ಗಂಗಾವತಿ:ಮಂಗಳವಾರ ನಸುಕಿನ ವೇಳೆ ಸುರಿದ ಭಾರಿ ಪ್ರಮಾಣದ ಮಳೆಯಿಂದಾಗಿ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ಬೆಟ್ಟದಿಂದ ಬೃಹತ್ ಗಾತ್ರದ ಕಲ್ಲು ಬಂಡೆಯೊಂದು ಉರುಳಿದೆ. ಅದೃಷ್ಟವಶಾತ್ 20ಕ್ಕೂ ಹೆಚ್ಚು ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಮಳೆಯ ಅವಾಂತರದಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ.
ತಾಲೂಕಿನ ಸಂಗಾಪುರದ 2ನೇ ವಾರ್ಡ್ ಗದ್ವಾಲ್ ಏರಿಯಾ ಸಮೀಪದಲ್ಲಿರುವ ಬೆಟ್ಟದಿಂದ ಬೃಹತ್ ಗಾತ್ರದ ಕಲ್ಲು ಬಂಡೆಯೊಂದು ಉರುಳಿದೆ. ಆದರೆ ಕುಡಿಯುವ ನೀರಿಗಾಗಿ ಹಾಕಲಾಗಿದ್ದ ನಾಲ್ಕು ಇಂಚು ಗಾತ್ರದ ಕಬ್ಬಿಣದ ಪೈಪ್, ಉರುಳಿ ಬಂದಿರುವ ಕಲ್ಲು ಬಂಡೆಯನ್ನು ಹಿಡಿದು ನಿಲ್ಲಿಸಿದೆ. ಇದರಿಂದ ನಾಲ್ಕೈದು ಮನೆಯಲ್ಲಿ ವಾಸವಿದ್ದ ಸುಮಾರು 20ಕ್ಕೂ ಹೆಚ್ಚು ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಳೆಯ ಅವಾಂತರದಿಂದಾಗಿ ಜನ ಜೀವನ ಅಸ್ತವ್ಯಸ್ತ (ETV Bharat) "ಆಕಸ್ಮಿಕ ಕಬ್ಬಿಣದ ಪೈಪ್ ಲೈನ್ ಕಲ್ಲು ಬಂಡೆಯನ್ನು ಹಿಡಿದು ನಿಲ್ಲಿಸದೇ ಇದ್ದರೆ ಗಾಢ ನಿದ್ರೆಯಲ್ಲಿದ್ದ ಐದಾರು ಕುಟುಂಬದ ಸದಸ್ಯರಿಗೆ ಊಹಿಸಲಾಗದ ಹಾನಿಯಾಗಿರುತ್ತಿತ್ತು" ಎಂದು ಪ್ರತ್ಯಕ್ಷದರ್ಶಿ ಲೋಕೇಶ ರಾಠೋಡ್ ಭಯಾನಕತೆಯನ್ನು ಬಿಚ್ಚಿಟ್ಟಿದ್ದಾರೆ.
ಗಂಗಾವತಿ ನಗರದ ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿದ್ದು ಜನ ಇಡೀ ರಾತ್ರಿ ನಿದ್ರೆ ಬಿಟ್ಟು ಬಕೆಟ್, ಪಾತ್ರೆಗಳಿಂದ ನೀರು ಹೊರ ಹಾಕಿದರು. ಗಾಂಧಿನಗರದ ಕೊಳಚೆ ಪ್ರದೇಶದಲ್ಲಿನ ಸಾಕಷ್ಟು ಮನೆಗಳಿಗೆ ಹಾನಿಯಾಗಿದ್ದು, ಬಸಮ್ಮ ಹನುಮಂತಪ್ಪ ಸುಳೇಕಲ್ ಎಂಬ ಮಹಿಳೆಗೆ ಸೇರಿದ ಮನೆಯ ಗೋಡೆ ಕುಸಿದು ಬಿದ್ದಿದೆ. ಜುಲೈ ನಗರದ ಪೆಟ್ರೋಲ್ ಬಂಕ್ ಹಿಂದಿನ ಜನವಸತಿ ಪ್ರದೇಶ ಸಂಪೂರ್ಣ ಜಲಾವೃತವಾಗಿದೆ. ಜನ ಓಡಾಡಲು ಸ್ಥಳವಿಲ್ಲದಂತಾಗಿದೆ. ನಗರದ ಜನವಸತಿ ಪ್ರದೇಶಗಳಾದ ಹೆಚ್ಆರ್ಎಸ್ ಕಾಲೋನಿ, ಮೆಹಬೂಬನಗರ, ಕಿಲ್ಲಾ ಏರಿಯಾ, ಗೌಸಿಯಾ ಕಾಲೋನಿ, ಈದ್ಗಾ ಕಾಲೋನಿ, ಬನ್ನಿಗಿಡದ ಕ್ಯಾಂಪ್, ಅಗಡಿ ಸಂಗಣ್ಣ ಕ್ಯಾಂಪ್, ಲಿಂಗರಾಜ ಕ್ಯಾಂಪ್, ಶರಣಬಸವೇಶ್ವರ ನಗರದಲ್ಲಿನ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ.
ಮನೆಗಳಿಗೆ ಹಾನಿ:ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಹಶಿಲ್ದಾರ್ ಯು. ನಾಗರಾಜ್ "ತಾಲ್ಲೂಕಿನಾದ್ಯಂತ ಮಂಗಳವಾರ ನಸುಕಿನ ವೇಳೆ ಸುರಿದ ಅಪಾರ ಪ್ರಮಾಣ ಮಳೆಯಿಂದಾಗಿ ಸಾರ್ವಜನಿಕರ ಆಸ್ತಿಪಾಸ್ತಿ ಮನೆಗಳಿಗೆ ಹಾನಿಯಾಗಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ವೆಂಕಟಗಿರಿ ಹೋಬಳಿಯಲ್ಲಿ ಸುಮಾರು ಆರು ಮನೆಗಳು ಕುಸಿದಿರುವ ಮಾಹಿತಿ ಸಿಕ್ಕಿದೆ. ಅಲ್ಲದೇ ಮರಳಿ ಹೋಬಳಿಯಲ್ಲಿ ಸುಮಾರು ನಾಲ್ಕಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದು, ಸಂಜೆ ವೇಳೆಗೆ ಪೂರ್ಣ ಪ್ರಮಾಣದ ಮಾಹಿತಿ ಸಿಗಲಿದೆ" ಎಂದರು.
ಇದನ್ನೂ ಓದಿ:ದಾವಣಗೆರೆಯಲ್ಲಿ ಅಬ್ಬರಿಸಿದ ಮಳೆಯಲ್ಲಿ ಕೊಚ್ಚಿಹೋದ ಟೊಮ್ಯಾಟೊ ಫಸಲು; ರೈತನಿಗೆ ಕಣ್ಣೀರು ತರಿಸಿದ ವರುಣ - Tomato Washed out in Rain