ಚಾಮರಾಜನಗರ:ಇಂಗ್ಲಿಷ್ ಮೇಲಿನ ಅಕ್ಕರೆ, ಕಾನ್ವೆಂಟ್ ವ್ಯಾಮೋಹ ಹಾಗೂ ಸಾರಿಗೆ ತೊಂದರೆಯಿಂದಾಗಿ ಕಳೆದೆರಡು ಶೈಕ್ಷಣಿಕ ವರ್ಷಗಳಲ್ಲಿ 20 ಸರ್ಕಾರಿ ಶಾಲೆಗಳು ಬಂದ್ ಆಗಿವೆ.
2023-24ರಲ್ಲಿ 12 ಮತ್ತು ಈ ಸಾಲಿನಲ್ಲಿ 8 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಶೂನ್ಯ ದಾಖಲಾತಿಯಿಂದ ಬಂದ್ ಆಗಿವೆ. ಪ್ರಿ ಕೆಜಿಗಳನ್ನು ಆರಂಭಿಸಿದರೆ, ಇಂಗ್ಲಿಷ್ ಮಾಧ್ಯಮ ಇದ್ದರೆ, ಶಾಲಾ ವಾಹನ ಸೌಲಭ್ಯ ಕಲ್ಪಿಸಿದರೆ ಮಾತ್ರ ಸರ್ಕಾರಿ ಶಾಲೆಗೆ ಸೇರಿಸುವುದಾಗಿ ಪೋಷಕರು ಶಿಕ್ಷಣ ಇಲಾಖೆಗೆ ತಿಳಿಸುತ್ತಿದ್ದಾರೆ.
ಯಾವ್ಯಾವ ಶಾಲೆಗಳು ಬಂದ್?:2023 ಮತ್ತು 24ನೇ ಸಾಲಿನಲ್ಲಿ ಚಾಮರಾಜನಗರ ತಾಲೂಕಿನ ಸಾಣೇಗಾಲ, ಕಳ್ಳಿಪುರ, ಪುಟ್ಟೇಗೌಡನಹುಂಡಿ, ಹೊಸಹಳ್ಳಿ 2024-25ನೇ ಸಾಲಿನಲ್ಲಿ ಮೂಡ್ಲುಪುರ, ಗೆಜ್ಜಲ್ ಪಾಳ್ಯ, ಅಂಚಿತಾಳಪುರ, ಗೋವಿಂದವಾಡಿ, ಕುರುಬರಹುಂಡಿ ಸರ್ಕಾರಿ ಶಾಲೆಗಳು ಬಂದಾಗಿವೆ. ಮುಚ್ಚಲ್ಪಟ್ಟಿದ್ದ ಕಿರಗಸೂರು ಶಾಲೆಯನ್ನು ಪುನಾರಂಭಿಸಲಾಗಿದೆ.
ಗುಂಡ್ಲುಪೇಟೆ ತಾಲೂಕಿನಲ್ಲಿ 2023-24ನೇ ಸಾಲಿನಲ್ಲಿ ಬರಗಿ ಕಾಲೊನಿ, ಮೇಲುಕಾಮನಹಳ್ಳಿ, ಮರಳಾಪುರ ಶಾಲೆ 2024-25ನೇ ಸಾಲಿನಲ್ಲಿ ಹುತ್ತೂರು, ಕಬ್ಬಳ್ಳಿ, ಈದ್ಗಾ ಮೊಹಲ್ಲಾ, ಹಕ್ಕಲಪುರ ಶಾಲೆಗಳು ಬಂದ್ ಆಗಿದ್ದು ಮುಚ್ಚಲ್ಪಟ್ಟಿದ್ದ ಹೊಸಪುರ, ಉತ್ತನಗೆರೆಹುಂಡಿ ಶಾಲೆಗಳು ಪುನಾರಂಭಗೊಂಡಿವೆ.
ಹನೂರು ತಾಲೂಕಿನಲ್ಲಿ 2024-25ನೇ ಸಾಲಿನಲ್ಲಿ ಚಂಗಡಿ, ಎಡಳಿದೊಡ್ಡಿ ಶಾಲೆಗಳು, ಯಳಂದೂರು ತಾಲೂಕಿನಲ್ಲಿ 2023-24ನೇ ಸಾಲಿನಲ್ಲಿ ದಾಸನಹುಂಡಿ ಶಾಲೆಗಳು ಬಂದ್ ಆಗಿವೆ.
ಶಿಕ್ಷಣ ಇಲಾಖೆಯ ಪ್ರತಿಕ್ರಿಯೆ:ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರ ರಾಜೇ ಅರಸ್ ಮಾತನಾಡಿ, "ಶೂನ್ಯ ದಾಖಲಾತಿ ಹೊಂದಿದ ಗ್ರಾಮಗಳಿಗೆ ತೆರಳಿ ಪಾಲಕರನ್ನು ಮಾತನಾಡಿಸಿದ್ದು, ಇಂಗ್ಲಿಷ್ ಮೀಡಿಯಂ, ಪ್ರೀ ಕೆಜಿಗಳ ಬೇಡಿಕೆ ಮುಂದಿಡುತ್ತಿದ್ದಾರೆ. ಈ ಕುರಿತು ಶಿಕ್ಷಣ ಸಚಿವರ ಜೊತೆ ಮಾತನಾಡಿದ್ದು ಅವರೂ ಕೂಡ ಇದನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಂಡಿದ್ದಾರೆ. ಪಾಲಕರ ಬೇಡಿಕೆಯನ್ನು ಪುರಸ್ಕರಿಸಿ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಯೋಜನೆ ಹಾಕುತ್ತಿದ್ದೇವೆ. 4 ಉರ್ದು ಶಾಲೆಗಳಿರುವ ಊರಿನಲ್ಲಿ ಮುಸ್ಲಿಂ ಸಮುದಾಯದ ಮಕ್ಕಳೇ ಇಲ್ಲ. ಆ ಹಿನ್ನೆಲೆಯಲ್ಲಿ ಅದನ್ನು ಕನ್ನಡ ಮತ್ತು ಉರ್ದು ದ್ವಿಭಾಷಾ ಶಾಲೆಯನ್ನಾಗಿ ಪರಿವರ್ತಿಸಲು ಮುಂದಾಗಿದ್ದೇವೆ. ಶಾಲಾ ವಾಹನ, ಸಾರಿಗೆ ಸೌಲಭ್ಯ ಕೊಟ್ಟರೆ ಮಕ್ಕಳನ್ನು ಕಳುಹಿಸುತ್ತೇವೆ ಎಂಬುದು ಕೂಡ ಹಲವು ಪಾಲಕರ ಬೇಡಿಕೆಯಾಗಿದೆ. ಇದಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಸಿಎಸ್ಆರ್ ಫಂಡ್ನಿಂದ ಶಾಲಾ ವಾಹನ ಕಲ್ಪಿಸುವ ಮತ್ತು ದಾನಿಗಳಿಂದ ಸರ್ಕಾರಿ ಶಾಲೆಯನ್ನು ದುರಸ್ತಿಪಡಿಸಲು ಮುಂದಾಗಿದ್ದೇವೆ" ಎಂದರು.
ಇದನ್ನೂ ಓದಿ:ಹುಬ್ಬಳ್ಳಿ ಹೊಸ ಬಸ್ ನಿಲ್ದಾಣ ಉದ್ಘಾಟನೆ ಯಾವಾಗ?: ಹಳೇ ಬಸ್ ಸ್ಟ್ಯಾಂಡೇ ಉತ್ತಮ ಅಂತಿರೋದೇಕೆ ಜನ?