ಅದಕ್ಕೆ ಪತಿ ಇಚ್ಛಿಸಿರಲಿಲ್ಲ ಎಂದು ವಾದಿಸಿದ್ದರು.

ಅಲ್ಲದೆ, 2018ರಲ್ಲಿ ವಿವಾಹವೊಂದಕ್ಕೆ ಭೇಟಿ ನೀಡಲಾಗಿದ್ದು, ಅಲ್ಲಿ ಇಬ್ಬರನ್ನೂ ತೆಗೆದ ಫೋಟೋದಲ್ಲಿ ಸಂತೋಷವಾಗಿದ್ದೇವೆ. ವಿಚ್ಛೇದನ ಮಂಜೂರು ಮಾಡುವ ಅಗತ್ಯವಿಲ್ಲ. ಅರ್ಜಿ ವಜಾಗೊಳಿಸಬೇಕು ನ್ಯಾಯಪೀಠಕ್ಕೆ ಕೋರಿದ್ದರು.

ಇದನ್ನೂ ಓದಿ:ಮಾನಸಿಕ ಕ್ರೌರ್ಯದ ಆಧಾರದಲ್ಲಿ 2ನೇ ಬಾರಿ ಪತಿಯೂ ಪತ್ನಿ ವಿರುದ್ಧ ವಿಚ್ಛೇದನ ಅರ್ಜಿ ಸಲ್ಲಿಸಬಹುದು: ಹೈಕೋರ್ಟ್ - High court

ABOUT THE AUTHOR

...view details