ಲಂಡನ್:ವಿಂಬಲ್ಡನ್ ಗ್ರಾನ್ಸ್ಲ್ಯಾಮ್ನ ಪುರುಷರ ಫೈನಲ್ನಲ್ಲಿ ಎರಡು ಮದಗಜಗಳು ಬಂದು ನಿಂತಿವೆ. 7 ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಕ್ ಮತ್ತು ಹಾಲಿ ಚಾಂಪಿಯನ್ ಕಾರ್ಲೊಸ್ ಅಲ್ಕರಜ್ ನಾಳೆ (ಜುಲೈ 14) ನಡೆಯುವ ಅಂತಿಮ ಹಂತದ ಹೋರಾಟದಲ್ಲಿ ಸೆಣಸಾಡಲಿದ್ದಾರೆ.
ಟೆನಿಸ್ ಕೋರ್ಟ್ನ ಹಳೆಯ ಹುಲಿ ಜೊಕೊವಿಕ್ 25ನೇ ಗ್ರಾನ್ಸ್ಲ್ಯಾಮ್ ಮೇಲೆ ಕಣ್ಣಿಟ್ಟಿದ್ದರೆ, ಸತತ 2ನೇ ವಿಂಬಲ್ಡನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳಲು ಅಲ್ಕರಜ್ ಸಜ್ಜಾಗಿದ್ದಾರೆ. 2023ರ ಫೈನಲ್ನಲ್ಲಿ ಇಬ್ಬರೂ ಸೆಣಸಾಡಿದ್ದರು. ಟೆನಿಸ್ನ ಹೊಸ ಸೂಪರ್ಸ್ಟಾರ್ ಆಗಿ ಹೊರಹೊಮ್ಮಿರುವ ಅಲ್ಕರಜ್ ಎದುರು ನೊವಾಕ್ ಸೋಲು ಕಂಡಿದ್ದರು.
ಪುರುಷರ ಮೊದಲ ಸೆಮಿಫೈನಲ್ ಹಣಾಹಣಿಯಲ್ಲಿ 21 ವರ್ಷದ ಅಲ್ಕರಜ್, 5ನೇ ಶ್ರೇಯಾಂಕಿತ ರಷ್ಯಾದ ಡೇನಿಯಲ್ ಮೆಡ್ವೆಡೆವ್ರನ್ನು 6-7(1/7), 6-3, 6-4, 6-4 ಸೆಟ್ಗಳಿಂದ ಸೋಲಿಸಿದ್ದರು. ಟ್ರೈ ಬ್ರೇಕರ್ಗೆ ತೆರಳಿದ್ದ ಮೊದಲ ಸೆಟ್ನಲ್ಲಿ ಅಲ್ಕರಜ್ ಸೋಲು ಕಾಣಬೇಕಾಯಿತು. ಬಳಿಕ ಪುಟಿದೆದ್ದ ಯುವ ತಾರೆ, ಮುಂದಿನ ಮೂರು ಸೆಟ್ಗಳನ್ನು ಬಾಚಿಕೊಂಡರು. ಮೂರನೇ ಸೆಟ್ನಲ್ಲಿ ತುಸು ಜಿದ್ದಾಜಿದ್ದಿನ ಹೋರಾಟ ಕಂಡುಬಂದಿತು. ಸೆಮೀಸ್ನಲ್ಲಿ ಸೋಲುವ ಮೂಲಕ ಮೆಡ್ವೆಡೆವ್ ಸತತ ಎರಡನೇ ಬಾರಿಗೆ ನಾಲ್ಕರ ಘಟ್ಟದಿಂದ ಅಲ್ಕರಜ್ ವಿರುದ್ಧವೇ ಹೊರದಬ್ಬಿಸಿಕೊಂಡರು. 2023 ರ ಟೂರ್ನಿಯಲ್ಲೂ ಇದೇ ಫಲಿತಾಂಶ ಬಂದಿತ್ತು.
ಜೋಕೋಗೆ ಸವಾಲಾಗದ ಮುಸೆಟ್ಟಿ:ಇನ್ನು ಎರಡನೇ ಸೆಮೀಸ್ನಲ್ಲಿ ನೊವಾಕ್ ಜೊಕೊವಿಕ್, ಇಟಲಿಯ ಲೊರೆನ್ಜೊ ಮುಸೆಟ್ಟಿ ಅವರನ್ನು ಸೋಲಿಸಿ ಅಂತಿಮ ಹಂತಕ್ಕೆ ತಲುಪಿದರು. ಅತಿಹೆಚ್ಚು ಗ್ರಾನ್ಸ್ಲ್ಯಾಮ್ ಗೆದ್ದ ಆಟಗಾರನ ಹೊಡೆತಗಳಿಗೆ ಮುಸೆಟ್ಟಿ ತಬ್ಬಿಬ್ಬಾದರು. ಇದರಿಂದ 6-4, 7-6, 6-4 ರ ನೇರ ಸೆಟ್ಗಳಿಂದ ಸೋಲಬೇಕಾಯಿತು.