ನಾಗ್ಪುರ, ಮಹಾರಾಷ್ಟ್ರ: 11 ವರ್ಷದ ಬಾಲಕನೊಬ್ಬ ಬೆಕ್ಕು ಕಚ್ಚಿ ಸಾವನ್ನಪ್ಪಿರುವ ಅಪರೂಪದ ಘಟನೆ ನಾಗ್ಪುರ ಜಿಲ್ಲೆಯ ಹಿಂಗಾಣ ನಗರದ ಉಖ್ಲಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಶ್ರೇಯಾಂಶು ಕೃಷ್ಣ ಪೆಂಡಂ ಮೃತ ಬಾಲಕ ಎಂದು ತಿಳಿದು ಬಂದಿದೆ.
"ಭಾನುವಾರ ಶ್ರೇಯಾಂಶು ತನ್ನ ಸ್ನೇಹಿತರ ಜೊತೆಗೆ ಆಟವಾಡುತ್ತಿದ್ದ. ಸಂಜೆ 6 ಗಂಟೆಗೆ ಆತ ಮನೆಗೆ ಬಂದಾಗ ಬೆಕ್ಕು ಏಕಾಏಕಿ ಬಾಲಕನ ಮೇಲೆ ದಾಳಿ ಮಾಡಿ, ಕಾಲಿಗೆ ಕಚ್ಚಿದೆ. ಇದಾದ ಸ್ವಲ್ಪ ಹೊತ್ತಿನ ನಂತರ ಬಾಲಕ ವಾಕರಿಕೆ ಹಾಗೂ ವಾಂತಿ ಮಾಡಲು ಶುರು ಮಾಡಿದ. ತಕ್ಷಣ ಅವನನ್ನು ಹಿಂಗಾಣದ ಲತಾ ಮಂಗೇಶ್ಕರ್ ಆಸ್ಪತ್ರೆಗೆ ಕರೆದೊಯ್ದೆವು. ಆದರೆ, ಅಲ್ಲಿ ವೈದ್ಯರು ಶ್ರೇಯಾಂಶು ಮೃತಪಟ್ಟಿರುವುದಾಗಿ ಘೋಷಿಸಿದರು" ಎಂದು ಬಾಲಕನ ತಾಯಿ ಘಟನೆ ಬಗ್ಗೆ ಮಾಧ್ಯಮಗಳ ಬಳಿ ಅಳಲು ತೋಡಿಕೊಂಡರು.
ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿರುವ ಪೊಲೀಸರು:ಬೆಕ್ಕಿನ ಕಡಿತದಿಂದ ಬಾಲಕ ಸಾವನ್ನಪ್ಪಿರುವುದು ಅಚ್ಚರಿ ತಂದಿದೆ. ಹೀಗಾಇ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಬಾಲಕ ಶ್ರೇಯಾಂಶು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಏಮ್ಸ್ಗೆ ರವಾನಿಸಲಾಗಿದೆ. ಘಟನೆ ಕುರಿತು ಹಿಂಗಾಣ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಸದ್ಯ ಹಿಂಗಾಣ ಪೊಲೀಸರು ಹಠಾತ್ ಸಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದಾರೆ. ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈದ್ಯರ ಪ್ರತಿಕ್ರಿಯೆ ಏನು: ಬೆಕ್ಕು ಕಚ್ಚಿದ್ದರಿಂದ ಸಾವನ್ನಪ್ಪಿರುವುದು ಅಪರೂಪದ ಘಟನೆಯಾಗಿದೆ. ಬೆಕ್ಕು ಕಚ್ಚಿದ ನಂತರ ಇಷ್ಟು ಕಡಿಮೆ ಸಮಯದಲ್ಲಿ ಸಾಯುವುದು ಕಷ್ಟ. ಬೆಕ್ಕಿನ ದಾಳಿಯಿಂದ ಹೆದರಿದ್ದ ಬಾಲಕ ಸ್ವಲ್ಪ ಸಮಯದ ನಂತರ ವಾಂತಿ ಮಾಡಲು ಪ್ರಾರಂಭಿಸಿದ್ದಾನೆ. ವಾಂತಿ ಗಂಟಲಿನ ಮೂಲಕ ಹಾದುಹೋಗಿ, ಶ್ವಾಸನಾಳಕ್ಕೆ ಪ್ರವೇಶಿಸಿದೆ, ಇದು ಹೃದಯಾಘಾತಕ್ಕೆ ಕಾರಣವಾಗಬಹುದು. ಅಥವಾ ಬೇರೆ ಯಾವುದಾದರೂ ವಿಷಕಾರಿ ಪ್ರಾಣಿ ಕಚ್ಚಿರಬಹುದು. ಇಷ್ಟು ಕಡಿಮೆ ಅವಧಿಯಲ್ಲಿ ಬೆಕ್ಕಿನ ಕಡಿತದಿಂದ ಸಾವು ಸಂಭವಿಸುವುದು ಅಪರೂಪದ ಪ್ರಕರಣವಾಗಿದೆ ಹಾಗೂ ಅತ್ಯಂತ ದುರದೃಷ್ಟಕರ ಘಟನೆಯೂ ಹೌದು. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ" ಎಂದು ತಾಲೂಕು ವೈದ್ಯಾಧಿಕಾರಿ ಪ್ರವೀಣ್ ಪಡ್ವೆ ಹೇಳಿದ್ದಾರೆ. ಒಟ್ಟಿನಲ್ಲಿ ಬೆಕ್ಕಿನ ಕಡಿತದಿಂದ ಸಾವು ಸಂಭವಿಸಿರುವುದು ಚರ್ಚೆಗೆ ಗ್ರಾಸ ಒದಗಿಸಿದೆ.
ಇದನ್ನೂ ಓದಿ:ಚಿಕ್ಕೋಡಿ: ಕೃಷಿ ಹೊಂಡದಲ್ಲಿ ಈಜಲು ಹೋಗಿ ತಂದೆ, ಇಬ್ಬರು ಮಕ್ಕಳು ಸಾವು