ಶಿವಮೊಗ್ಗ:ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಿಗೆರಸು ಗ್ರಾಮದ ಹಿಂಡ್ಲೆಮನೆಯಲ್ಲಿ ಸುಮಾರು 3500 ವರ್ಷ ಹಳೆಯದಾದ ನವಶಿಲಾಯುಗ ಕಾಲದ ಡೋಲೆರೈಟ್ ಕಲ್ಲಿನ ಉಂಗುರ ಪತ್ತೆಯಾಗಿದೆ.
ನವ ಶಿಲಾಯುಗ ಕಾಲದ ಅತ್ಯಂತ ಅಮೂಲ್ಯವಾದ ಡೋಲೆರೈಟ್ ಕಲ್ಲಿನ ಉಂಗುರವು ಹಿಂಡ್ಲೆಮನೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಿಕ್ಷಕ ಹನುಮಂತಪ್ಪ ಅವರಿಗೆ ಸಿಕ್ಕಿದೆ. ಈ ಪ್ರದೇಶವು ಮೊದಲು ಜನವಸತಿ ಆರಂಭವಾಗಿರುವುದಕ್ಕೆ ಜೀವಂತ ಸಾಕ್ಷಿಯಾಗಿದೆ. ಈ ಅವಧಿಯಲ್ಲಿ ನೆಲೆಗೊಂಡ ಮಾನವನ ಜೀವನಶೈಲಿಯ ಆರಂಭದ ದಿನಗಳನ್ನು ಇದರಿಂದ ತಿಳಿಯಬಹುದಾಗಿದೆ. ಈ ಸ್ಥಳವು ಹೊಸನಗರ ಪಟ್ಟಣದಿಂದ ಸುಮಾರು 20 ಕಿ. ಮೀ. ಮತ್ತು ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ 55 ಕಿ. ಮೀ ದೂರದಲ್ಲಿದೆ.
ಈ ಕುರಿತು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ ಇತಿಹಾಸ ಸಂಶೋಧಕ ಅಜಯ್ ಶರ್ಮ, ಕಬ್ಬಿಣದ ಆವಿಷ್ಕಾರಕ್ಕೂ ಮೊದಲು ತಯಾರಿಸಲಾದ ಈ ಕಲ್ಲಿನ ಉಂಗುರವನ್ನು ಅಗೆಯಲು ಮತ್ತು ಮೀನು ಹಿಡಿಯಲು ಬಲೆಗಳನ್ನು ನೀರಿನಲ್ಲಿ ಮುಳುಗಿಸಲು ಒಂದು ತೂಕವಾಗಿ ಮತ್ತು ಮಣಿಗಳಿಗೆ ಹೊಳಪು ಕೊಡಲು ಆಧಾರವಾಗಿ ಬಳಸಲಾಗುತ್ತಿತ್ತು ಎಂದಿದ್ದಾರೆ.