ಕರ್ನಾಟಕ

karnataka

12 ಲಕ್ಷ ಮೌಲ್ಯದ ವಜ್ರ, ನವರತ್ನಾಲಂಕಾರದ ಗಣಪನ ಪ್ರತಿಷ್ಠಾಪಿಸಿದ ಸ್ವಸ್ತಿಕ್ ಯುವಕರ ಸಂಘ - Navaratna decoration Ganapana

By ETV Bharat Karnataka Team

Published : Sep 7, 2024, 6:52 PM IST

ಕಳೆದ 35 ವರ್ಷಗಳಿಂದಲೂ ಸ್ವಸ್ತಿಕ್ ಯುವಕರ ಸಂಘ ವಜ್ರಾಲಂಕಾರದ ಗಣಪತಿಯನ್ನು ಪ್ರತಿಷ್ಠಾಪಿಸುತ್ತಾ ಬರುತ್ತಿದ್ದು, ವಿಶೇಷವೆಂದರೆ ಕೊನೆಯ ದಿನ ಆಭರಣಗಳ ಸಮೇತ ಮಲ್ಲೇಶ್ವರದ ಸ್ಯಾಂಕಿ ಕೆರೆಯಲ್ಲಿ ಗಣಪನನ್ನು ವಿಸರ್ಜನೆ ಮಾಡಲಾಗುತ್ತದೆ.

12 lakhs worth of diamond, Navaratna decoration Ganapana installed by Swastik Youth Association
12 ಲಕ್ಷ ಮೌಲ್ಯದ ವಜ್ರ, ನವರತ್ನಾಲಂಕಾರದ ಗಣಪನ ಪ್ರತಿಷ್ಠಾಪಿಸಿದ ಸ್ವಸ್ತಿಕ್ ಯುವಕರ ಸಂಘ (ETV Bharat)

ಬೆಂಗಳೂರು: ರಾಜ್ಯಾದ್ಯಂತ ಗೌರಿ ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ವಿಭಿನ್ನ ಪ್ರಯತ್ನವೆಂಬಂತೆ ಮಿಲ್ಕ್ ಕಾಲೊನಿಯ ಸ್ವಸ್ತಿಕ್ ಯುವಕರ ಸಂಘ ವಜ್ರ ಹಾಗೂ ನವರತ್ನ ಹರಳುಗಳನ್ನು ಉಪಯೋಗಿಸಿ 12 ಲಕ್ಷ ಮೌಲ್ಯದ ಗಣಪತಿಯನ್ನು ಪ್ರತಿಷ್ಠಾಪಿಸಿದ್ದು, ಪ್ರಮುಖ ಆಕರ್ಷಣೆಯಾಗಿದೆ.

ನಗರದ ಮಲ್ಲೇಶ್ವರ ಬಳಿಯ ಮಿಲ್ಕ್ ಕಾಲೊನಿಯ ಕೆಂಪೇಗೌಡ ಕ್ರೀಡಾಂಗಣದಲ್ಲಿ ಕಳೆದ 35 ವರ್ಷಗಳಿಂದಲೂ ಸ್ವಸ್ತಿಕ್ ಯುವಕರ ಸಂಘವು ವಜ್ರಾಲಂಕಾರದ ಗಣಪತಿಯನ್ನು ಪ್ರತಿಷ್ಠಾಪಿಸುತ್ತಲೇ ಬರುತ್ತಿದೆ. ಮಂಟಪದ ಶೃಂಗಾರದಲ್ಲಿ ಮಾತ್ರ ಬದಲಾವಣೆ ಮಾಡಲಾಗುತ್ತಿದೆ. ಇಲ್ಲಿನ ವಿಶೇಷವೆಂದರೆ ಕೊನೆಯ ದಿನ ಆಭರಣಗಳ ಸಮೇತ ಮಲ್ಲೇಶ್ವರದ ಸ್ಯಾಂಕಿ ಕೆರೆಯಲ್ಲಿ ಗಣಪನನ್ನು ವಿಸರ್ಜನೆ ಮಾಡಲಾಗುತ್ತದೆ.

ಶ್ರೀರಾಮಪುರ, ವಿಜಯನಗರ, ಸುಬ್ರಹ್ಮಣ್ಯನಗರ, ರಾಜಾಜಿನಗರ ಸೇರಿದಂತೆ ವಿವಿಧೆಡೆಯಿಂದ 1 ಲಕ್ಷಕ್ಕೂ ಅಧಿಕ ಜನರು ಇಲ್ಲಿನ ಗಣಪನ ದರ್ಶನ ಪಡೆಯುತ್ತಾರೆ. ಬಂದವರಿಗೆ ಪ್ರಸಾದ ರೂಪದಲ್ಲಿ ಲಡ್ಡು ಹಾಗೂ ಪಾನಕ ವಿತರಿಸಲಾಗುತ್ತದೆ. ಈ ವರ್ಷ 1.5 ಲಕ್ಷ ಜನರು ಸೇರುವ ನಿರೀಕ್ಷೆಯಿದೆ.

ವಜ್ರ, ನವರತ್ನಾಲಂಕಾರದ ಗಣಪ (ETV Bharat)

ಈ ಬಾರಿ ಸ್ವಸ್ತಿಕ್ ಯುವಕರ ಸಂಘದ ವತಿಯಿಂದ ಆಚರಿಸಲಾಗುತ್ತಿರುವ ಗಣೇಶೋತ್ಸವದಲ್ಲಿ ಕೈಲಾಸನಾಥ್ ದೇವಸ್ಥಾನನದ ವಿನ್ಯಾಸದಲ್ಲಿ ಭವ್ಯ ಮಂಟಪವನ್ನು ನಿರ್ಮಿಸಲಾಗಿದೆ. 12 ಲಕ್ಷ ಮೌಲ್ಯದ ಗಣಪತಿಯನ್ನು ಇಡಲಾಗಿದೆ. 180 ಕೆಜಿ ಜೇಡಿ ಮಣ್ಣಿನ, 7 ಅಡಿ ಎತ್ತರದ ಗಣಪತಿ ಇದಾಗಿದೆ. ಅಮೆರಿಕನ್ ಡೈಮಂಡ್ ಮತ್ತು ನವರತ್ನ ಹರಳುಗಳನ್ನು ಬಳಸಿ ಈ ಮೂರ್ತಿಯನ್ನು ಶೃಂಗರಿಸಲಾಗಿದೆ. ಮಹಾರಾಷ್ಟ್ರದ ಸೊಲ್ಲಾಪುರದ ನುರಿತ ತಜ್ಞರು ಮೂರ್ತಿಯನ್ನು ಅಲಂಕರಿಸಿದ್ದಾರೆ.

ಗಣೇಶ ಚತುರ್ಥಿ ಒಟ್ಟು 9 ದಿನಗಳ ಕಾಲ ನಡೆಯಲಿದ್ದು, ಎರಡನೇ ದಿನ ಅನ್ನ ಸಂತರ್ಪಣೆ, ಡಾ.ಗುರುರಾಜ್ ಹೊಸಕೋಟೆ ಅವರ ತಂಡದ ವತಿಯಿಂದ ಸಂಗೀತ ಕಾರ್ಯಕ್ರಮ, ನಟರಾಜ ಎಂಟರ್ಟೈನ್ಸ್​ ತಂಡದಿಂದ ಮೂಸಿಕಲ್ ನೈಟ್, ಮಜಾಭಾರತ ತಂಡದಿಂದ ಹಾಸ್ಯ ಕಾರ್ಯಕ್ರಮ, ಆಲ್ ಓಕೆ ತಂಡರಿಂದ ರ‍್ಯಾಪ್ ಸಾಂಗ್ಸ್‌, ಅಂಕಿತ ಭಟ್ಟಾಚಾರ್ಯ ಮತ್ತು ತಂಡದವರಿಂದ ಲೈವ್ ಮೂಸಿಕ್ ಕಾನ್ಸರ್ಟ್ ಹಾಗೂ ಕೊನೆಯದಿನದಂದು ಅದ್ಧೂರಿ ಮೆರವಣಿಗೆ ಮತ್ತು ಸಿಡಿಮದ್ದು ಪ್ರದರ್ಶನ ನಡೆಯಲಿದೆ.

ಸ್ವಸ್ತಿಕ್ ಯುವಕರ ಸಂಘದ ಅಧ್ಯಕ್ಷ ಶ್ರೀಧರ್ ಮಾತನಾಡಿ, "ಎಲ್ಲರಲ್ಲೂ ಹಿಂದುತ್ವ ಹಾಗೂ ಹಿಂದೂ ಸಂಸ್ಕೃತಿಯನ್ನು ಉಳಿಸಿಕೊಂಡು ಬೆಳೆಸುವ ಮನೋಭಾವ ಬೆಳೆಯಬೇಕಿದೆ. ಈ ನಿಟ್ಟಿನಲ್ಲಿ ಪ್ರತಿ ವರ್ಷವೂ ಬಹಳ ವಿಜೃಂಭಣೆಯಿಂದ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ:ಸತ್ಯಗಣಪತಿ ದೇವಸ್ಥಾನದಲ್ಲಿ ವೈಭವದ ರೈತ ಗಣೇಶೋತ್ಸವ: ತರಕಾರಿ, ಹೂಗಳಿಂದ ಸಿಂಗಾರ - Sathyaganapati Temple

ABOUT THE AUTHOR

...view details