ಲಂಡನ್ (ಇಂಗ್ಲೆಂಡ್):ವಿಂಬಲ್ಡನ್ ಪುರುಷರ ಫೈನಲ್ನಲ್ಲಿ ಟೆನಿಸ್ ಲೋಕದ ಹೊಸ ಸೂಪರ್ಸ್ಟಾರ್ ಕಾರ್ಲೊಸ್ ಅಲ್ಕರಾಜ್ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದರು. 24 ಗ್ರ್ಯಾನ್ಸ್ಲಾಮ್ ಒಡೆಯ ನೊವಾಕ್ ಜೊಕೊವಿಕ್ರನ್ನು 6-2, 6-2, 7-6 ನೇರ ಸೆಟ್ಗಳಿಂದ ಸೋಲಿಸುವ ಮೂಲಕ ಸುಲಭವಾಗಿ ಪ್ರಶಸ್ತಿ ಜಯಿಸಿದರು.
ಇಬ್ಬರು ಮದಗಜಗಳ ಮಧ್ಯೆ ರೋಚಕ ಪಂದ್ಯ ಇರಲಿದೆ ಎಂದು ಭಾವಿಸಿದ್ದ ಪಂದ್ಯದಲ್ಲಿ ಅಲ್ಕರಜ್ ಏಕಮೇವ ಹಿಡಿತ ಸಾಧಿಸಿದರು. ಮೊದಲೆರಡು ಸೆಟ್ಗಳಲ್ಲಿ ನೊವಾಕ್ ಎಲ್ಲಿಯೂ ಕಠಿಣ ಸ್ಪರ್ಧೆ ನೀಡಲಿಲ್ಲ. ಹಿರಿಯ ಆಟಗಾರನ ಸರ್ವ್ಗಳನ್ನು ಮುರಿಯುತ್ತಾ ಸಾಗಿದ 21 ರ ಹರೆಯದ ಅಲ್ಕರಜ್ ಎರಡೂ ಸೆಟ್ಗಳನ್ನು 6-2, 6-2 ರಲ್ಲಿ ಜಯಿಸಿದರು. ಅದಾಗಲೇ ಗೆಲುವಿನ ಸನಿಹದಲ್ಲಿದ್ದ ಆಟಗಾರನಿಗೆ ಮೂರನೇ ಸೆಟ್ನಲ್ಲಿ ನೊವಾಕ್ ತುಸು ಸ್ಪರ್ಧೆ ನೀಡಿದರು. ಇದರಿಂದ ಟ್ರೈಬ್ರೇಕರ್ನಲ್ಲಿ ಸತತ ಏಸ್ಗಳನ್ನು ಸಿಡಿಸುವ ಮೂಲಕ ಅಲ್ಕರಜ್ ವಿಂಬಲ್ಡನ್ ಪ್ರಶಸ್ತಿಗೆ ಮುತ್ತಿಕ್ಕಿದರು.
ಕಿಕ್ಕಿರಿದು ತುಂಬಿದ್ದ ಫೈನಲ್ ಪಂದ್ಯವು 2 ಗಂಟೆ 27 ನಿಮಿಷಗಳ ಕಾಲ ನಡೆಯಿತು. ವಿಶ್ವದ ನಂ.1 ಆಟಗಾರ ತಮ್ಮ 21 ನೇ ವಯಸ್ಸಿನಲ್ಲಿ ನಾಲ್ಕು ಗ್ರ್ಯಾನ್ಸ್ಲಾಮ್ ಗೆದ್ದ ನಾಲ್ಕನೇ ಆಟಗಾರ ಎನಿಸಿಕೊಂಡರು. ಇದಕ್ಕೂ ಮೊದಲು ಮ್ಯಾಟ್ಸ್ ವಿಲಾಂಡರ್, ಜಾರ್ನ್ ಬೋರ್ಗ್ ಮತ್ತು ಬೋರಿಸ್ ಬೆಕರ್ ಅವರು ಚಿಕ್ಕ ವಯಸ್ಸಿನಲ್ಲಿ 4 ಪ್ರಶಸ್ತಿ ಗೆದ್ದಿದ್ದರು.