ಧಾರವಾಡ:''ಮೊದಲು ದೇಶದಲ್ಲಿ ಉಗ್ರಗಾಮಿ ಚಟುವಟಿಕೆ ನಡೆಯುತ್ತಿದ್ದವು. ಆದರೆ, 370ನೇ ವಿಧಿ ರದ್ದುಗೊಳಿಸಿದ ನಂತರ ಉಗ್ರ ಚಟುವಟಿಕೆ ಸಂಪೂರ್ಣ ಬಂದ್ ಮಾಡಲಾಗಿದೆ'' ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ತಾಲೂಕಿನ ನರೇಂದ್ರ ಗ್ರಾಮದಲ್ಲಿ ಆಯೋಜಿಸಿದ್ದ ಸಂಸದ ಕ್ರೀಡೋತ್ಸವದ ಕಬ್ಬಡಿ ಪಂದ್ಯ ಉದ್ಘಾಟಿಸಿ ಮಾತನಾಡಿದ ಅವರು, ''ಹಿಂದೆ ಬೆಂಗಳೂರು, ಹೈದರಾಬಾದ್ನಲ್ಲಿ ಬಾಂಬ್ ಹಾರುತ್ತಿದ್ದವು. ಈಗ ಎಲ್ಲಿಯಾದರೂ ಬಾಂಬ್ ಹಾರುತ್ತಿವೆಯಾ? ಪ್ರಸ್ತುತ ಎಲ್ಲಾ ಉಗ್ರ ಚಟುವಟಿಕೆಗಳು ಬಂದ್ ಆಗಿವೆ. ಏಕೆಂದರೆ, ಆರ್ಟಿಕಲ್ 370 ಅನ್ನು ಕಿತ್ತೆಸೆಯಲಾಗಿದೆ. ಮೊದಲು ದೇಶದೊಳಗೆ ಬಂದು ಬಾಂಬ್ ಹಾಕುತ್ತಿದ್ದರು. ಈಗ ನಾವು ಪಾಕಿಸ್ತಾನದ ಅವರ ಮನೆಗೆ ನುಗ್ಗಿ ಹೊಡೆಯುತ್ತಿದ್ದೇವೆ. ಚೀನಾಗೂ ಎದುರುತ್ತರ ಕೊಡುತ್ತಿದ್ದೇವೆ'' ಎಂದು ಹೇಳಿದರು. ಇದಕ್ಕೆಲ್ಲ ಮೋದಿಯವರು ಆರ್ಟಿಕಲ್ 370 ತೆಗೆದಿದ್ದೆ ಮೂಲ ಕಾರಣವಾಗಿದೆ. ಇದರಿಂದ ಬಿಜೆಪಿಗೆ 370 ಸ್ಥಾನ ತಾವು ಆರಿಸಿ ಕಳುಹಿಸಬೇಕು. 370ನೇ ವಿಧಿ ರದ್ದುಪಡಿಸಿದ ನರೇಂದ್ರ ಮೋದಿಯವರಿಗೆ 370 ಸ್ಥಾನಗಳ ಗಿಫ್ಟ್ ಕೊಡಬೇಕು ಎಂದು ಮನವಿ ಮಾಡಿದರು.
ಚನ್ನಮ್ಮ ವಿವಿಗೆ 100 ಕೋಟಿ, ಧಾರವಾಡ, ಗುಲ್ಬರ್ಗಾ ವಿವಿಗಳಿಗೆ 20 ಕೋಟಿ ರೂ. ಬಿಡುಗಡೆ:(ಬೆಳಗಾವಿ) ''ಕರ್ನಾಟಕ, ಜಮ್ಮು-ಕಾಶ್ಮೀರ ಸೇರಿದಂತೆ ದೇಶದ ಅನೇಕ ವಿಶ್ವ ವಿದ್ಯಾಲಯಗಳಿಗೆ ಕೇಂದ್ರ ಸರ್ಕಾರ 3,600 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ'' ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ನಡೆದ ನೇರಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾತನಾಡಿದ ಅವರು, ''ಪ್ರಧಾನಮಂತ್ರಿ ಉಷಾ ಯೋಜನೆಯಡಿ 78 ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅನುದಾನ ಬಿಡುಗಡೆ ಮಾಡಿದ್ದಾರೆ. ಉಷಾ ಯೋಜನೆಯಡಿ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ 100 ಕೋಟಿ ರೂ., ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ 20 ಕೋಟಿ ರೂ. ಹಾಗೂ ಧಾರವಾಡ ವಿಶ್ವವಿದ್ಯಾಲಯಕ್ಕೆ 20 ಕೋಟಿ ರೂ. ದೊರೆಯಲಿದೆ'' ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.