ನೆಲಮಂಗಲ (ಬೆಂಗಳೂರು) : MTP ಕಾಯ್ದೆಯಡಿ ಪರವಾನಿಗೆ ಪಡೆಯದೆ 74 ಗರ್ಭಪಾತ ಪ್ರಕರಣಗಳು ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದ್ದು, ಇದು ವೈದ್ಯಕೀಯ ಗರ್ಭಪಾತ ಕಾಯ್ದೆ 1971 ರ ನಿಯಮದ ಕಲಂ.4 ರ ಉಪ ಕಲಂ (b) ಯ ಉಲ್ಲಂಘನೆಯಾಗಿರುತ್ತದೆ. ಈ ಹಿನ್ನೆಲೆ ಆಸ್ಪತ್ರೆಯ ವಿರುದ್ಧ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಆರ್.ಮಂಜುನಾಥ್ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಆದರೆ, ಈ ಕುರಿತಂತೆ ಆಸ್ಪತ್ರೆಯ ಮಾಲೀಕರೂ ಆಗಿರುವ ವೈದ್ಯನಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.
ನೆಲಮಂಗಲ ಪಟ್ಟಣದ ಬಿ.ಹೆಚ್ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆ ವಿರುದ್ಧ ಸಾರ್ವಜನಿಕರು ಡಿಹೆಚ್ಒಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಆರ್.ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಆಸ್ಪತ್ರೆಯಲ್ಲಿ ಕಾನೂನುಬಾಹಿರವಾಗಿ ಗರ್ಭಪಾತಗಳನ್ನು ನಡೆಸಿರುವುದು ಬೆಳಕಿಗೆ ಬಂದಿದೆ. ಆಸ್ಪತ್ರೆ ಕೆ.ಪಿ.ಎಂ.ಇ ಪ್ರಾಧಿಕಾರದಲ್ಲಿ ನೋಂದಣಿಯಾಗಿದೆ. ಆದರೆ ಆಸ್ಪತ್ರೆ ವೈದ್ಯ MTP ಕಾಯ್ದೆಯಡಿ ಪರವಾನಿಗೆ ಪಡೆಯದೆ 2021ನೇ ಇಸವಿಯಿಂದ ಇಲ್ಲಿಯವರೆಗೂ 74 ಗರ್ಭಪಾತಗಳನ್ನ ನಡೆಸಿರುತ್ತಾರೆ. ಇದು ವೈದ್ಯಕೀಯ ಗರ್ಭಪಾತ ಕಾಯ್ದೆ 1971 ರ ನಿಯಮದ ಕಲಂ.4 ರ ಉಪ ಕಲಂ (b) ಯ ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.