ತುಮಕೂರು: ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ 13 ಜೋಡಿಗಳನ್ನು ಪುನಃ ಒಂದು ಮಾಡಿದ ವಿಶೇಷ ಪ್ರಸಂಗ ನಡೆಯಿತು. ಇತ್ತೀಚೆಗೆ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಕೌಟುಂಬಿಕ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣಗಳ ವಾದ-ವಿವಾದಗಳನ್ನು ಆಲಿಸಲಾಯಿತು. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಯಂತ್ ಕುಮಾರ್ ಅವರು ಎರಡೂ ಕಡೆಯ ವಕೀಲರನ್ನು ಸಂಪರ್ಕಿಸಿ ಅವರ ಸಮ್ಮುಖದಲ್ಲಿಯೇ ವಾದ-ವಿವಾದಗಳನ್ನು ಆಲಿಸಿದರು.
ಗಂಡ-ಹೆಂಡತಿ ಒಂದು ನಾಣ್ಯದ ಎರಡು ಮುಖಗಳಿದ್ದಂತೆ, ಚಿಕ್ಕ ವಿಚಾರಗಳಿಗೆ ಮನಸ್ತಾಪ ಮಾಡಿಕೊಳ್ಳಬಾರದು, ಮಕ್ಕಳ ಹಿತಕ್ಕಾಗಿ ಹಿರಿಯರನ್ನು ನೋಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ. ಅವರ ಮನಸ್ಸಿಗೆ ಘಾಸಿ ಮಾಡಬಾರದು ಎಂದು ಬುದ್ಧಿ ಹೇಳಿ ಪರಸ್ಪರರಿಗೆ ಹಾರ ಬದಲಾಯಿಸಿ ಸಿಹಿ ತಿನ್ನಿಸಿ ಒಂದು ಮಾಡಿ ಮನೆಗೆ ಕಳಿಸಿದರು.
ಗಂಡ-ಹೆಂಡತಿ ಎರಡು ಕೈಗಳಿದ್ದಂತೆ, ಒಂದೇ ಕೈಯಿಂದ ಏನೂ ಕೆಲಸ ಮಾಡಲಾಗದು. ಎರಡೂ ಕೈ ಮಾತ್ರ ಇದ್ದರೆ ಚಪ್ಪಾಳೆ, ಇಬ್ಬರೂ ಒಬ್ಬರನ್ನೊಬ್ಬರು ನಂಬಬೇಕು. ಪರಸ್ಪರ ಪ್ರೀತಿ ವಿಶ್ವಾಸ ನಂಬಿಕೆಯಿಂದ ಜೀವನ ನಡೆಸಬೇಕು. ಆಗ ಮಾತ್ರ ಸಮಾಜದಲ್ಲಿ ಶಾಂತಿ ಸಾಧ್ಯ. ನೀವು ಸಹ ಅಭಿವೃದ್ಧಿ ಹೊಂದುತ್ತೀರಿ ಎಂದು ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಮುನಿರಾಜು ತಿಳಿ ಹೇಳಿದರು.