ಮಂಗಳೂರು: ಭಿಕ್ಷುಕಿಯೊಬ್ಬಳು ಭಿಕ್ಷಾಟನೆಗೆ ಹೋಗಿದ್ದಾಗ ಆಕೆಯ ಮಗುವನ್ನು ಅಪಹರಿಸಿದ ಮತ್ತೋರ್ವ ಭಿಕ್ಷುಕಿಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ(ವಿಶೇಷ) ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ 10 ಸಾವಿರ ದಂಡ ವಿಧಿಸಿದೆ. ರುಬಿಯಾ ಯಾನೆ ಫಾತಿಮಾ(44) ಶಿಕ್ಷೆಗೊಳಗಾದ ಭಿಕ್ಷುಕಿ.
2016 ಇಸವಿಯ ಡಿಸೆಂಬರ್ ತಿಂಗಳಿನಲ್ಲಿ ಆರೋಪಿ ರುಬಿಯಾ ಮಂಗಳೂರಿಗೆ ಭಿಕ್ಷಾಟನೆಗೆಂದು ಕಂಕನಾಡಿ ಜಂಕ್ಷನ್ ರೈಲ್ವೆ ಸ್ಟೇಷನ್ ಬಳಿ ಬಂದಿದ್ದಳು. ಈಕೆ ಮತ್ತೋರ್ವ ಭಿಕ್ಷುಕಿ ಸಂಶಾದ್ಳ ಪರಿಚಯವನ್ನು ಮಾಡಿಕೊಂಡು ಆಕೆಯ ಜೊತೆ ಸಲುಗೆಯಿಂದ ಜೊತೆಯಲ್ಲಿದ್ದಳು. ರುಬಿಯಾ 2017 ಜನವರಿ 12 ರಂದು ಕಂಕನಾಡಿ ರೈಲ್ವೆ ಜಂಕ್ಷನ್ ಬಳಿಯ ವಾಹನಗಳ ಪಾರ್ಕಿಂಗ್ ಸ್ಥಳದ ಬಳಿ ಮತ್ತೊಬ್ಬ ಭಿಕ್ಷುಕಿಯ 7 ತಿಂಗಳ ಹಸುಗೂಸನ್ನು ಮಲಗಿಸಿ ಭಿಕ್ಷಾಟನೆಗಾಗಿ ಹೋದ ಸಮಯವನ್ನು ನೋಡಿ ಅಪಹರಣ ಮಾಡಿದ್ದಳು.
ರುಬಿಯಾ ಮಗುವನ್ನು ಬೇರೆ ಕಡೆ ಬಿಟ್ಟು ವಾಪಸ್ ಬಾಧಿತಳೊಂದಿಗೆ ಮಗುವನ್ನು ಹುಡುಕುವ ನಾಟಕವನ್ನಾಡಿ ಆ ಬಳಿಕ ಮಗುವಿನೊಂದಿಗೆ ಪರಾರಿಯಾಗಿದ್ದಳು. ಆರೋಪಿತೆ ಮಗುವನ್ನು ಹಿಡಿದುಕೊಂಡು ಊರೂರು ತಿರುಗಾಡಿಕೊಂಡು ಮಗುವನ್ನು ತೋರಿಸಿಕೊಂಡು ಭಿಕ್ಷಾಟನೆ ಮಾಡುತ್ತಿದ್ದಳು. 2020 ಜನವರಿ 22 ರಂದು ಮೈಸೂರು ನಗರದ ಮಂಡಿ ಪೊಲೀಸ್ ಠಾಣಾ ಸರಹದ್ದಿನ ಮಂಡಿ ಮೊಹಲ್ಲಾ ಗ್ರಾಮದ, ಅಶೋಕ ರಸ್ತೆಯಲ್ಲಿರುವ ಮಸೀದ್-ಇ- ಅಜಮ್ ಮಸೀದಿಯ ಎದುರಿನಲ್ಲಿ ಮಗುವನ್ನು ತನ್ನ ಬಳಿ ಕೂರಿಸಿಕೊಂಡು ತಾನು ಭಿಕ್ಷಾಟನೆಯನ್ನು ಮಾಡುತ್ತಿದ್ದಲ್ಲದೆ, ಮಗುವಿನಿಂದಲೂ ಭಿಕ್ಷಾಟನೆಯನ್ನು ಮಾಡಿಸಿಕೊಂಡು ಶೋಷಣೆಗೆ ಒಳಪಡಿಸುತ್ತಿದ್ದ ವೇಳೆ ಮಗುವನ್ನು ಕಳೆದುಕೊಂಡ ಭಿಕ್ಷುಕಿ ತನ್ನ ಮಗು ಮತ್ತು ಆರೋಪಿತೆಯನ್ನು ಗುರುತಿಸಿದ್ದಳು.