ಮೂರೂವರೆ ವರ್ಷಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪುಟ ಸೇರಿದ ಪುಟಾಣಿ (ETV Bharat) ಧಾರವಾಡ:ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿದೆ. ಈ ಮಾತು ಇಲ್ಲೊಬ್ಬ ಬಾಲಕನ ಸಾಧನೆಗೆ ಅಕ್ಷರಶ: ಸರಿ ಎನಿಸುತ್ತದೆ. ಸಣ್ಣ ವಯಸ್ಸಿನಲ್ಲಿ ವಿಶೇಷ ನೆನಪಿನ ಶಕ್ತಿಯ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತನ್ನ ಹೆಸರು ದಾಖಲಿಸಿದ್ದಾನೆ.
ದಾಂಡೇಲಿ ಮೂಲದ ರೋಹಿತ್ ಹಾಗೂ ಮರ್ಲಿನ್ ದಂಪತಿಯ ಪುತ್ರ ಅನೋಶ್ ಹೆಸರು ಭಾರತದ ಪ್ರತಿಷ್ಠಿತ ಇಂಡಿಯನ್ ಬುಕ್ ಅಫ್ ರೆಕಾರ್ಡ್ಸ್ ಸೇರ್ಪಡೆಯಾಗಿದೆ. ಸದ್ಯ ಹುಬ್ಬಳ್ಳಿಯಲ್ಲಿ ಈ ಕುಟುಂಬ ವಾಸವಾಗಿದೆ.
ಪೋಷಕರು ತಮ್ಮ ಮಗನಿಗೆ ಜನರಲ್ ನಾಲೆಡ್ಜ್ ಬಗ್ಗೆಯೇ ಹೆಚ್ಚು ಹೇಳಿಕೊಡುತ್ತಿದ್ದರು. ಅದರಂತೆ ಅಮ್ಮ ಹೇಳಿದ ಮೊದಲ ಪಾಠವನ್ನೇ ಕಲಿತ ಅನೋಶ್ ಎಲ್ಲ ಆಗುಹೋಗುಗಳ ಬಗ್ಗೆ ಅರಿತಿದ್ದಾನೆ. ಬಾಲಕನ ವಿಶೇಷ ಜ್ಞಾಪಕ ಶಕ್ತಿ ಗಮನಿಸಿರುವ ಪೋಷಕರು ಕಳೆದೊಂದು ವರ್ಷದಿಂದ ಆತನ ವಿಡಿಯೋಗಳನ್ನು ಮಾಡಿಟ್ಟುಕೊಂಡಿದ್ದರು.
ಅಮ್ಮ ಹೇಳಿಕೊಡುವ ಪಾಠ ಕೇಳುತ್ತಾ ಪ್ರಶ್ನೆಗಳಿಗೆ ಪಟ ಪಟನೆ ಉತ್ತರ ಹೇಳುವ ಪುಟಾಣಿಯ ಜಾಣ್ಮೆ ಮೆಚ್ಚಲೇಬೇಕು. ಏನಾದ್ರೂ ಪ್ರಶ್ನೆಗಳನ್ನು ಕೇಳಿದರೆ ಒಂದೊಂದು ಬಾರಿ ನಮಗೂ ಉತ್ತರ ಹುಡುಕುವುದೂ ಕೂಡಾ ಕಷ್ಟವಾಗುತ್ತದೆ ಎನ್ನುತ್ತಾರೆ ಪೋಷಕರು.
ಭಾರತದ ಪ್ರತಿಷ್ಠಿತ ಸಂಸ್ಥೆ ಇಂಡಿಯನ್ ಬುಕ್ ಅಫ್ ರೆಕಾರ್ಡ್ಸ್ ವಿಶೇಷ ಸಾಧನೆ ಮಾಡಿದವರಿಗೆ ಮಾತ್ರ ತಮ್ಮ ದಾಖಲೆಯ ಹೊತ್ತಿಗೆಯಲ್ಲಿ ಸ್ಥಾನ ನೀಡುತ್ತದೆ. ಅದರಂತೆ ಕಳೆದ ಎರಡು ತಿಂಗಳ ಕಾಲ ಅನೋಶ್ ವಿಡಿಯೋಗಳನ್ನು ಗಮನಿಸಿರುವ ಸಂಸ್ಥೆ ಕೊನೆಗೆ ಆತನ ಜ್ಞಾಪಕ ಶಕ್ತಿ ಮೆಚ್ಚಿ ಪ್ರಶಸ್ತಿ ನೀಡಿದೆ.
ಪ್ರಧಾನಿಗಳ ಹೆಸರು, ಪ್ರಾಸಗಳು, ವಾರಗಳು, ರಾಷ್ಟ್ರೀಯ ಚಿಹ್ನೆಗಳು, ಇಂದ್ರಿಯ ಅಂಗಗಳು ಸೇರಿದಂತೆ ಸಂಚಾರಿ ಸೂಚನೆಗಳನ್ನು ಅನೋಶ್ ಹೇಳಬಲ್ಲ. ಅಷ್ಟೇ ಅಲ್ಲ, ಹಣ್ಣುಗಳ ಹೆಸರು, ವಿರುದ್ಧಾರ್ಥಕ ಪದಗಳು, 14 ಪ್ರಾಣಿಗಳ ಹೆಸರು ಸೇರಿ 10 ಪಕ್ಷಿಗಳ ಹೆಸರನ್ನು ತನ್ನ ಜ್ಞಾಪಕ ಶಕ್ತಿಯಿಂದ ತೆಗೆದು ಹೇಳಿ ಅಚ್ಚರಿಗೊಳಿಸಬಲ್ಲ.
ಇದನ್ನೂ ಓದಿ:ಬಾಗಲಕೋಟೆ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತನ್ನ ಹೆಸರು ನಮೂದಿಸಿದ 2 ವರ್ಷದ ಮಗು - India Book of Records