ಬೆಂಗಳೂರು:ಮಹಿಳಾ ಐಪಿಎಲ್ನಲ್ಲಿ ಸತತ 2 ಪಂದ್ಯಗಳಲ್ಲಿ ಸೋತು ನಿರಾಸೆ ಅನುಭವಿಸಿದ್ದ ಅಪಾರ ಅಭಿಮಾನಿಗಳ ಬಳಗದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಸೋಮವಾರ ಇಲ್ಲಿ ನಡೆದ ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ 23 ರನ್ಗಳಿಂದ ಗೆದ್ದು, ಮತ್ತೆ ಜಯದ ಹಳಿಗೆ ಮರಳಿತು. ಇದಕ್ಕೆ ಕಾರಣವಾಗಿದ್ದು ನಾಯಕಿ ಸ್ಮೃತಿ ಮಂಧಾನ ಮತ್ತು ಆಲ್ರೌಂಡರ್ ಎಲ್ಲಿಸ್ ಪೆರ್ರಿ ಸಿಡಿಲಬ್ಬರದ ಅರ್ಧಶತಕ.
ಸೆಮೀಸ್ ಹಾದಿಯನ್ನು ಸುಲಭವಾಗಿಸಲು ಪಂದ್ಯ ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿದ ಆರ್ಸಿಬಿ ಟೂರ್ನಿಯಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಎರಡನೇ ಗೆಲುವು ಗಳಿಸಿತು. ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತ ನಿರಾಸೆಯನ್ನು ಇಲ್ಲಿ ಮರೆಯಿತು. ಆಡಿದ ಐದು ಪಂದ್ಯಗಳಲ್ಲಿ 3ರಲ್ಲಿ ಗೆದ್ದು 2 ಸೋತು ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿ ಮುಂದುವರಿಯಿತು.
ಟಾಪ್ ಕ್ಲಾಸ್ ಬ್ಯಾಟಿಂಗ್:ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಮಹಿಳೆಯರು ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳಿಗೆ ರಸದೌತಣ ನೀಡಿದರು. ಅದರಲ್ಲೂ ನಾಯಕಿ ಸ್ಮೃತಿ ಮಂಧಾನ ತಮ್ಮ ಹಿರಿಮೆಗೆ ತಕ್ಕಂತೆ ಬ್ಯಾಟ್ ಮಾಡಿ ಯುಪಿ ಮಹಿಳಾ ಬೌಲಿಂಗ್ ಪಡೆಯನ್ನು ಚೆಂಡಾಡಿದರು. 50 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ಗಳ ಸಮೇತ 80 ರನ್ ಸಿಡಿಸಿದರು. ಇನ್ನೊಬ್ಬ ಆರಂಭಿಕ ಆಟಗಾರ್ತಿ ಮೇಘನಾ(28) ಜೊತೆಗೂಡಿ ಮೊದಲ ವಿಕೆಟ್ಗೆ 51 ರನ್ ಪೇರಿಸಿದರು.
ಮೇಘನಾ ಔಟಾದ ಬಳಿಕ ಬಂದ ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಎಲ್ಲಿಸ್ ಪೆರ್ರಿ ತಾವೂ ಕಡಿಮೆ ಇಲ್ಲ ಎಂಬಂತೆ ಬ್ಯಾಟ್ ಬೀಸಿದರು. 37 ಎಸೆತಗಳಲ್ಲಿ 58 ರನ್ ಗಳಿಸಿದ ಪೆರ್ರಿ ತಲಾ 4 ಬೌಂಡರಿ, ಸಿಕ್ಸರ್ ಚಚ್ಚಿದರು. ಇದರಿಂದ ಯುಪಿ ಬೌಲರ್ಗಳ ರನ್ ಸರಾಸರಿಯೇ 10 ದಾಟಿತು. ಪೆರ್ರಿ ಬಳಿಕ ಕೊನೆಯಲ್ಲಿ ಬಂದ ರಿಚಾ ಘೋಷ್ 10 ಎಸೆತಗಳಲ್ಲಿ 21 ರನ್ ಕಾಣಿಕೆ ನೀಡಿದರು. ಇದರಿಂದ ತಂಡ ಕೇವಲ 3 ವಿಕೆಟ್ಗೆ 198 ರನ್ಗಳ ಬೃಹತ್ ಮೊತ್ತ ಗಳಿಸಿತು.