ಹುಬ್ಬಳ್ಳಿ:ಸಾರ್ವಜನಿಕರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ವಂಚಿಸುತ್ತಿದ್ದ ಇಬ್ಬರು ಸೈಬರ್ ಕಳ್ಳರ ಬಂಧಿಸುವಲ್ಲಿ ಹುಬ್ಬಳ್ಳಿ-ಧಾರವಾಡ ಸೈಬರ್ ಕ್ರೈಂ ಪೊಲೀಸರು ಯಶಸ್ವಿಯಾಗಿದ್ದಾರೆ.
ಉಣಕಲ್ನ ಅಜಯ ತಂದೆ ರಾಮಸ್ವಾಮಿ ಹೀರೆಮಠ (23), ವಿದ್ಯಾ ನಗರದ ಭರತ ತಂದೆ ರಾಜೇಶ ಜೈನ್ (27) ಬಂಧಿತರು. ಇವರು ವಿದ್ಯಾನಗರ ಮನೆಯೊಂದರಲ್ಲಿ KKRCA Stock Investment ಅನ್ನುವ ಆನ್‌ಲೈನ್ ಟ್ರೇಡಿಂಗ್ ಕಂಪನಿಯಲ್ಲಿ ಹಣ ಹೂಡಿಕೆ (ಇನ್ವೆಷ್ಟಮೆಂಟ್) ಮಾಡಿದರೆ, ಹೆಚ್ಚಿನ ಲಾಭಾಂಶ ಅಂದರೆ, 500% ರಿಟರ್ನ್ ಕೊಡುವುದಾಗಿ ಹೇಳಿ ದೂರುದಾರರ ಖಾತೆಯಿಂದ ಒಟ್ಟು 84,11,000/- ರೂಪಾಯಿ ಹಣವನ್ನು ಆನ್‌ಲೈನ್ ಮುಖಾಂತರ ವರ್ಗಾವಣೆ ಮಾಡಿಕೊಂಡಿದ್ದಾರೆ. ಯಾವುದೇ ಲಾಭಾಂಶವನ್ನು ಕೊಡದೇ ವಂಚನೆ ಮಾಡಿದ್ದರು. ಈ ಬಗ್ಗೆ ವಂಚನೆಗೊಳಗಾದವರು ಹುಬ್ಬಳ್ಳಿ- ಧಾರವಾಡ ನಗರ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆನ್‌ಲೈನ್ ಮೂಲಕ ಹಣ ವರ್ಗಾವಣೆ:ಈ ಪ್ರಕರಣವನ್ನು ಭೇದಿಸುವ ನಿಟ್ಟಿನಲ್ಲಿ ಸಿಇಎನ್ ಕೈಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಬಿ. ಕೆ. ಪಾಟೀಲ, ಅವರ ನೇತೃತ್ವದ ತಂಡವು ದೂರುದಾರರ ಖಾತೆಯಿಂದ ಆನ್‌ಲೈನ್ ಮುಖಾಂತರ ಹಣ ವರ್ಗಾವಣೆ ಮಾಡಿಕೊಂಡಿದ್ದ ಆರೋಪಿತರ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಪಡೆದು ಪರಿಶೀಲನೆ ಮಾಡಿದಾಗ ಆರೋಪಿತರು ಹುಬ್ಬಳ್ಳಿಯ ಐ.ಡಿ.ಎಫ್.ಸಿ. ಬ್ಯಾಂಕಿನಲ್ಲಿ ಹಣ ವಿಥ್‌ಡ್ರಾ ಮಾಡಿಕೊಂಡ ಬಗ್ಗೆ ತಿಳಿದು ಬಂದಿದೆ.
ವಿಚಾರಣೆಯಿಂದ ಹೊರಬಂದ ಮಾಹಿತಿ:ಕೂಡಲೇ ತನಿಖಾ ತಂಡವು ಆರೋಪಿತರನ್ನು ಪತ್ತೆಮಾಡಿ ಹುಬ್ಬಳ್ಳಿಯಲ್ಲಿ ಬಂಧಿಸಿ, ಹಚ್ಚಿನ ವಿಚಾರಣೆ ಮಾಡಿದಾಗ ಆರೋಪಿಗಳು ಸಾರ್ವಜನಿಕರ ಹೆಸರಿನಲ್ಲಿ ಹುಬ್ಬಳ್ಳಿಯ ವಿವಿಧ ಖಾಸಗಿ ಬ್ಯಾಂಕ್ಗಳಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದಿರುವುದು ಗೊತ್ತಾಗಿದೆ. ಈ ಖಾತೆಗಳಿಗೆ ಆನ್‌ಲೈನ್ ಮುಖಾಂತರ ಹಣ ವರ್ಗಾವಣೆ ಮಾಡಿಕೊಂಡು, 'ಬಿನಾನ್ಸ್ ಕ್ರಿಷ್ಟೋ ಕರೆನ್ಸಿ' ಪ್ಲಾಟ್ಫಾರ್ಮ್ನಲ್ಲಿ ಯುಎಸ್‌ಡಿಟಿಯನ್ನು ದೂರುದಾರರಿಂದ ತೆರೆಯಿಸಿ KKRCA Stock Investment ಆನ್‌ಲೈನ್ ಟ್ರೇಡಿಂಗ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿಸಿಕೊಂಡು ಹೆಚ್ಚಿನ ಲಾಭಾಂಶ ಅಂದರೆ, 500% ರಿಟರ್ನ್ ಕೊಡುವುದಾಗಿ ಹೇಳುತ್ತಿದ್ದರು. ಹೂಡಿಕೆಯಾದ ಆ ಹಣವನ್ನು ವರ್ಗಾವಣೆ ಮಾಡಿಕೊಂಡು ಯುಎಸ್‌ಡಿಟಿಯನ್ನು ಖರೀದಿ ಮಾಡುವ ಮತ್ತು ಮಾರಾಟ ಮಾಡುವ ಮೂಲಕ ಅಕ್ರಮ ಹಣ ಸಂಪಾದನೆ ವ್ಯವಹಾರದಲ್ಲಿ ತೊಡಗಿದ್ದನ್ನು ಒಪ್ಪಿಕೊಂಡಿದ್ದಾರೆ. ಸೈಬರ್ ವಂಚಕರನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದು, ಇನ್ನುಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ:ರಂಜಾನ್ ಕಿಟ್ ಕೊಡಿಸುವುದಾಗಿ ಕರೆದೊಯ್ದು ದಂಪತಿ ಸುಲಿಗೆ ಮಾಡಿದ ವ್ಯಕ್ತಿ: ಆರೋಪಿ ಬಂಧನ - Robbery Case
ಪ್ರತ್ಯೇಕ ಪ್ರಕರಣ - ಬ್ಯಾಂಕ್ಗೆ ತುಂಬಬೇಕಿದ್ದ ಹಣದೊಂದಿಗೆ ಸಿಬ್ಬಂದಿ ಪರಾರಿ:ಬ್ಯಾಂಕ್ಗೆ ತುಂಬಬೇಕಿದ್ದ 32.90 ಲಕ್ಷ ರೂಪಾಯಿ ತೆಗೆದುಕೊಂಡು ಸಿಬ್ಬಂದಿ ಎಸ್ಕೇಪ್ ಆಗಿರುವ ಘಟನೆ
ಹುಬ್ಬಳ್ಳಿಯ ಉಪ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಸ್ಮಾಲ್ ಫೈನಾನ್ಸ್ವೊಂದರ ಸಹಾಯಕ ವ್ಯವಸ್ಥಾಪಕ ಹಾಗೂ ಶಾಖಾ ವ್ಯವಸ್ಥಾಪಕರು ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.
ಸಹಾಯಕ ವ್ಯವಸ್ಥಾಪಕ ಅರುಣಕುಮಾರ, ಶಾಖಾ ವ್ಯವಸ್ಥಾಪಕ ಪ್ರಶಾಂತ ಎಂಬುವರು ಕೃತ್ಯ ಎಸಗಿರುವ ಆರೋಪಿಗಳು. ಇಬ್ಬರೂ ಸೇರಿ 32.90 ಲಕ್ಷ ರೂ.ಗಳೊಂದಿಗೆ ಪರಾರಿಯಾಗಿದ್ದಾರೆ. 39.37 ಲಕ್ಷ ರೂ.ಗಳಲ್ಲಿ 25 ಲಕ್ಷ ರೂ. ಹೆಚ್‌ಡಿಎಫ್‌ಸಿ ಬ್ಯಾಂಕಿಗೆ ಜಮಾ ಮಾಡುವಂತೆ ಬ್ಯಾಂಕ್ ಸೂಚಿಸಿತ್ತು. ಅದರಲ್ಲಿ ಕೇವಲ 5 ಲಕ್ಷ ರೂ. ಜಮಾ ಮಾಡಿರುವ ಆರೋಪಿಗಳು ಉಳಿದ 32.90 ಲಕ್ಷ ರೂ. ತೆಗೆದುಕೊಂಡು, ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾರೆ ಎಂದು ಬ್ಯಾಂಕ್ ನೌಕರ ಮಂಜುನಾಥ ಎಂಬುವರು
ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಾಗಿದೆ.