ಶಿವಮೊಗ್ಗ: ಗಾಜನೂರು ಅಣೆಕಟ್ಟೆಗೆ ಒಳಹರಿವು ಹೆಚ್ಚಾಗಿದೆ. 50 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹೀಗಾಗಿ, ನದಿಗೆ ಇಷ್ಟೇ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ.
ಅಣೆಕಟ್ಟೆಯಿಂದ ನದಿಗೆ ಹೆಚ್ಚಿನ ಪ್ರಮಾಣದ ನೀರು ಬಿಡಲು ಪ್ರಾರಂಭಿಸಿದರೆ ನದಿ ಪಕ್ಕದ ಇಮಾನ್ ಬಾಡ, ಕುಂಬಾರಗುಂಡಿ, ಕುರುಬರ ಪಾಳ್ಯ, ಬಾಪೂಜಿ ನಗರ, ರಾಜೀವ್ ಗಾಂಧಿ ನಗರ, ವಿದ್ಯಾನಗರದ ಕೆಲವು ಭಾಗಕ್ಕೆ ನೀರು ನುಗ್ಗುತ್ತದೆ.
ಜಿಲ್ಲೆಯಲ್ಲಿ ಇನ್ನೂ ಮೂರು ದಿನ ಭಾರೀ ಮಳೆಯಾಗುವ ಸಂಭವವಿದ್ದು ಮಂಗಳವಾರ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ತುಂಗಾ ಅಣೆಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಣೆಕಟ್ಟೆಯ ಪ್ರಸ್ತುತ ಒಳಹರಿವು ಹಾಗೂ ಹೊರಹರಿವಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆದುಕೊಂಡರು. ಪ್ರಸ್ತುತ ಮಳೆ ಪ್ರಮಾಣ ಹೆಚ್ಚಿರುವ ಕಾರಣ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾರ್ಗದರ್ಶನ ನೀಡಿದರು. ಮಳೆ ಅಧಿಕವಾಗುತ್ತಿರುವ ಕಾರಣ ನದಿ ಪಾತ್ರದ ಜನತೆಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆಯೂ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.