ಬೆಳಗಾವಿ: ಡಿ.9 ರಿಂದ 19ರವರೆಗೆ ಚಳಿಗಾಲ ಅಧಿವೇಶನದಲ್ಲಿ ಸಾಕಷ್ಟು ಪ್ರತಿಭಟನೆಗಳು ಆಗುತ್ತವೆ. ಗಣ್ಯರು, ಜನಪ್ರತಿನಿಧಿಗಳು ಭೇಟಿ ನೀಡುತ್ತಾರೆ. ಸಂಚಾರ ನಿರ್ವಹಣೆ ಮಾಡಬೇಕಾಗುತ್ತದೆ. ಹಾಗಾಗಿ, ಈ ಎಲ್ಲದರ ಸಿದ್ಧತೆ ಹೇಗೆ ನಡೆಯುತ್ತದೆ ಎಂದು ಪರೀಶಿಲನೆಗೆ ಬಂದಿದ್ದೇನೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಆರ್. ತಿಳಿಸಿದರು.
ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆಗೂ ಮೊದಲು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಧಿವೇಶನ ಬಂದೋಬಸ್ತ್ಗೆ 8 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿ 6 ಸಾವಿರ ಸಿಬ್ಬಂದಿಗಳನ್ನು ನಿಯೋಜಿಸಿದ್ದೇವೆ. ಭದ್ರತೆಗೆ ನಿಯೋಜನೆಗೊಂಡಿರುವ ಸಿಬ್ಬಂದಿಗಳಿಗೆ ಊಟ, ವಸತಿ ಸೌಕರ್ಯಕ್ಕಾಗಿ ಟೆಂಟ್ ಸಿಟಿ ನಿರ್ಮಿಸಲಾಗುತ್ತಿದೆ. ಈ ಬಾರಿ ಹೆಚ್ಚಿನ ಚಳಿ ಇದೆ. ಭದ್ರತೆಗೆ ಬರುವ ಸಿಬ್ಬಂದಿ ಚಳಿಯಿಂದ ರಕ್ಷಣೆ ಪಡೆಯಲು ಉಲ್ಲನ್ ಹೊದಿಕೆ ತೆಗೆದುಕೊಂಡು ಬರುವಂತೆ ಹೇಳಿದ್ದೇವೆ. ಒಂದು ವೇಳೆ ತೆಗೆದುಕೊಂಡು ಬಾರದ ಸಿಬ್ಬಂದಿಗಳಿಗೆ ನಾವೇ ವ್ಯವಸ್ಥೆ ಮಾಡುತ್ತೇವೆ ಎಂದರು.
ಬೆಳಗಾವಿಯಲ್ಲಿ ಸಿಬ್ಬಂದಿ ಕೊರತೆ ವಿಚಾರವಾಗಿ ಪ್ರತಿಕ್ರಿಯಿಸಿ, ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ನೇಮಕಾತಿ ಆದೇಶ ಕೊಡುವುದಷ್ಟೇ ಬಾಕಿ ಇದೆ. ಖಾಲಿ ಇರುವ ಮತ್ತು ಹೆಚ್ಚುವರಿ ಹುದ್ದೆಗಳ ಭರ್ತಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಮುಂದಿನ ದಿನಗಳಲ್ಲಿ ಸಿಬ್ಬಂದಿ ಕೊರತೆ ನೀಗಿಸಲಾಗುವುದು ಎಂದು ಭರವಸೆ ನೀಡಿದರು.