ಪ್ಯಾರಿಸ್ (ಫ್ರಾನ್ಸ್): ಪ್ಯಾರಿಸ್ ಒಲಿಂಪಿಕ್ ಮಹಿಳೆಯರ 50 ಕೆಜಿ ಕುಸ್ತಿ ಫೈನಲ್ ಪಂದ್ಯದಿಂದ ಅನರ್ಹಗೊಳಿಸಿರುವ ಒಲಿಂಪಿಕ್ ಸಮಿತಿ ನಿರ್ಧಾರ ಪ್ರಶ್ನಿಸಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ (ಸಿಎಎಸ್) ವಿನೇಶ್ ಫೋಗಟ್ ಸಲ್ಲಿಸಿದ್ದ ಅರ್ಜಿಯ ತೀರ್ಪಿಗಾಗಿ ನಿರೀಕ್ಷೆ ಮುಂದುವರೆದಿದೆ. ಈಗಾಗಲೇ ವಿಚಾರಣೆ ಪೂರ್ಣಗೊಂಡಿದ್ದು, ತೀರ್ಪು ನೀಡುವುದು ಬಾಕಿ ಇದೆ.
ಮಹಿಳಾ ಫ್ರೀಸ್ಟೈಲ್ ಕುಸ್ತಿಯಲ್ಲಿ ಫೈನಲ್ ತಲುಪಿದ್ದ ವಿನೇಶ್ ಫೋಗಟ್ ಅವರನ್ನು 100 ಗ್ರಾಂ ತೂಕ ಹೆಚ್ಚಳ ಹಿನ್ನೆಲೆಯಲ್ಲಿ ಒಲಿಂಪಿಕ್ ಸಮಿತಿ ಮತ್ತು ಕುಸ್ತಿ ಸಮಿತಿ ಅನರ್ಹಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ವಿನೇಶ್ ಪದಕದಿಂದ ವಂಚಿತರಾಗಿದ್ದರು. ಕ್ರಮ ಪ್ರಶ್ನಿಸಿ ವಿನೇಶ್ ಫೋಗಟ್ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ (ಸಿಎಎಸ್) ಮೇಲ್ಮನವಿ ಸಲ್ಲಿಸಿದ್ದರು.
ವಿನೇಶ್ ಅವರ ಮೇಲ್ಮನವಿಯ ಬಹುನಿರೀಕ್ಷಿತ ತೀರ್ಪು ಈ ಹಿಂದಿನ ಹೇಳಿಕೆ ಪ್ರಕಾರ ಇಂದು (ಭಾನುವಾರ) ಸಂಜೆ ವೇಳೆಗೆ ಪ್ರಕಟವಾಗಬೇಕಿತ್ತು. ಆದರೆ ಕೆಲ ಗೊಂದಲಗಳ ನಡುವೆ ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಭಾರತೀಯ ಒಲಿಂಪಿಕ್ ಅಸೋಸಿಯೇಷನ್, ಆಗಸ್ಟ್ 13ರಂದು ತೀರ್ಪು ಹೊರಬೀಳಲಿದೆ ಎಂದು ತಿಳಿಸಿದೆ.
ಇದರಿಂದಾಗಿ, ವಿನೇಶ್ ಪದಕ ಪಡೆಯುತ್ತಾರೋ ಇಲ್ಲವೋ ಎಂಬ ಕುತೂಹಲ ಮುಂದುವರೆದಿದೆ. ಫೋಗಟ್ ಬೆಳ್ಳಿ ಪದಕವನ್ನು ನೀಡುವಂತೆ ಕೋರಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಮೇಲ್ಮನವಿಯ ವಿಚಾರಣೆಯು ಶುಕ್ರವಾರವೇ ಪೂರ್ಣಗೊಂಡಿದೆ. ಇದಕ್ಕೂ ಮುನ್ನ ಶನಿವಾರ ರಾತ್ರಿ 9:30ಕ್ಕೆ ತೀರ್ಪು ಹೊರ ಬೀಳಲಿದೆ ಎಂದು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಹೇಳಿಕೆ ಬಿಡುಗಡೆ ಮಾಡಿತ್ತು. ಆದರೆ, ಬಳಿಕ ತೀರ್ಪನ್ನು ಆಗಸ್ಟ್ 11ರ (ಇಂದು) ಸಂಜೆ 6 ಗಂಟೆಗೆ ಮುಂದೂಡಲಾಗಿದೆ ಎಂದು ಶನಿವಾರ ಪ್ರಕಟಿಸಲಾಗಿತ್ತು.