ಬೆಂಗಳೂರು:ಇತ್ತೀಚೆಗೆ ನಗರದಲ್ಲಿ ವಾಹನ ಸವಾರರಿಂದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಅಧಿಕಗೊಳ್ಳುತ್ತಿವೆ. ಅವರ ವಿರುದ್ಧ ಕ್ರಮಕೈಗೊಳ್ಳಲು ಸಂಚಾರ ಪೊಲೀಸರು ಸಜ್ಜಾಗಿದ್ದಾರೆ. ಇನ್ನು 50 ಸಾವಿರಕ್ಕಿಂತ ಹೆಚ್ಚು ದಂಡ ಬಾಕಿ ಉಳಿಸಿಕೊಂಡಿರುವ ಸವಾರನ ಮನೆ ಬಾಗಿಲಿಗೆ ನೋಟಿಸ್ ನೀಡಿ ದಂಡ ವಸೂಲಿ ಮಾಡುವುದಾಗಿ ಎಚ್ಚರಿಸಿದ್ದ ಸಂಚಾರ ಪೊಲೀಸರು ಇದೀಗ ಕಾರ್ಯರೂಪಕ್ಕೆ ತಂದಿದ್ದಾರೆ. ಸದ್ಯ 50 ಸಾವಿರಕ್ಕಿಂತ ಹೆಚ್ಚು ದಂಡವಿರುವ 84 ಬೈಕ್ಗಳು ಹಾಗೂ ಒಂದು ಕಾರನ್ನು ಸೀಜ್ ಮಾಡಲಾಗಿದೆ. ಅಲ್ಲದೆ, ಈ ವಾಹನಗಳ ಮೇಲೆ 10,210 ಉಲ್ಲಂಘನಾ ಪ್ರಕರಣಗಳು ದಾಖಲಾಗಿದ್ದು, ಸುಮಾರು 1.07 ಕೋಟಿ ರೂಪಾಯಿ ದಂಡ ಸಂಗ್ರಹಿಸಬೇಕಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಸಂಚಾರ ಪೊಲೀಸರ ಬದಲಾಗಿ ಆತ್ಯಾಧುನಿಕ ಕ್ಯಾಮೆರಾಗಳಿಂದ ಸೆರೆಯಾಗುವ ಪೋಟೋ ಆಧಾರದ ಮೇರೆಗೆ ಪ್ರಕರಣಗಳನ್ನ ದಾಖಲಿಸಿಕೊಳ್ಳಲಾಗುತ್ತಿದೆ. ಪೊಲೀಸರು ಅಡ್ಡಗಟ್ಟುವುದಿಲ್ಲ ಎಂದು ಭಾವಿಸಿ ಹೆಲ್ಮೆಟ್ ರಹಿತ ಚಾಲನೆ, ಸಿಗ್ನಲ್ ಜಂಪ್, ಸೀಟ್ ಬೆಲ್ಟ್ ಹಾಕದಿರುವುದು ಸೇರಿದಂತೆ ವಿವಿಧ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿದೆ. ಟ್ರಾಫಿಕ್ ವೈಯಲೇಷನ್ ಮಾಡುವವವರ ವಿರುದ್ಧ ಹಾಗೂ ಮುಖ್ಯವಾಗಿ 50 ಸಾವಿರಕ್ಕಿಂತ ಹೆಚ್ಚು ದಂಡ ಹೊಂದಿರುವ ಸವಾರರ ವಿರುದ್ಧ ಕ್ರಮಕೈಗೊಳ್ಳುವಂತೆ ಸಂಚಾರ ವಿಭಾಗ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ನಗರದ ಎಲ್ಲ ವಲಯದ ಡಿಸಿಪಿಗಳಿಗೆ ಸೂಚಿಸಿದ್ದರು.
ಅದರಂತೆ ಕಾರ್ಯಾಚರಣೆ ಕೈಗೊಂಡ ದಕ್ಷಿಣ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜ್ ನೇತೃತ್ವದಲ್ಲಿ ಕಳೆದ ಎರಡು - ಮೂರು ದಿನಗಳಿಂದ ಕಾರ್ಯಾಚರಣೆ ಕೈಗೊಂಡು 84 ಬೈಕ್ ಹಾಗೂ ಒಂದು ಕಾರು ವಶಕ್ಕೆ ಪಡೆದುಕೊಂಡಿದ್ದಾರೆ. ಸೀಜ್ ಮಾಡಲಾದ ಎಲ್ಲ ವಾಹನಗಳ ಮೇಲೆ 50 ಸಾವಿರಕ್ಕಿಂತ ಹೆಚ್ಚು ದಂಡವಿರುವುದು ಕಂಡು ಬಂದಿದೆ. ಒಟ್ಟಾರೆ 10 ಸಾವಿರಕ್ಕಿಂತ ಹೆಚ್ಚು ಸಂಚಾರ ಉಲ್ಲಂಘನೆ ಪ್ರಕರಣಗಳಿದ್ದು, 1 ಕೋಟಿ ರೂಪಾಯಿ ದಂಡವಿದೆ. ಸದ್ಯ ಎಲ್ಲ ವಾಹನಗಳನ್ನ ಸೀಜ್ ಮಾಡಿ ವಾಹನ ಮಾಲೀಕರಿಗೆ ನೊಟೀಸ್ ಕಳುಹಿಸಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.