ಕರ್ನಾಟಕ

karnataka

ETV Bharat / state

ಹೈಫೈ ಮನೆಗಳೇ ಇವರ ಟಾರ್ಗೆಟ್: ರಾತ್ರಿ ವೇಳೆ ಕನ್ನ ಹಾಕುತ್ತಿದ್ದ ದಂಪತಿ ಸೇರಿ ಐವರು ಅರೆಸ್ಟ್ - HOUSE ROBBERY

ಬೀಗ ಹಾಕಿರುವ ಮನೆಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ದಂಪತಿ ಸೇರಿ ಐವರನ್ನು ಬಂಧಿಸಲಾಗಿದೆ.

ಬೆಂಗಳೂರಲ್ಲಿ ಮನೆ ಕಳ್ಳರು ಅರೆಸ್ಟ್
ಬೆಂಗಳೂರಲ್ಲಿ ಮನೆ ಕಳ್ಳರು ಅರೆಸ್ಟ್ (ETV Bharat)

By ETV Bharat Karnataka Team

Published : Nov 5, 2024, 8:26 PM IST

ಬೆಂಗಳೂರು: ನಗರದಲ್ಲಿ ರಾತ್ರಿ ವೇಳೆ ಬೀಗ ಹಾಕಿರುವ ಮನೆಗಳನ್ನ ಗುರುತಿಸಿಕೊಂಡು ಹೊಂಚು ಹಾಕಿ ಮನೆಗಳ್ಳತನ ಮಾಡುತ್ತಿದ್ದ ದಂಪತಿ ಸೇರಿ ಐವರನ್ನ ಪೀಣ್ಯ ಠಾಣೆ ಪೊಲೀಸರು ಹೆಡೆಮುರಿಕಟ್ಟಿದ್ದಾರೆ.

ಪೀಣ್ಯದ ಹೆಚ್ಎಂಟಿ ಬಡಾವಣೆಯ ಬೀಗ ಹಾಕಿರುವ ಮನೆಯೊಂದಕ್ಕೆ ಕಳೆದ ತಿಂಗಳು ನುಗ್ಗಿದ್ದ ಖದೀಮರು, ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿವಿಧ ಆಯಾಮಗಳಿಂದ ತನಿಖೆ ನಡೆಸಿ ದಂಪತಿ ಗೌತಮ್ ಶೆಟ್ಟಿ ಹಾಗೂ ಸೀಬಾ ಸಹಚರರಾದ ಮಾಣಿಕ್ಯ, ದಯಾನಂದ ಹಾಗೂ ನರಸಿಂಹನಾಯಕ್ ಎಂಬುವರನ್ನ ಬಂಧಿಸಿದ್ದಾರೆ. ಇವರಿಂದ 21 ಲಕ್ಷ ಮೌಲ್ಯದ 1.8 ಕೆ.ಜಿ. ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತರಾಗಿರುವ ಗೌತಮ್ ಹಾಗೂ ಸೀಬಾ ಇಬ್ಬರು ಜೊತೆಗೂಡಿ ಹಗಲಿನಲ್ಲಿ ಬೀಗ ಹಾಕಿರುವ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಗೌತಮ್ ವಿರುದ್ಧ ಕೊಲೆ, ಕಳ್ಳತನ ಸೇರಿದಂತೆ ವಿವಿಧ ಪ್ರಕರಣ ದಾಖಲಾಗಿದ್ದು, ಇತ್ತೀಚೆಗಷ್ಟೆ ಜಾಮೀನು ಪಡೆದು ಹೊರಬಂದಿದ್ದ. ಜೈಲಿನಲ್ಲಿರುವಾಗ ಸಹ ಆರೋಪಿ ಮಾಣಿಕ್ಯನ ಪರಿಚಯವಾಗಿ ಕ್ರಮೇಣ ಸ್ನೇಹಕ್ಕೆ ತಿರುಗಿತ್ತು. ಜಾಮೀನು ಪಡೆಯಲು ತನಗೆ ಯಾರು ಮುಂದೆ ಬರುತ್ತಿಲ್ಲ ಎಂದು ಮಾಣಿಕ್ಯ ಆಳಲುತೋಡಿಕೊಂಡಿದ್ದ. ಜಾಮೀನು ಪಡೆದು ಹೊರಬಂದ ಗೌತಮ್, ಬಳಿಕ ಜೈಲು ಗೆಳೆಯನಾಗಿ ಬೇಲ್ ಕೊಡಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಜಾಮೀನು ಸಿಕ್ಕ ಬಳಿಕ ಮಾಣಿಕ್ಯ ಸಹ ಆರೋಪಿಗಳ ಜೊತೆ ಸೇರಿ ಅಪರಾಧ ಕೃತ್ಯವೆಸಗುವುದನ್ನ ಮುಂದುವರಿಸಿದ್ದ. ದಂಪತಿ ತೋರಿಸಿದ ಮನೆಗಳನ್ನ ಮಾಣಿಕ್ಯ ಹಾಗೂ ಇನ್ನಿತರರು ಹೋಗಿ ಕಳ್ಳತನ ಮಾಡುತ್ತಿದ್ದರು. ಮಹಿಳಾ ಆರೋಪಿ ಸೀಬಾ ಮುಖಾಂತರ ವಿವಿಧ ಗೋಲ್ಡ್ ಶಾಪ್​​ಗಳಲ್ಲಿ ಚಿನ್ನ ಅಡವಿಟ್ಟು ಅದರಿಂದ ಬಂದ ಹಣವನ್ನ ಸಮನಾಗಿ ಆರೋಪಿಗಳು ಹಂಚಿಕೊಳ್ಳುತ್ತಿದ್ದರು. ಬಂಧಿತರೆಲ್ಲರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: 155 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಸೆರೆ; ₹24 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ

ABOUT THE AUTHOR

...view details