ಬೆಂಗಳೂರು:ಪಶ್ಚಿಮಘಟ್ಟ, ಮಲೆನಾಡು ಹಾಗೂ ಕರಾವಳಿ ಸೇರಿ ರಾಜ್ಯದಲ್ಲಿ ಸುಮಾರು 250 ಗ್ರಾಮ ಪಂಚಾಯಿತಿ ವ್ಯಾಪ್ತಿಯ 1,351 ಗ್ರಾಮಗಳ ಸೂಕ್ಷ್ಮ ಪ್ರದೇಶಗಳಲ್ಲಿ ಭೂಕುಸಿತವಾಗುವ ಸಾಧ್ಯತೆಯಿದೆ ಎಂದು ಕೇಂದ್ರದ ಭೂ ಸರ್ವೈಕ್ಷಣಾ ಇಲಾಖೆಯು ವರದಿ ನೀಡಿದ್ದು, ಮುಂಜಾಗ್ರತ ಕ್ರಮವಾಗಿ ಭೂಕುಸಿತ ಉಂಟಾಗುವ ಪ್ರದೇಶಗಳಲ್ಲಿ ತಡೆಗೋಡೆ ನಿರ್ಮಾಣ ಹಾಗೂ ರಕ್ಷಣಾ ಕಾರ್ಯಾಚರಣೆಗಾಗಿ 100 ಕೋಟಿ ಮೀಸಲಿಡಲು ತೀರ್ಮಾನಿಸಲಾಗಿದೆ ಎಂದು ಕಂದಾಯ ಇಲಾಖೆ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ಪಶ್ಚಿಮಘಟ್ಟ, ಮಲೆನಾಡು ಹಾಗೂ ಕರಾವಳಿ ಪ್ರದೇಶಗಳಲ್ಲಿ ಉಂಟಾಗುತ್ತಿರುವ ಭೂಕುಸಿತಕ್ಕೆ ಕಾರಣವೇನು? ಹಾಗೂ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮ, ರಸ್ತೆ ಅಭಿವೃದ್ದಿಗೆ ವಿಶೇಷ ಪ್ಯಾಕೇಜ್ ನಿಗದಿ ಮಾಡಬೇಕೆಂದು ಪರಿಷತ್ನಲ್ಲಿ ಸಿ.ಟಿ.ರವಿ, ಭಾರತಿ ಶೆಟ್ಟಿ, ಪ್ರತಾಪ್ ಸಿಂಹ ನಾಯಕ್ ಸರ್ಕಾರದ ಗಮನ ಸೆಳೆದರು.
ಇದಕ್ಕೆ ಉತ್ತರಿಸಿದ ಸಚಿವರು, 2018ರಿಂದ ರಾಜ್ಯದಲ್ಲಿ ಭೂಕುಸಿತವಾಗುತ್ತಿದೆ. ಇದಕ್ಕೆ ಏನು ಕಾರಣ ಎಂಬುದರ ಬಗ್ಗೆ ಭೂ ವೈಜ್ಞಾನಿಕ ಸವೈರ್ಕ್ಷಣಾ ಇಲಾಖೆ ಹಾಗೂ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಅಧ್ಯಯನ ನಡೆಸಿವೆ. ಮಳೆಗಾಲದಲ್ಲಿ ವಾಡಿಕೆಯಂತೆ 60 ದಿನಗಳು ಮಳೆಯಾಗುತಿತ್ತು. ಇತ್ತೀಚಿನ ವರ್ಷಗಳಲ್ಲಿ ಎರಡು ತಿಂಗಳಲ್ಲಿ ಬೀಳುವ ಮಳೆ ಒಂದೇ ತಿಂಗಳಲ್ಲಿ ಬೀಳುತ್ತಿದೆ. ಇದು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಎರಡು ದಿನಗಳಲ್ಲಿ ಅಂಕೋಲಾದಲ್ಲಿ 500 ಮೀಟರ್ ಮಳೆ ಬಂದಿದ್ದು, ಗುಡ್ಡ ಕುಸಿಯಲು ಕಾರಣವಾಗಿದೆ. ಜೊತೆಗೆ ನೈಸರ್ಗಿಕ ಇಳಿಜಾರನ್ನ ತಗ್ಗಿಸಿ ರಸ್ತೆ ನಿರ್ಮಿಸಲಾಗುತ್ತಿದೆ. ಮಲೆನಾಡು ಭಾಗದಲ್ಲಿ ಕಾಫಿ ಎಸ್ಟೇಟ್ನಲ್ಲಿ ಪ್ಲ್ಯಾಟ್ ಪ್ಲ್ಯಾಂಟ್ ಹಾಗೂ ಬಡಾವಣೆ ನಿರ್ಮಾಣ ಹೆಚ್ಚಾಗುತ್ತಿವೆ. ಸೂಕ್ಷ್ಮತೆ ಇಲ್ಲದೇ, ವೈಜ್ಞಾನಿಕ ಅಧ್ಯಯನವಿಲ್ಲದ ಪರಿಣಾಮ ಭೂಕುಸಿತಕ್ಕೆ ಕಾರಣವಾಗುತ್ತಿವೆ. ಭವಿಷ್ಯದಲ್ಲಿ ಭೂಕುಸಿತ ತಡೆಯಲು ಕೇಂದ್ರದ ಭೂಸರ್ವೇಕ್ಷಣಾ ಇಲಾಖೆಯಿಂದ ವರದಿ ತರಿಸಿಕೊಳ್ಳಲಾಗಿದೆ. ಕರಾವಳಿ, ಮಲೆನಾಡು ಹಾಗೂ ಪಶ್ಚಿಮ ಘಟ್ಟ ಸೇರಿ ರಾಜ್ಯದಲ್ಲಿ 250 ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ 1351 ಕಡೆ ಗ್ರಾಮಗಳಲ್ಲಿ ಭೂಕುಸಿತ ಸಾಧ್ಯತೆ ಬಗ್ಗೆ ವರದಿಯಲ್ಲಿ ತಿಳಿಸಿದೆ. ಈ ಪೈಕಿ ಎಲ್ಲಿ ಹೆಚ್ಚಿನ ಭೂಕುಸಿತ ಸಾಧ್ಯತೆ ಹೆಚ್ಚಾಗಿದೆಯೋ ಪ್ರದೇಶಗಳಲ್ಲಿ ಆದ್ಯತೆ ಮೇರೆಗೆ ಭೂಕುಸಿತವಾಗದಂತೆ ತಡೆಯಲು ಮುಖ್ಯಮಂತ್ರಿ ಜೊತೆ ಚರ್ಚಿಸಿ 100 ಕೋಟಿ ಅನುದಾನ ನೀಡುವುದಕ್ಕೆ ಒಪ್ಪಿಕೊಂಡಿದ್ದಾರೆ. ಭೂಕುಸಿತವಾಗುವ ಸಾಧ್ಯತೆಗಳ ಪ್ರದೇಶಗಳಲ್ಲಿ ತಡೆಗೋಡೆ ಹಾಗೂ ರಕ್ಷಣಾ ಕಾರ್ಯ ಬಳಕೆಯಾಗಲಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಒಂದೇ ಕಡೆ 2 ಡೆಂಗ್ಯೂ ಕೇಸ್ ದಾಖಲಾದರೆ ಆ ಪ್ರದೇಶ ಹಾಟ್ ಸ್ಪಾಟ್ ಆಗಿ ಘೋಷಣೆ; ಸಚಿವ ದಿನೇಶ್ ಗುಂಡೂರಾವ್ - DENGUE CASES IN STATE