ದಾವಣಗೆರೆ: ಇಂದು ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ. ಭಾರತದಲ್ಲಿ ಹೆಣ್ಣು ಮಗು ಎದುರಿಸುತ್ತಿರುವ ಶಿಕ್ಷಣ, ಪೋಷಣೆ, ಬಾಲ್ಯವಿವಾಹ, ಕಾನೂನು ಹಕ್ಕುಗಳು ಮತ್ತು ವೈದ್ಯಕೀಯ ಆರೈಕೆ, ರಕ್ಷಣೆ, ಗೌರವದಂತಹ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದೇ ಹೆಣ್ಣು ಮಕ್ಕಳ ದಿನದ ಉದ್ದೇಶ. ಇಂತಹ ಸಂಭ್ರಮದ ದಿನದಂದೇ ದಾವಣಗೆರೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 14 ಹೆಣ್ಣುಮಕ್ಕಳ ಜನನವಾಗಿದ್ದು, ಆಸ್ಪತ್ರೆಗಳಲ್ಲಿ ಸಂಭ್ರಮ ಮನೆ ಮಾಡಿದೆ.
ಜ. 24ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವೆಂದು ಆಚರಿಸಿಕೊಂಡು ಬರಲಾಗುತ್ತಿದೆ. ಈ ಶುಭ ದಿನದಂದು ಜನಿಸಿದ ಹೆಣ್ಣು ಮಗುವಿಗೆ ಆರೋಗ್ಯ ಇಲಾಖೆಯಿಂದ ಭರ್ಜರಿ ಗಿಫ್ಟ್ ನೀಡಲಾಗಿದೆ. ದಾವಣಗೆರೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಇಂದು ಒಂದೇ ದಿನದಲ್ಲಿ ಒಟ್ಟು 14 ಹೆಣ್ಣುಮಕ್ಕಳ ಜನನವಾಗಿದೆ ಎಂದು ಜಿಲ್ಲಾ ಆರೋಗ್ಯಧಿಕಾರಿ ಡಾ.ಷಣ್ಮುಖಪ್ಪ ಎಸ್. ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದಂದೇ ದಾವಣಗೆರೆಯಲ್ಲಿ 14 ಹೆಣ್ಣು ಮಕ್ಕಳ ಜನನ (ETV Bharat) ದಾವಣಗೆರೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಜ. 24ರ ಬೆಳಗ್ಗಿನ ಜಾವ 12 ಗಂಟೆಯಿಂದ ಸಂಜೆ 7 ಗಂಟೆ ತನಕ ಒಟ್ಟು 14 ಹೆಣ್ಣುಮಕ್ಕಳ ಜನನವಾಗಿದೆ. ದಾವಣಗೆರೆ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ- 5, ಚಿಗಟೇರಿ ಜಿಲ್ಲಾಸ್ಪತ್ರೆ- 3 ಚನ್ನಗಿರಿ ತಾಲೂಕು ಸರ್ಕಾರಿ ಆಸ್ಪತ್ರೆ- 1, ಮಲೆಬೆನ್ನೂರು ಆಸ್ಪತ್ರೆ -1 ಹರಿಹರ ತಾಲೂಕು ಆಸ್ಪತ್ರೆ- 3 ಜಗಳೂರು-1 ಒಟ್ಟು 14 ಹೆಣ್ಣುಮಕ್ಕಳ ಜನನವಾಗಿದೆ ಎಂದು ಡಿಹೆಚ್ಓ ಮಾಹಿತಿ ನೀಡಿದರು.
ಎಲ್ಲ ಆಸ್ಪತ್ರೆಗಳಲ್ಲಿ ಸಂಭ್ರಮ, ಗಿಪ್ಟ್ ವಿತರಣೆ:ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದಂತೆ ದಾವಣಗೆರೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಣ್ಣುಮಗು ಹುಟ್ಟಿದ ಹಿನ್ನೆಲೆಯಲ್ಲಿ ತಲಾ 1,000 ರೂ. ಮೌಲ್ಯದ ಕಿಟ್ ಗಿಫ್ಟ್ ನೀಡಲಾಗಿದೆ. ಅಲ್ಲದೇ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಪುಟ್ಟ ಕಾರ್ಯಕ್ರಮ ಮಾಡಿ ಸಿಹಿ ಹಂಚಿ ಸಂಭ್ರಮಿಸಲಾಗಿದೆ.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಸಹಾಯಕ ಆಡಳಿತ ಅಧಿಕಾರಿ ಹೇಮಣ್ಣ ಮಾತನಾಡಿ "ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಂದೇ ದಾವಣಗೆರೆ ನಗರದ ಮಹಿಳಾ ಮತ್ತು ಮಕ್ಕಳ ಒಂದೇ ಆಸ್ಪತ್ರೆಯಲ್ಲಿ ಅತಿ ಹೆಚ್ಚು ಅಂದರೇ ಐದು ಹೆಣ್ಣುಮಕ್ಕಳ ಜನನವಾಗಿದೆ. ಅವರಿಗೆ ಗಿಫ್ಟ್ ವಿತರಣೆ ಮಾಡಿ ಕಾರ್ಯಕ್ರಮ ಮಾಡಲಾಯಿತು. ಸಿಹಿ ಹಂಚಿ ಸಂಭ್ರಮಿಸಲಾಯಿತು" ಎಂದರು.
ಐದು ಹೆಣ್ಣುಮಗು ಹೆರಿಗೆ ಮಾಡಿಸಿ ಶುಭಕೋರಿದ ವೈದ್ಯೆ:ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಗೈನೆಕಾಲಜಿಸ್ಟ್ ಡಾ.ಧನಲಕ್ಷ್ಮಿ ಅವರು ಒಟ್ಟು ಐದು ಹೆಣ್ಣುಮಗು ಹೆರಿಗೆ ಮಾಡಿಸಿ ಈಟಿವಿ ಭಾರತ ಮೂಲಕ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಶುಭಾಶಯ ಕೋರಿದರು. "ಇಂದು ನಮ್ಮ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಒಟ್ಟು 5 ಹೆಣ್ಣು ಮಕ್ಕಳ ಜನನವಾಗಿದೆ. ಎಲ್ಲ ಮಕ್ಕಳು ಆರೋಗ್ಯವಾಗಿದ್ದು, ಅವರಿಗೆಲ್ಲ ಸಿಹಿ ಹಂಚಿ, ವಿಶೇಷ ಗಿಫ್ಟ್ ಕೂಡ ವಿತರಣೆ ಮಾಡಲಾಯಿತು" ಎಂದು ವರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ:ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ: ಇಂದು ಜನಿಸಿದ ಹೆಣ್ಣು ಶಿಶುವಿಗೆ ಸರಕಾರದಿಂದ ಸ್ಪೆಶಲ್ ಗಿಫ್ಟ್