ನವದೆಹಲಿ: 2025ರ ಐಪಿಎಲ್ಗೂ ಮುನ್ನ ಆಟಗಾರರ ಮೆಗಾ ಹರಾಜು ನಡೆಯಲಿದ್ದು, ರೋಹಿತ್ ಶರ್ಮಾ ಸೇರಿದಂತೆ ಕೆಲ ದಿಗ್ಗಜ ಆಟಗಾರರು ಈ ಬಾರಿಯ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಅದರಲ್ಲೂ ರೋಹಿತ್ ಶರ್ಮಾ ಹರಾಜಿಗೆ ಬಂದರೆ ಅವರನ್ನು ಖರೀದಿಸಲು 50 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ವ್ಯಯಿಸಲಿವೆ. ರೋಹಿತ್ ಅವರನ್ನು ಖರೀದಿಸಲು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್‌ಜೈಂಟ್ಸ್ ತಂಡಗಳು ಹಣವನ್ನು ಉಳಿಸಿಕೊಳ್ಳಲಿವೆ ಎಂದು ವರದಿಯಾಗಿದೆ. ಈ ಬಗ್ಗೆ ಸ್ವತಃ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೊಯೆಂಕಾ ಪ್ರತಿಕ್ರಿಯೆ ನೀಡಿದ್ದು ಅವರು ಎಲ್ಲ ವರದಿಗಳನ್ನು ತಿರಸ್ಕರಿಸಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಕೇವಲ ಒಬ್ಬ ಆಟಗಾರನಿಗಾಗಿ 50 ಕೋಟಿ ಖರ್ಚು ಮಾಡಿದರೇ ಉಳಿದ 22 ಆಟಗಾರರನ್ನು ಖರೀದಿಸುವುದು ಹೇಗೆ. ಅದರಲ್ಲೂ ರೋಹಿತ್ ಶರ್ಮಾ ಹರಾಜಿನಲ್ಲಿ ಪಾಲ್ಗೊಳ್ಳುತ್ತಾರೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮುಂಬೈ ಇಂಡಿಯನ್ಸ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುತ್ತದೋ ಇಲ್ಲವೋ ಎಂಬುದು ಇನ್ನೂ ಯಾರಿಗೂ ತಿಳಿದಿಲ್ಲ. ಒಂದು ವೇಳೆ ಹರಾಜಿಗೆ ಬಂದರೂ, ಒಬ್ಬ ಆಟಗಾರನಿಗಾಗಿ ತಂಡದ ಬಜೆಟ್ನ ಶೇ50 ರಷ್ಟು ಹಣ ಖರ್ಚು ಮಾಡುವುದು ಕಷ್ಟ. ತಲಾ ಫ್ರಾಂಚೈಸಿಗಳಿಗೆ 100 ಕೋಟಿ ಮಿತಿಯಿರಲಿದ್ದು ಇಂತಹ ಪರಿಸ್ಥಿತಿಯಲ್ಲಿ ಉಳಿದ 22 ಆಟಗಾರರನ್ನು ಖರೀದಿಸುವುದು ಕಷ್ಟಕರವಾಗಿರಲಿದೆ ಎಂದು ಗೋಯೆಂಕಾ ಸ್ಪಷ್ಟನೇ ನೀಡಿದರು.