ಕಾರವಾರ:ನೂರು ವರ್ಷಕ್ಕೂ ಅಧಿಕ ಕಾಲ ಇತಿಹಾಸವಿರುವ ಕಾರವಾರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ದಲ್ಲಿ 54 ಕೋಟಿ ಹಣ ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಗ್ರಾಹಕರಲ್ಲಿ ಆತಂಕ ಶುರುವಾಗಿದೆ. ನೂರಾರು ಕೋಟಿ ವ್ಯವಹಾರ ನಡೆಸುತ್ತಿದ್ದ ಈ ಬ್ಯಾಂಕ್ ಮ್ಯಾನೇಜರ್ ವಿರುದ್ಧವೇ ವಂಚನೆ ಆರೋಪ ಕೇಳಿಬಂದಿದೆ. ಇದರಿಂದಾಗಿ ಠೇವಣಿ ಇಟ್ಟಿದ್ದ ಗ್ರಾಹಕರು ಹಣ ಪಡೆಯಲು ಮುಗಿಬಿದ್ದಿದ್ದಾರೆ. ಇದೀಗ ಮ್ಯಾನೇಜರ್ ಅಪಘಾತದಲ್ಲಿ ಮೃತಪಟ್ಟಿರುವುದು ಆಡಳಿತ ಮಂಡಳಿಗೆ ದೊಡ್ಡ ತಲೆ ನೋವಾಗಿ ಪರಿಣಿಮಿಸಿದೆ.
ಸಂಬಂಧಿಕರ ಖಾತೆಗೆ ಹಣ ವರ್ಗಾವಣೆ:ನಗರದ ಪ್ರತಿಷ್ಟಿತ ಕಾರವಾರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಗುರುದಾಸ್ ಬಾಂದೇಕರ್ ಎಂಬುವರು ಕಳೆದ ಮೂರ್ನಾಲ್ಕು ವರ್ಷದಿಂದ ಬ್ಯಾಂಕ್ದಲ್ಲಿ ಠೇವಣಿ ಇಟ್ಟಿದ್ದ ಸುಮಾರು 54 ಕೋಟಿ ಹಣವನ್ನು ತಮ್ಮ ಸಂಬಂಧಿ ಹಾಗೂ ಪರಿಚಯಸ್ಥರ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಲ್ಲದೇ, ಪ್ರತಿ ಬಾರಿಯೂ ಆಡಿಟ್ ಮಾಡುವಾಗ ವಂಚನೆ ಮಾಡಿ ಆಡಿಟ್ ಮಾಡಿಸಿದ ಆರೋಪ ಕೇಳಿಬಂದಿದೆ. ಕಳೆದ ಒಂದು ವರ್ಷದ ಹಿಂದೆ ಮ್ಯಾನೇಜರ್ ಗುರುದಾಸ್ ಅಪಘಾತದಲ್ಲಿ ಮೃತಪಟ್ಟಿದ್ದು, ಸದ್ಯ ಆಡಿಟ್ ಮಾಡಲು ಮುಂದಾದ ವೇಳೆ ಸುಮಾರು 54 ಕೋಟಿ ಹಣ ವಂಚನೆಯಾಗಿರುವುದು ಬೆಳಕಿಗೆ ಬಂದಿದೆ.
ಆಡಳಿತ ಮಂಡಳಿಯಿಂದ ದೂರು: ಇನ್ನು ಬ್ಯಾಂಕ್ನಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ಗ್ರಾಹಕರಿದ್ದು, ಕಾರವಾರದಲ್ಲಿ ಎರಡು ಶಾಖೆಗಳಲ್ಲಿ ಬ್ಯಾಂಕ್ ಕಾರ್ಯನಿರ್ವಹಿಸುತ್ತಿತ್ತು. ಸುಮಾರು 80 ಕೋಟಿಗೂ ಅಧಿಕ ಹಣ ಠೇವಣಿ ಇದ್ದು, 9 ಕೋಟಿ ಸಾಲವನ್ನು ಬ್ಯಾಂಕಿನಿಂದ ನೀಡಲಾಗಿತ್ತು. ಸದ್ಯ 54 ಕೋಟಿ ಹಣ ವಂಚನೆ ಮಾಡಿದ್ದು, ಯಾರ ಯಾರ ಖಾತೆಗೆ ಹಣ ವರ್ಗಾವಣೆ ಆಗಿದೆ. ಇದರ ಹಿಂದೆ ಯಾರಿದ್ದಾರೆ ಎನ್ನುವುದರ ಬಗ್ಗೆ ತನಿಖೆ ನಡೆಸಲು ಆಡಳಿತ ಮಂಡಳಿ ಕಾರವಾರ ನಗರ ಠಾಣೆಯಲ್ಲಿ ದೂರನ್ನು ಸಹ ದಾಖಲಿಸಿದೆ.