ದೊಡ್ಡಬಳ್ಳಾಪುರ: ಮನೆಯ ಒಡವೆಗಳನ್ನು ಅಡವಿಟ್ಟು, 5 ಲಕ್ಷ ರೂಪಾಯಿ ಖರ್ಚು ಮಾಡಿ ಅಡಕೆ ತೋಟವನ್ನು ಮಾಡಲಾಗಿತ್ತು. 1 ಕಿ.ಮೀ ದೂರದಿಂದ ನೀರಿನ ಪೈಪ್ ಮೂಲಕ ತೋಟಕ್ಕೆ ನೀರು ಹರಿಸಲಾಗುತ್ತಿತ್ತು, ಆದರೆ, ಹಳೇ ದ್ವೇಷಕ್ಕೆ ಅಡಕೆ ತೋಟ ಬಲಿಯಾಗಿದೆ, ನಕಾಶೆ ರಸ್ತೆಗಾಗಿ ನಡೆದ ಎರಡು ಕುಟುಂಬಗಳ ನಡುವಿನ ದ್ವೇಷಕ್ಕೆ 50 ಅಡಕೆ ಗಿಡಗಳನ್ನು ಕಡಿದು ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ಗಾಣದಾಳ ಗ್ರಾಮದಲ್ಲಿ ಏಪ್ರಿಲ್ 29ರ ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ಶಿವಶಂಕರ್ ಎಂಬುವರಿಗೆ ಸೇರಿದ 50ಕ್ಕೂ ಅಡಕೆ ಗಿಡಗಳನ್ನ ಕತ್ತರಿಸಿ ಹಾಕಲಾಗಿದೆ. ಗಾಣದಾಳ ಗ್ರಾಮದ ಸರ್ವೇ ನಂ.8/1ರ 29 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ನಕಾಶೆ ರಸ್ತೆಗಾಗಿ ಶಿವಶಂಕರ್ ಮತ್ತು ಅದೇ ಗ್ರಾಮದ ಮಂಜುನಾಥ ಕುಟುಂಬದ ಮಧ್ಯೆ ಜಗಳ ನಡೆದಿತ್ತು. ನಕಾಶೆಯಲ್ಲಿದ್ದಂತೆ ಗ್ರಾ.ಪಂ ವತಿಯಿಂದ ಶಿವಶಂಕರ್ ರಸ್ತೆ ಮಾಡಿಸಿಕೊಂಡಿದ್ದರು. ಇದೇ ದ್ವೇಷಕ್ಕೆ ಎರಡು ವರ್ಷದ ಅಡಕೆ ಗಿಡಗಳನ್ನ ಕತ್ತರಿ ಹಾಕಿದ್ದಾರೆ ಎಂಬುದು ಶಿವಶಂಕರ್ ಅವರ ಆರೋಪವಾಗಿದೆ.