ಬಳ್ಳಾರಿ: ಉಪ ಲೋಕಾಯುಕ್ತ ಕಾರ್ಯವ್ಯಾಪ್ತಿಗೆ ಒಳಪಡುವ ಜಿಲ್ಲೆಯ ಒಟ್ಟು 274 ಪ್ರಕರಣಗಳಲ್ಲಿ 87 ವಿವಿಧ ಬಗೆಯ ಹಲವು ಪ್ರಕರಣಗಳನ್ನು ದೂರುದಾರರು ಮತ್ತು ಎದುರುದಾರರ ಸಮ್ಮುಖದಲ್ಲಿ ವಿಚಾರಣೆ ನಡೆಸಿ, ಇತ್ಯರ್ಥ ಪಡಿಸಲಾಗಿದೆ ಎಂದು ಕರ್ನಾಟಕ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ತಿಳಿಸಿದ್ದಾರೆ.
ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಎರಡು ದಿನಗಳ ದೂರು/ಅಹವಾಲು ಸ್ವೀಕಾರ ಮತ್ತು ವಿಚಾರಣೆಯಲ್ಲಿ 177 ಹೊಸ ದೂರುಗಳ ವಿಚಾರಣೆ ಕೈಗೊಳ್ಳಲಾಗಿತ್ತು. ಅದರಲ್ಲಿ 68 ದೂರುಗಳನ್ನು ವಿಲೇವಾರಿಗೊಳಿಸಲಾಗಿದೆ. 97 ಬಾಕಿ ಇರುವ ದೂರುಗಳ ವಿಚಾರಣೆಯಲ್ಲಿ 19 ದೂರು ಇತ್ಯರ್ಥ ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಉಪ ಲೋಕಾಯುಕ್ತ ವ್ಯಾಪ್ತಿಗೆ ಸಲ್ಲಿಕೆಯಾಗಿರುವ ದೂರುಗಳ ಸಂಬಂಧ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು ಲೋಕಾಯುಕ್ತದ ಉದ್ದೇಶವಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಜ. 16 ರಿಂದ 18 ರವರೆಗೆ ಮೂರು ದಿನಗಳ ಕಾಲ ವಿವಿಧೆಡೆ ಅನೀರಿಕ್ಷಿತ ಭೇಟಿ ನೀಡಿ, ಅಲ್ಲಿನ ಸ್ಥಿತಿ-ಗತಿ ಪರಿಶೀಲನೆ ನಡೆಸಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದ್ದೇನೆ ಎಂದು ಹೇಳಿದರು.
ಗುರುವಾರ (ಜ.16 ರಂದು) ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಯಾರ್ಡ್ (ಎಪಿಎಂಸಿ), ವೇಣಿವೀರಾಪುರ ಗ್ರಾಮದ ಬಳಿಯ ಘನ ತ್ಯಾಜ್ಯ ವಿಲೇವಾರಿ ಘಟಕ, ಬಳ್ಳಾರಿ ಮಹಾನಗರ ಪಾಲಿಕೆ ಕಚೇರಿ, ಬಳ್ಳಾರಿ ತಾಲೂಕು ಕಚೇರಿ, ಜಿಲ್ಲಾ ಆಸ್ಪತ್ರೆ, 100 ಹಾಸಿಗೆಗಳ ತಾಯಿ ಮತ್ತು ನವಜಾತ ಶಿಶುಗಳ ಆಸ್ಪತ್ರೆ, ವಿಮ್ಸ್ ಆಸ್ಪತ್ರೆ, ಪ್ರಾದೇಶಿಕ ಸಾರಿಗೆ ಕಚೇರಿ, ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಿತಿ-ಗತಿ ಪರಿಶೀಲನೆ ನಡೆಸಲಾಗಿದೆ ಎಂದರು.