ಲಂಡನ್ (ಇಂಗ್ಲೆಂಡ್):ಜೆಕ್ನ ಬಾರ್ಬೊರಾ ಕ್ರೆಜ್ಸಿಕೋವಾ ಅವರು ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಜಯಿಸಿದ ಬೆನ್ನಲ್ಲೇ, ಟೂರ್ನಿಯ ಮಹಿಳಾ ಡಬಲ್ಸ್ನಲ್ಲಿ ಕಟೆರಿನಾ ಸಿನಿಯಾಕೋವಾ ಹಾಗೂ ಟೇಲರ್ ಟೌನ್ಸೆಂಡ್ ಜೋಡಿಯು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಜೆಕ್ನ ಬಾರ್ಬೊರಾ ಕ್ರೆಜ್ಸಿಕೋವಾ ಹಾಗೂ ಕಟೆರಿನಾ ಸಿನಿಯಾಕೋವಾ ಇಬ್ಬರೂ ಕೂಡ ಪ್ರಸ್ತುತ ವಿಂಬಲ್ಡನ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಂತಾಗಿದೆ.
ವಿಂಬಲ್ಡನ್ ಮಹಿಳಾ ಡಬಲ್ಸ್ನಲ್ಲಿ ಜೆಕ್ನ ಕಟೆರಿನಾ ಸಿನಿಯಾಕೋವಾ ಹಾಗೂ ಅಮೆರಿಕದ ಟೇಲರ್ ಟೌನ್ಸೆಂಡ್ ಜೋಡಿಯು ಚಾಂಪಿಯನ್ ಪಟ್ಟ ಅಲಂಕರಿಸಿತು. ಈ ಜೋಡಿಯು ಗೇಬ್ರಿಯೆಲಾ ದಬ್ರೊವ್ಸ್ಕಿ ಮತ್ತು ಎರಿನ್ ರೌಟ್‌ಲಿಫ್ ವಿರುದ್ಧ 7-6 (5), 7-6 (1) ಸೆಟ್‌ಗಳಿಂದ ಜಯ ದಾಖಲಿಸಿತು.
ಇದಕ್ಕೂ ಮುನ್ನ ನಡೆದ ಮಹಿಳಾ ಸಿಂಗಲ್ಸ್ ಕಾದಾಟದಲ್ಲಿ ಬಾರ್ಬೊರಾ ಕ್ರೆಜ್ಸಿಕೋವಾ ಅವರು ಇಟಲಿಯ ಜಾಸ್ಮಿನ್ ಪಯೋಲಿನಿ ವಿರುದ್ಧ 6-2, 2-6, 6-4 ಸೆಟ್‌ಗಳಿಂದ ಜಯ ಗಳಿಸಿ ಎರಡನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಈ ಹಿಂದೆ 2021ರಲ್ಲಿ ಫ್ರೆಂಚ್ ಓಪನ್ ಗೆದ್ದಿದ್ದ ಕ್ರೆಜ್ಸಿಕೋವಾ, ಅನಾರೋಗ್ಯ ಮತ್ತು ಬೆನ್ನುನೋವು ಸೇರಿದಂತೆ ಸವಾಲುಗಳ ಹೊರತಾಗಿಯೂ ಗೆಲುವಿನ ನಗೆ ಬೀರಿದ್ದರು.