ಕರ್ನಾಟಕ

karnataka

ETV Bharat / state

ಜು.18 ರಂದು ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಘಟಿಕೋತ್ಸವ: ಇಸ್ರೋ ಅಧ್ಯಕ್ಷ ಸೋಮನಾಥ್ ಸೇರಿ ಮೂವರಿಗೆ ಡಾಕ್ಟರ್ ಆಫ್ ಸೈನ್ಸ್ - VTU CONVOCATION - VTU CONVOCATION

ಇಸ್ರೋ ಅಧ್ಯಕ್ಷ ಡಾ‌. ಎಸ್. ಸೋಮನಾಥ್ ಸೇರಿ ಮೂವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಪದವಿ ಪ್ರದಾನ ಮಾಡಲಾಗುವುದು ಎಂದು ಕುಲಪತಿ ಪ್ರೊ.ವಿದ್ಯಾಶಂಕರ ತಿಳಿಸಿದರು.

ಕುಲಪತಿ ಪ್ರೊ.ವಿದ್ಯಾಶಂಕರ
ಕುಲಪತಿ ಪ್ರೊ.ವಿದ್ಯಾಶಂಕರ (ETV Bharat)

By ETV Bharat Karnataka Team

Published : Jul 15, 2024, 8:18 PM IST

Updated : Jul 15, 2024, 8:31 PM IST

ಕುಲಪತಿ ಪ್ರೊ.ವಿದ್ಯಾಶಂಕರ (ETV Bharat)

ಬೆಳಗಾವಿ:ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 24ನೇ ಘಟಿಕೋತ್ಸವ ಜುಲೈ 18ರಂದು ವಿಶ್ವವಿದ್ಯಾಲಯದ ಜ್ಞಾನ ಸಂಗಮ ಆವರಣದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಕುಲಪತಿ ಪ್ರೊ.ವಿದ್ಯಾಶಂಕರ ಎಸ್ ತಿಳಿಸಿದರು.

ಇಂದು ವಿಶ್ವವಿದ್ಯಾಲಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ‌.ಎಂ.ಸಿ.ಸುಧಾಕರ್ ಉಪಸ್ಥಿತಿ ಇರಲಿದ್ದಾರೆ. ಭಾರತೀಯ ವಿಜ್ಞಾನ ಮಂದಿರ(ಐಐಎಸ್​ಸಿ) ನಿರ್ದೇಶಕ ಪ್ರೊ. ಗೋವಿಂದನ್ ರಂಗರಾಜನ್ ಮುಖ್ಯ ಅತಿಥಿಯಾಗಿ ಆಗಮಿಸಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.

ಮೂವರಿಗೆ ಡಾಕ್ಟರ್ ಆಫ್ ಸೈನ್ಸ್:ಚಿಕ್ಕಬಳ್ಳಾಪುರದ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ್ ಸಾಯಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಅಧ್ಯಕ್ಷ ಡಾ‌.ಎಸ್.ಸೋಮನಾಥ್, ಬೆಂಗಳೂರು ಇಂಟರ್ ನ್ಯಾಶನಲ್ ಏರ್​ಪೋರ್ಟ್ ಲಿಮಿಟೆಡ್(ಬಿಐಎಎಲ್) ವ್ಯವಸ್ಥಾಪನಾ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶ್ರೀಹರಿ ಕೆ ಮರಾರ್ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಪದವಿ ಪ್ರದಾನ ಮಾಡಲಾಗುವುದು ಎಂದು ಕುಲಪತಿಗಳು ವಿವರಿಸಿದರು.

ಬೆಳಗಾವಿ ಕುವರನಿಗೆ 12 ಚಿನ್ನದ ಪದಕ:ಬೆಳಗಾವಿಯ ಕೆಎಲ್ಇ ಡಾ.ಎಂ.ಎಸ್.ಶೇಷಗಿರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಾಜಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಾಹಿಲ್ ಮೋಹನ ಸೋಮನಾಚೆ 12 ಚಿನ್ನದ ಪದಕ ಗಳಿಸಿದ್ದಾರೆ.

ಅದೇ ರೀತಿ ಬೆಂಗಳೂರು ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಾಜಿಯ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಜಿ‌. ವಿಷ್ಣು ಪ್ರಿಯಾ 10 ಚಿನ್ನದ ಪದಕ, ಬೆಂಗಳೂರು ಎಸ್.ಜೆ.ಬಿ. ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಾಜಿಯ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ರೇಷ್ಮಾ ಜಿ‌‌. 7 ಚಿನ್ನದ ಪದಕ, ಬೆಂಗಳೂರು ಎಸ್.ಜೆ.ಬಿ. ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಾಜಿಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮೋಹನಕುಮಾರ ಎಲ್. 7 ಚಿನ್ನದ ಪದಕ, ಬಳ್ಳಾರಿ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಾಜಿ ಆಂಡ್ ಮ್ಯಾನೇಜ್ಮೆಂಟ್​​ನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಹೃತಿಕಾ ಜಿ. 7 ಚಿನ್ನದ ಪದಕ ಪಡೆದಿದ್ದಾರೆ.

ಬೆಂಗಳೂರಿನ ಏಟ್ರಿಯಾ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದ ಕೃತಿಕಾ ಸೆಂಥಿಲ್ 4 ಚಿನ್ನದ ಪದಕ, ಬೆಂಗಳೂರಿನ ಆರ್.ಎನ್.ಎಸ್. ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಶನ್​ ಇಂಜಿನಿಯರಿಂಗ್ ವಿಭಾಗದ ಅನುಶ್ರೀ ಪಿ. 4 ಚಿನ್ನದ ಪದಕ, ಕೆಜಿಎಫ್​ನ ಡಾ. ಟಿ‌. ತಿಮ್ಮಯ್ಯ ಇನ್ಸ್​ಟಿಟ್ಯೂಟ್​ ಆಫ್ ಟೆಕ್ನಾಲಜಿಯ ಮೈನಿಂಗ್ ಇಂಜಿನಿಯರಿಂಗ್ ವಿಭಾಗದ ಮಾಲತೇಶ ಎನ್‌. 2 ಚಿನ್ನದ ಪದಕ, ದಾವಣಗೆರೆಯ ಜಿ.ಎಂ. ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿಯ ಬಯೋ ಟೆಕ್ನಾಲಜಿ ಇಂಜಿನಿಯರಿಂಗ್ ವಿಭಾಗದ ಜನನಿ ಡಿ. 2 ಚಿನ್ನದ ಪದಕ ಹಾಗೂ ಮಂಗಳೂರಿನ ಶ್ರೀದೇವಿ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿಯ ಏರೋನಾಟಿಕಲ್ ಇಂಜಿನಿಯರಿಂಗ್ ವಿಭಾಗದ ಸೌರವ ವಿ ಇಂಗಲ್ 2 ಚಿನ್ನದ ಪದಕಗಳನ್ನು ಗೆಲ್ಲಿಸಿದ್ದಾರೆ.

ಬಿಇ - 35,697, ಬಿಟೆಕ್-45, ಬಿ.ಪ್ಲಾನ್-08, ಬಿ.ಆರ್ಚ್-969, 339 ಪಿಎಚ್.ಡಿ ಹಾಗೂ 01 ಎಂಎಸ್ಸಿ ಸಂಶೋಧನಾ ಪದವಿಗಳನ್ನು ವಿದ್ಯಾರ್ಥಿಗಳಿಗೆ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಗುತ್ತದೆ ಎಂದು ಕುಲಪತಿ ಪ್ರೊ.ವಿದ್ಯಾಶಂಕರ ಎಸ್. ತಿಳಿಸಿದರು. ಈ ವೇಳೆ ಕುಲಸಚಿವ ಪ್ರೊ.ಬಿ.ಈ.ರಂಗಸ್ವಾಮಿ, ಪ್ರೊ.ಟಿ.ಎನ್. ಶ್ರೀನಿವಾಸ ಇದ್ದರು.

ಇದನ್ನೂ ಓದಿ:ದ್ವಿತೀಯ ಪಿಯುಸಿ ಪರೀಕ್ಷೆ-3 ಫಲಿತಾಂಶ ನಾಳೆ ಪ್ರಕಟ: ಈ ಸಮಯಕ್ಕೆ ಅಧಿಕೃತ ವೆಬ್​ಸೈಟ್​ನಲ್ಲಿ ಲಭ್ಯ - Second PUC exam 3 results

Last Updated : Jul 15, 2024, 8:31 PM IST

ABOUT THE AUTHOR

...view details