ಬೆಂಗಳೂರು: ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ನೀರಿನ ಬಳಕೆಯನ್ನು ಮಿತವಾಗಿಸಬೇಕು ಹಾಗೂ ಅನಗತ್ಯವಾಗಿ ಕುಡಿಯುವ ನೀರಿನ ಪೋಲು ಮಾಡಬಾರದು ಎಂದು ಜಲಮಂಡಳಿ ಆದೇಶಿಸಿದೆ. ಈ ಆದೇಶವನ್ನು ನಗರದ ಹಲವು ಭಾಗಗಳಲ್ಲಿ ಉಲ್ಲಂಘಿಸುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ 22 ಮನೆಗಳಿಗೆ ದಂಡ ವಿಧಿಸಲಾಗಿದೆ.
ಕಾವೇರಿ ನೀರು ಮತ್ತು ಬೋರ್‌ವೆಲ್ ನೀರನ್ನು ಕುಡಿಯುವ ಉದ್ದೇಶ ಹೊರತುಪಡಿಸಿ ಅನ್ಯ ಉದ್ದೇಶಕ್ಕೆ ಬಳಸಿದ ಹಿನ್ನೆಲೆ ಜಲಮಂಡಳಿಯ ಅಧಿಕಾರಿಗಳು ಒಟ್ಟು 22 ಕುಟುಂಬಗಳಿಗೆ ದಂಡ ವಿಧಿಸಿದ್ದಾರೆ. ನಗರದ ಹಲವು ಭಾಗಗಳಲ್ಲಿ ಕುಡಿಯುವ ನೀರನ್ನು ಬಳಸಿಕೊಂಡು ವಾಹನಗಳನ್ನು ತೊಳೆಯುವುದು, ಅಂಗಳವನ್ನು ತೊಳೆಯುವ ಮೂಲಕ ಅನಗತ್ಯವಾಗಿ ಪೋಲು ಮಾಡಲಾಗುತ್ತಿದೆ. ಕಾರು, ಬೈಕ್‌ಗಳನ್ನು ತೊಳೆದರೆ ದಂಡ ವಿಧಿಸುವುದಾಗಿ ಈ ಹಿಂದೆಯೇ ಜಲಮಂಡಳಿ ಸೂಚನೆ ನೀಡಿತ್ತು. ಆದರೂ ನಿಯಮ ಉಲ್ಲಂಘಿಸಿ ವಾಹನ ತೊಳೆಯುತ್ತಿದ್ದವರಿಗೆ ಜಲಮಂಡಳಿಯು 5000ರೂಪಾಯಿ ದಂಡ ವಿಧಿಸಿದೆ.
ಕಾವೇರಿ ನೀರು ವ್ಯರ್ಥ ಮಾಡದಂತೆ ಜಲಮಂಡಳಿ ಈಗಾಗಲೇ ಸೂಚನೆ ನೀಡಿತ್ತು. ಕಾರ್ ತೊಳೆಯುವುದು, ಹೂ ತೋಟಕ್ಕೆ ಕಾವೇರಿ ನೀರು ಬಳಸದಂತೆ ಸೂಚಿಸಿದೆ. ಇದರ ಹೊರತಾಗಿಯೂ ಕಾರ್ ವಾಶ್‌ಗೆ ಕಾವೇರಿ ನೀರು ಬಳಕೆ ಮಾಡಿದ್ದಕ್ಕೆ ದಂಡ ವಿಧಿಸಲಾಗಿದೆ. ಸದಾಶಿವನಗರದಲ್ಲಿ ಕಾವೇರಿ ನೀರಿನಿಂದ ಕಾರ್ ವಾಶ್ ಮಾಡುತ್ತಿದ್ದ ಮಹಿಳೆಗೆ ಸ್ಥಳದಲ್ಲಿಯೇ 5,000 ರೂಪಾಯಿ ದಂಡ ವಿಧಿಸಲಾಗಿದೆ. ಮಹಾದೇವಪುರ, ಡಾಲರ್ಸ್ ಕಾಲೋನಿಯಲ್ಲಿ ಇಬ್ಬರಿಗೆ ಸ್ಥಳದಲ್ಲೇ ಜಲಮಂಡಳಿಯ ಅಧಿಕಾರಿಗಳು ದಂಡ ವಿಧಿಸಿದ್ದಾರೆ.
ದಂಡ ವಿಧಿಸಿದ ಮಾಹಿತಿ
ವಲಯಪ್ರಕರಣಗಳ ಸಂಖ್ಯೆ ದಂಡ ಸಂಗ್ರಹ
ಬೆಂಗಳೂರು ಪೂರ್ವ - 1 - 5000 ರೂಪಾಯಿ
ಬೆಂಗಳೂರು ಪೂರ್ವ - 2 - 10,000 ರೂಪಾಯಿ
ಬೆಂಗಳೂರು ಉತ್ತರ - 2 - 10,000 ರೂಪಾಯಿ
ಬೆಂಗಳೂರು ಈಶಾನ್ಯ - 1 - 5000 ರೂಪಾಯಿ
ಬೆಂಗಳೂರು ಆಗ್ನೇಯ - 12 - 60,000 ರೂಪಾಯಿ
ಬೆಂಗಳೂರು ಆಗ್ನೇಯ - 1 - 5000 ರೂಪಾಯಿ
ಬೆಂಗಳೂರು ನೈರುತ್ಯ - 3 - 15,000 ರೂಪಾಯಿ
ಇದನ್ನೂ ಓದಿ:ಕುಡಿಯುವ ನೀರನ್ನು ಅನ್ಯ ಉದ್ದೇಶಕ್ಕೆ ಬಳಸಿದರೆ 5,000 ರೂಪಾಯಿ ದಂಡ: BWSSB ಆದೇಶ