ಚಾಮರಾಜನಗರ : ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ನಂಜನಗೂಡು ತಾಲೂಕಿನ ಹಿಮ್ಮಾವು ಗ್ರಾಮದ ಫ್ಯಾಕ್ಟರಿಯಲ್ಲಿ ಏ. 2 ರಂದು 98 ಕೋಟಿ ಮೌಲ್ಯದ ಬಿಯರ್ ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಸಿ. ಟಿ ಶಿಲ್ಪಾನಾಗ್ ಅವರಿಗೆ ಅನಾಮದೇಯ ವ್ಯಕ್ತಿ ಕರೆ ಮಾಡಿ ಅಕ್ರಮ ಮದ್ಯ ಶೇಖರಣೆ ಬಗ್ಗೆ ಮಾಹಿತಿ ಕೊಟ್ಟಿದ್ದಾನೆ. ಬಳಿಕ, ಶಿಲ್ಪಾನಾಗ್ ಅವರು ಅಬಕಾರಿ ಡಿಸಿ ನಾಗಶಯನಗೆ ಮುಂದಿನ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ.
ಡಿಸಿ ಸೂಚನೆ ಮೇರೆಗೆ ನಾಗಶಯನ, ಯುನೈಟೆಡ್ ಬ್ರೀವರೀಸ್ ಲಿಮಿಟೆಡ್‍ನ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮೈಸೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರೊಂದಿಗೆ ಕಾರ್ಯಾಚರಣೆ ನಡೆಸಿ, ಒಟ್ಟಾರೆ 98 ಕೋಟಿ 52 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯವನ್ನು ಜಪ್ತಿ ಮಾಡಿ, ಬ್ರೀವರಿ ಘಟಕದ ಮೇಲೆ ಪ್ರಕರಣವನ್ನು ದಾಖಲಿಸಿದ್ದಾರೆ.
ಈ ಬಗ್ಗೆ ಅಬಕಾರಿ ಡಿಸಿ ನಾಗಶಯನ ಅವರು ಮಾತನಾಡಿ, ಘಟಕದ ದಾಖಲಾತಿಗಳಾದ ಲೆಕ್ಕದ ಪುಸ್ತಕದೊಂದಿಗೆ ಭೌತಿಕ ದಾಸ್ತಾನನ್ನು ಪರಿಶೀಲಿಸಿದಾಗ, ಲೆಕ್ಕದ ಪುಸ್ತಕದ ದಾಸ್ತಾನಿಗಿಂತ 7 ಸಾವಿರ ವಿವಿಧ ಬ್ರಾಂಡಿನ ರಟ್ಟಿನ ಪೆಟ್ಟಿಗೆಗಳ ಬಿಯರ್ ದಾಸ್ತಾನು ಕೊಠಡಿಯಲ್ಲಿ ಹೆಚ್ಚಾಗಿ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಈ ಕೃತ್ಯವು ಅಬಕಾರಿ ಕಾಯ್ದೆ ಕಲಂ 9, 10, 11, 12, 14 ಖ/ತಿ 32, 34, 38(ಎ), 43 ಮತ್ತು ಕರ್ನಾಟಕ ಬ್ರೀವರಿಯ ಸನ್ನದು ಷರತ್ತುಗಳ ನಿಯಮ 1, 2, 7 ಮತ್ತು 9 ಮತ್ತು ಕರ್ನಾಟಕ ಅಬಕಾರಿ ಕಾಯ್ದೆ ಬ್ರೀವರಿ 1967 ರ ನಿಯಮ 18 ಮತ್ತು 19 ಬಾಟ್ಲಿಂಗ್ ರೂಲ್ ನಿಯಮ 13 ಕರ್ನಾಟಕ ಅಬಕಾರಿ (ದಾಸ್ತಾನು, ಸಾಗಾಣಿಕೆ, ಆಮದು ಮತ್ತು ರಫ್ತು ಅಮಲು ಪದಾರ್ಥಗಳು) (ಕರ್ನಾಟಕ) ನಿಯಮಗಳು 1967 ರ ನಿಯಮ 7, 89, 3 ಇವುಗಳ ಉಲ್ಲಂಘನೆಯಾಗಿದೆ.
ಬ್ರೀವರಿ ಘಟಕದಲ್ಲಿ ತಯಾರಿಸಿರುವ ಒಟ್ಟು 6,03,644 ರಟ್ಟಿನ ಪೆಟ್ಟಿಗೆಗಳು ಹಾಗೂ ಕೆಗ್‍ಗಳಲ್ಲಿರುವ 23,160 ಲೀ. ಮತ್ತು ಬಿಬಿಟಿ ಟ್ಯಾಂಕ್‍ನಲ್ಲಿರುವ ದಾಸ್ತಾನು 5,16,700 ಲೀ. ಯುಟಿ ಟ್ಯಾಂಕ್‍ನಲ್ಲಿರುವ 66,16,700 ಲೀ. ಸೈಲೋಸ್ ಟ್ಯಾಂಕ್‍ನಲ್ಲಿರುವ ಕಚ್ಚಾವಸ್ತು 6,50,458 ಕೆ.ಜಿ ರಂತೆ ವಿವಿಧ ವಸ್ತುಗಳನ್ನು ಜಪ್ತಿ ಮಾಡಿಕೊಂಡು ಬ್ರೀವರಿ ಪ್ರಕರಣದಲ್ಲಿ ನಾಪತ್ತೆಯಾಗಿರುವ 17 ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುತ್ತೇವೆ ಎಂದು ತಿಳಿಸಿದರು.
ಜಪ್ತಿ ಮಾಡಿದ ಸ್ಥಳದ ಕೃತ್ಯವು ಚಾಮರಾಜನಗರ ಲೋಕಸಭಾ ಕ್ಷೇತ್ರ (ಪ.ಜಾ)ದ ವ್ಯಾಪ್ತಿಗೆ ಒಳಪಡಲಿದ್ದು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಕ್ರಮ ದಾಸ್ತಾನು ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ :ಗಡಿ ಜಿಲ್ಲೆಯಲ್ಲಿ ಹೆಚ್ಚಾದ ಬಿಯರ್ ಪ್ರಿಯರು, ರಾಜ್ಯದಲ್ಲಿ ಅತ್ಯಧಿಕ ಮಾರಾಟ