ಬೆಂಗಳೂರು: ಬಸವನಗುಡಿಯ ಶ್ರೀ ಸಾಯಿ ಪಾರ್ಟಿ ಹಾಲ್ ನಲ್ಲಿ ಶರವಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜ. 10ರಂದು ವೈಕುಂಠ ಏಕಾದಶಿ ಇದ್ದು, ಅದರ ಅಂಗವಾಗಿ ಭಕ್ತರಿಗೆ 1 ಲಕ್ಷ ಲಡ್ಡು ವಿತರಣಾ ಕಾರ್ಯಕ್ರಮಕ್ಕೆ ವಿಶೇಷ ಪೂಜೆ ಸಲ್ಲಿಸಿ ವಿಧಾನಪರಿಷತ್ ಜೆಡಿಎಸ್ ಸದಸ್ಯ ಟಿ. ಎ. ಶರವಣ ಬುಧವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವೈಕುಂಠ ಏಕಾದಶಿ ದಿನದಂದು ಮಹಾವಿಷ್ಣುವಿನ ವೈಕುಂಠ ಮಹಾದ್ವಾರ ತೆರೆಯಲಾಗುತ್ತದೆ ಎಂದು ನಂಬಿಕೆ ಹಿಂದೂ ಧರ್ಮದಲ್ಲಿ ಇದೆ. ಈ ದಿನ ಶ್ರೀ ವೆಂಕಟೇಶ್ವರ ದರ್ಶನ ಪಡೆಯಲಾಗುವುದು. ಅನೇಕರು ಈ ಸಂದರ್ಭದಲ್ಲಿ ಆಂಧ್ರಪ್ರದೇಶದಲ್ಲಿರುವ ತಿರುಮಲ ತಿರುಪತಿಗೆ ಹೋಗಬೇಕು. ಲಡ್ಡು ಪ್ರಸಾದ ಸ್ವೀಕರಿಸಬೇಕು ಎಂಬ ಎಂದು ಬಯಸುತ್ತಾರೆ.
ಆದರೆ, ಎಲ್ಲರೂ ತಿರುಪತಿಗೆ ಹೋಗಲು ಸಾಧ್ಯವಿಲ್ಲ. ಆದ್ದರಿಂದ ತಿರುಪತಿ ಲಡ್ಡು ಮಾದರಿಯಲ್ಲಿ 100 ಬಾಣಸಿಗರಿಂದ ಹಗಲುರಾತ್ರಿ ಎನ್ನದೇ 1 ಲಕ್ಷ ಲಡ್ಡು ತಯಾರಿಸಿದ್ದಾರೆ. ಶುದ್ಧ ತುಪ್ಪ, ಗೋಡಂಬಿ, ದ್ರಾಕ್ಷಿ, ಕಡಲೆಬೇಳೆ ಬಳಸಿ ತಿರುಪತಿಯ ಲಡ್ಡು ಮಾದರಿಯಲ್ಲಿ ತಯಾರಿಸಲಾಗಿದೆ. ಶ್ರೀ ವೆಂಕಟೇಶ್ವರ ದೇವಸ್ಥಾನಗಳಿಗೆ ಬಂದ ಭಕ್ತರಿಗೆ ಲಡ್ಡು ಪ್ರಸಾದ ವಿತರಿಸಲಾಗುವುದು.
ತಿರುಪತಿ ತಿಮ್ಮಪ್ಪ, ಗೋವಿಂದ, ಹರೇ ಶ್ರೀನಿವಾಸ, ವೆಂಕಟೇಶ್ವರ, ಏಳು ಬೆಟ್ಟದ ಒಡೆಯ ಭಕ್ತರು ಅವರವರ ಭಕ್ತಿಭಾವನೆಗೆ ಸ್ಮರಣೆ ಮಾಡುತ್ತಾರೆ. ತಿಮ್ಮಪ್ಪನನ್ನು ನಂಬಿದ ಭಕ್ತರಿಗೆ ಎಂದೂ ಸಂಕಷ್ಟಗಳು ಬರುವುದಿಲ್ಲ. ಸಕಲ ಸಂಕಷ್ಟಗಳು ದೂರವಾಗಲಿ, ರೋಗರುಜಿನಗಳು ಮುಕ್ತವಾಗಲಿ ಮತ್ತು ನಾಡಿನ ಸಮಸ್ತ ಜನರಿಗೆ ಸುಖ, ಶಾಂತಿ ನೆಮ್ಮದ್ಧಿ ಲಭಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಇದನ್ನೂ ಓದಿ: ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಗೆ ಅರ್ಜಿ ಸಲ್ಲಿಕೆಯಲ್ಲಿ ಕರ್ನಾಟಕವೇ ಫಸ್ಟ್; ಏನಿದು ಸ್ಕೀಂ, ರೈತರಿಗೆ ಏನೆಲ್ಲಾ ಲಾಭ?