ತರೂಬಾ (ಟ್ರಿನಿಡಾಡ್ ಮತ್ತು ಟೊಬಾಗೊ): ಇಲ್ಲಿನ ತರುಬಾದ ಬ್ರಿಯಾನ್ ಲಾರಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 13 ರನ್‌ಗಳಿಂದ ಮಣಿಸಿದ ವೆಸ್ಟ್ ಇಂಡೀಸ್ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8 ಹಂತಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದೆ. ಇನ್ನೊಂದೆಡೆ, ಸೋಲುನುಭವಿಸಿದ ಕಿವೀಸ್ ತಂಡಕ್ಕೆ ಟೂರ್ನಿಯಿಂದ ಹೊರಬೀಳುವ ಆತಂಕ ಎದುರಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕೆರಿಬಿಯನ್ನರಿಗೆ ಮಧ್ಯಮ ಕ್ರಮಾಂಕದ ಬ್ಯಾಟರ್ ಶೆರ್ಫೇನ್ ರುದರ್ಫೋರ್ಡ್ ಏಕಾಂಗಿ ಹೋರಾಟದ (68* ರನ್) ಮೂಲಕ ನೆರವಾದರು. ನಿರಂತರ ವಿಕೆಟ್ ಪತನದಿಂದ ವಿಂಡೀಸ್ ಕಂಗಾಲಾಗಿತ್ತು. ಆರಂಭಿಕರಾದ ಬ್ರೆಂಡನ್ ಕಿಂಗ್ 9, ಜಾನ್ಸನ್ ಚಾರ್ಲ್ಸ್ 0, ನಿಕೋಲಸ್ ಪೂರನ್ 17, ರೋಸ್ಟನ್ ಚೇಸ್ 0 ಹಾಗೂ ನಾಯಕ ರೋವ್‌ಮನ್ ಪೊವೆಲ್ 1 ರನ್ ಗಳಿಸಿ ಔಟಾದರು. ಕಿವೀಸ್ ವೇಗಿಗಳ ದಾಳಿಗೆ ಸಿಲುಕಿದ ವೆಸ್ಟ್ ಇಂಡೀಸ್ 30 ರನ್ಗೆ 5 ವಿಕೆಟ್ ಕಳೆದುಕೊಂಡಿತ್ತು.
ಈ ಹಂತದಲ್ಲಿ ಹೋರಾಡಿದ ರುದರ್ಫೋರ್ಡ್, ಅಕೀಲ್ ಹೊಸೆನ್ (15) ಜೊತೆಗೂಡಿ ಅಮೂಲ್ಯ 28 ರನ್ ಜೊತೆಯಾಟವಾಡಿದರು. ಬಳಿಕ ಅಂಡ್ರೆ ರಸೆಲ್ 14 ಹಾಗೂ ಶೆಫರ್ಡ್ 13 ರನ್ ಗಳಿಸಿ ರುದರ್ಫೋರ್ಡ್ ಜೊತೆ ಅಗತ್ಯ ಪಾಲುದಾರಿಕೆ ನೀಡಿದರು. ಅಂತಿಮವಾಗಿ ವಿಂಡೀಸ್ 20 ಓವರ್ಗಳಲ್ಲಿ 9 ವಿಕೆಟ್ಗೆ 149 ರನ್ ಪೇರಿಸಿತ್ತು.
150 ರನ್ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಕೂಡ ನಿರಂತರ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಡೆವೋನ್ ಕಾನ್ವೆ 5 ರನ್ ಗಳಿಸಿ ಮೊದಲಿಗರಾಗಿ ಪೆವಿಲಿಯನ್ಗೆ ಮರಳಿದರು. ಬಳಿಕ ಫಿನ್ ಅಲೆನ್ (26), ಅಲ್ಜಾರಿ ಜೋಸೆಫ್ ಬೌಲಿಂಗ್ನಲ್ಲಿ ರಸೆಲ್ಗೆ ಕ್ಯಾಚ್ ನೀಡಿದರು. ತದನಂತರ, ನಾಯಕ ವಿಲಿಯಮ್ಸನ್ ಕೇವಲ 1 ರನ್ಗೆ ಬಲಿಯಾದರು. ಇದರ ಬೆನ್ನಲ್ಲೇ 10 ರನ್ ಗಳಿಸಿದ್ದ ರಚಿನ್ ರವೀಂದ್ರ ಕೂಡ 10 ರನ್ಗೆ ಔಟಾದರು.
ಬಳಿಕ ಡೆರ್ಲ್ ಮಿಚೆಲ್ 12 ರನ್ಗೆ ಮೊಟಿ ಬೌಲಿಂಗ್ನಲ್ಲಿ ಬೌಲ್ಡ್ ಆಗಿದ್ದರಿಂದ ಕಿವೀಸ್ 63 ರನ್ಗೆ 5 ವಿಕೆಟ್ ಕಳೆದುಕೊಂಡಿತು. ಈ ಸಂದರ್ಭದಲ್ಲಿ ಹೋರಾಟ ತೋರಿದ ಜೇಮ್ಸ್ ನೀಶಮ್ (10) ಹಾಗೂ ಗ್ಲೆನ್ ಫಿಲಿಪ್ಸ್ (40) 22 ರನ್ ಜೊತೆಯಾಟವಾಡಿದರು. ಇವರಿಬ್ಬರ ವಿಕೆಟ್ ಪತನವಾಗುತ್ತಿದ್ದಂತೆ ಕಿವೀಸ್ ಸೋಲಿನತ್ತ ಮುಖ ಮಾಡಿತು. ಮಿಚೆಲ್ ಸ್ಯಾಂಟ್ನರ್ ಅಜೇಯ 21 ರನ್ ಗಳಿಸಿದರೂ ಕೂಡ ತಂಡವನ್ನು ಗೆಲ್ಲಿಸಲಾಗಲಿಲ್ಲ. 20 ಓವರ್ಗಳಲ್ಲಿ 136 ರನ್ ಮಾತ್ರ ಗಳಿಸಿದ ನ್ಯೂಜಿಲೆಂಡ್ 13 ರನ್‌ಗಳಿಂದ ಸೋಲುಂಡಿದೆ. ಶೆರ್ಫೇನ್ ರುದರ್ಫೋರ್ಡ್ ಪಂದ್ಯಪುರುಷ ಪ್ರಶಸ್ತಿಗೆ ಭಾಜನರಾದರು.
ಇದರಿಂದಾಗಿ, ಸಿ ಗ್ರೂಪ್ನಲ್ಲಿ ಆಡಿದ 2 ಪಂದ್ಯಗಳನ್ನೂ ಸೋತಿರುವ ಕೇನ್ ವಿಲಿಯಮ್ಸನ್ ಪಡೆ ಟೂರ್ನಿಯಿಂದ ನಿರ್ಗಮಿಸುವ ಭೀತಿಯಲ್ಲಿದೆ. 3 ಪಂದ್ಯಗಳಲ್ಲೂ ಗೆದ್ದ ವಿಂಡೀಸ್ ಸೂಪರ್-8ಗೆ ಪ್ರವೇಶಿಸಿದೆ. ಇನ್ನೊಂದೆಡೆ, ತಾನಾಡಿದ 2 ಪಂದ್ಯಗಳನ್ನೂ ಗೆದ್ದಿರುವ ಅಫ್ಘಾನಿಸ್ತಾನ ಮುಂದಿನ ಹಂತಕ್ಕೇರುವ ಸನಿಹದಲ್ಲಿದೆ. ಉಳಿದ ತಂಡಗಳ ಫಲಿತಾಂಶಗಳ ಮೇಲೆ ಕಿವೀಸ್ನ ಮುಂದಿನ ಅಭಿಯಾನವು ನಿರ್ಧಾರವಾಗಲಿದೆ.
ಇದನ್ನೂ ಓದಿ:ಹೀಗೆ ಮಾಡಿದ್ದಕ್ಕೆ ಯುಎಸ್ ತಂಡಕ್ಕೆ 5 ರನ್ ದಂಡ; ಏನಿದು ಸ್ಟಾಪ್-ಕ್ಲಾಕ್ ನಿಯಮ? - Penalty For USA