ಹೈದರಾಬಾದ್: ಟೆಸ್ಟ್ ಕ್ರಿಕೆಟ್ ಎಂಬುದು ಆಟಗಾರನ ಕೌಶಲ ಮತ್ತ ತಾಳ್ಮೆಯನ್ನು ಪರೀಕ್ಷಿಸುವ ಸ್ವರೂಪವಾಗಿದೆ. 5 ದಿನಗಳ ಕಾಲ ನಡೆಯುವ ಈ ಪಂದ್ಯದಲ್ಲಿ ಹಲವಾರು ದಾಖಲೆಗಳು ನಿರ್ಮಾಣವಾಗುತ್ತವೆ ಮತ್ತು ಮುರಿಯಲ್ಪಡುತ್ತವೆ. ಆದ್ರೆ ಇಲ್ಲೊಬ್ಬ ಬ್ಯಾಟರ್ ಪಾದಾರ್ಪಣೆ ಪಂದ್ಯದಲ್ಲೇ ಶೂನ್ಯಕ್ಕೆ ಔಟಾಗಿ ನಂತರದ ಪಂದ್ಯದಲ್ಲಿ ವಿಶ್ವದಾಖಲೆ ನಿರ್ಮಿಸಿದ್ದು, ಅದನ್ನು ಮುರಿಯಲು ಇಂದಿಗೂ ಯಾವೊಬ್ಬ ಬ್ಯಾಟರ್ಗೆ ಸಾಧ್ಯವಾಗಿಲ್ಲ. ಆ ದಾಖಲೆ ಯಾವುದು ಮತ್ತು ಯಾವ ಬ್ಯಾಟರ್ ಇದನ್ನು ನಿರ್ಮಿಸಿದ್ದು ಅನ್ನೋದನ್ನು ಈ ಸುದ್ದಿಯಲ್ಲಿ ತಿಳಿಯೋಣ.
ಅನೇಕ ದಿಗ್ಗಜ ಆಟಗಾರರು ಕಳೆಪೆ ಪ್ರದರ್ಶನದೊಂದಿಗೆ ತಮ್ಮ ವೃತ್ತಿಜೀವನವನ್ನು ಆರಂಭಿಸಿ ನಂತರ ವಿಶ್ವ ಕ್ರಿಕೆಟ್ ಅನ್ನು ಆಳಿದರು. ಅಂತಹ ಶ್ರೇಷ್ಠ ಕ್ರಿಕೆಟಿಗರಲ್ಲಿ ಇಂಗ್ಲೆಂಡ್‌ನ ಗ್ರಹಾಂ ಗೂಚ್ ಕೂಡ ಒಬ್ಬರಾಗಿದ್ದಾರೆ. ಇವರು ತಮ್ಮ ಪಾದಾರ್ಪಣೆಯ ಪಂದ್ಯದಲ್ಲಿ ಶೂನ್ಯಕ್ಕೆ ಔಟ್ ಆಗಿದ್ದ ನಂತರ ಪಂದ್ಯವೊಂದರಲ್ಲಿ ಬರೋಬ್ಬರಿ 456ರನ್ ಗಳಿಸಿ ವಿಶ್ವದಾಖಲೆ ನಿರ್ಮಿಸಿದ್ದರು. ಟೆಸ್ಟ್‌ನಲ್ಲಿ ಆಟಗಾರನೊಬ್ಬ ದಾಖಲಿಸಿದ ಅತಿ ಹೆಚ್ಚು ರನ್ ಇದಾಗಿದ್ದು, ಈ ದಾಖಲೆ ಮುರಿಯಲು ಇಂದಿಗೂ ಯಾವೊಬ್ಬ ಬ್ಯಾಟರ್ನಿಂದ ಸಾಧ್ಯವಾಗಿಲ್ಲ.
ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕಾಗಿ ಆಡುವ ಮೊದಲು, ಗೂಚ್ ಎಸೆಕ್ಸ್ ತಂಡದಲ್ಲಿ ಆಡಿದ್ದರು. ಬಳಿಕ 1975ರಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡವನ್ನು ಸೇರಿಕೊಂಡರು ಮತ್ತು ಬರ್ಮಿಂಗ್ಹ್ಯಾಮ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡಿದರು. ಗೂಚ್ ಮೊದಲ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಎರಡೂ ಇನ್ನಿಂಗ್ಸ್‌ಗಳಲ್ಲಿ ಶೂನ್ಯಕ್ಕೆ ಔಟಾಗಿ ಕಳಪೆ ದಾಖಲೆ ಬರೆದಿದ್ದರು. ಮೊದಲ ಪಂದ್ಯದಲ್ಲೇ ಕೆಟ್ಟ ದಾಖಲೆ ಬರೆದ ಈ ಕ್ರಿಕೆಟಿಗ ನಂತರ ಯಾರು ಊಹಿಸಿದಂತ ಪ್ರದರ್ಶನ ತೋರಿ ವಿಶ್ವದಾಖಲೆಗಳನ್ನು ನಿರ್ಮಿಸಿದ್ದರು.
ಲಾರ್ಡ್ಸ್ ಮೈದಾನದಲ್ಲಿ ತ್ರಿಶತಕ ಸಿಡಿಸಿ ವಿಶ್ವದ ಮೊದಲ ಕ್ರಿಕೆಟಿಗರಾಗಿ ದಾಖಲೆ ಬರೆದರು. 1990ರಲ್ಲಿ ಲಾರ್ಡ್ಸ್ ನಲ್ಲಿ ನಡೆದ ಭಾರತದ ವಿರುದ್ಧದ ಟೆಸ್ಟ್‌ನಲ್ಲಿ 333 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಗೂಚ್ ಅದೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲೂ ಶತಕದೊಂದಿಗೆ 123 ರನ್ ಗಳಿಸಿ ಔಟಾಗಿದ್ದರು. ಭಾರತ ವಿರುದ್ಧದ 3 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಗೂಚ್ ಒಟ್ಟು 752 ರನ್ ಗಳಿಸಿದ್ದರು. ಇದು 3 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಬ್ಯಾಟ್ಸ್‌ಮನ್ ಮಾಡಿದ ಗರಿಷ್ಠ ಸ್ಕೋರ್ ಆಗಿತ್ತು.
ಇದನ್ನೂ ಓದಿ:ಸಂಡೇ ಡಬಲ್ ಧಮಾಕ!: ಎಂಟು ಗಂಟೆಗಳಲ್ಲಿ ಎರಡು ಟಿ20 ಪಂದ್ಯಗಳನ್ನು ಆಡಲಿರುವ ಟೀಮ್ ಇಂಡಿಯಾ; ಎಲ್ಲಿ, ಯಾರ ಜೊತೆ? - T20 Cricket