ಬೆಂಗಳೂರು: ಅತ್ಯಾಚಾರ ಯತ್ನಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆ ವಿರುದ್ಧ ಆಡುಗೋಡಿ ಸಂಚಾರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಘಟನೆಯ ದಿನ ಆಟೋವೊಂದಕ್ಕೆ ಅಪಘಾತವೆಸಗಿದ್ದ ಆರೋಪದಡಿ ಅದರ ಚಾಲಕ ಅಜಾಜ್ ಎಂಬುವರು ನೀಡಿರುವ ದೂರಿನನ್ವಯ ಆಡುಗೋಡಿ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆಗಸ್ಟ್ 17ರ ರಾತ್ರಿ ಪಾರ್ಟಿ ಮುಗಿಸಿ ಹೊರಟಿದ್ದ ಯುವತಿ, ಸ್ನೇಹಿತನ ಕಾರನ್ನು ತಾನೇ ಚಲಾಯಿಸಿದ್ದಳು. ಈ ವೇಳೆ ಕೋರಮಂಗಲದ ಮಂಗಳ ಜಂಕ್ಷನ್ ಬಳಿ ಆಟೋಗಳಿಗೆ ಕಾರು ಡಿಕ್ಕಿಯಾಗಿತ್ತು. ಅಪಘಾತದ ಬಳಿಕ ಕಾರನ್ನು ನಿಲ್ಲಿಸದೆ ಯುವತಿ ಮತ್ತು ಆಕೆಯ ಸ್ನೇಹಿತ ಮುಂದಕ್ಕೆ ಸಾಗಿದ್ದರು. ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದ ಆಟೋಚಾಲಕ ಅಜಾಜ್, ಫೋರಂ ಮಾಲ್ ಜಂಕ್ಷನ್ ಬಳಿ ಅಡ್ಡ ಹಾಕಿ ನಿಲ್ಲಿಸಿದ್ದರು. ಬಳಿಕ ಆಟೋ ರಿಕ್ಷಾದ ರಿಪೇರಿ ಮಾಡಿಸಿಕೊಡಿ ಎಂದು ಕೇಳಿದ್ದರು. ಯುವತಿ ಮತ್ತು ಆಕೆಯ ಸ್ನೇಹಿತ ಒಪ್ಪದಿದ್ದಾಗ ಸ್ಥಳಕ್ಕೆ ಆಡುಗೋಡಿ ಠಾಣೆಯ ಹೊಯ್ಸಳ ವಾಹನವನ್ನು ಕರೆಸಿದ್ದರು.