ಹೈದರಾಬಾದ್: ವಿಶ್ವದ ಶ್ರೇಷ್ಠ ಕ್ರಿಕೆಟಿಗರಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರಾಗಿದ್ದಾರೆ. ಸಚಿನ್ ತೆಂಡೂಲ್ಕರ್ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿರುವ ಬ್ಯಾಟರ್ ಎಂಬ ದಾಖಲೆ ಕೂಡ ಕೊಹ್ಲಿ ಹೆಸರಲ್ಲಿದೆ. ಸದ್ಯ ಅಂತರಾಷ್ಟ್ರೀಯ ಟಿ20 ಯಿಂದ ನಿವೃತ್ತಿ ಪಡೆದಿರುವ ಅವರು ಏಕದಿನ ಮತ್ತು ಟೆಸ್ಟ್ನಲ್ಲಿ ತಮ್ಮ ಆಟವನ್ನು ಮುಂದುವರೆಸಿದ್ದಾರೆ.
ಆದರೆ, ಇತ್ತೀಚಿನ ದಿನಗಳಲ್ಲಿ ಕೊಹ್ಲಿ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದಾರೆ. ಅದರಲ್ಲೂ ಟೆಸ್ಟ್ ಪಂದ್ಯಗಳಲ್ಲಿ ಕನಿಷ್ಠ ಅರ್ಧಶತಕ ಬಾರಿಸಲು ಕೊಹ್ಲಿ ಪರದಾಡುವಂತಹ ಸ್ಥಿತಿಗೆ ತಲುಪಿದ್ದಾರೆ. ಇತ್ತೀಚೆಗೆ ನಡೆದಿದ್ದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಭಾರೀ ನಿರಾಸೆ ಮೂಡಿದ್ದರು. 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕೇವಲ ಒಂದು ಶತಕ ಮಾತ್ರ ಬಾರಿಸಿದ್ದರು. ಬಳಿಕ 8 ಇನ್ನಿಂಗ್ಸ್ಗಳಲ್ಲಿ ಕನಿಷ್ಠ ಅರ್ಧಶತಕ ಸಿಡಿಸಲು ಸಾಧ್ಯವಾಗಿರಲಿಲ್ಲ.
ಇದಷ್ಟೇ ಅಲ್ಲದೇ, ಕಳೆದ 10 ಟೆಸ್ಟ್ ಪಂದ್ಯಗಳ 19 ಇನ್ನಿಂಗ್ಸ್ಗಳಲ್ಲಿ ಕೊಹ್ಲಿ ಬ್ಯಾಟ್ನಿಂದ ಒಂದು ಶತಕ ಮತ್ತು ಅರ್ಧಶತಕ ಮಾತ್ರ ಹರಿದು ಬಂದಿದೆ. ಇದನ್ನು ಹೊರತು ಪಡಿಸಿ ಉಳಿದ ಪಂದ್ಯಗಳಲ್ಲಿ ಕೊಹ್ಲಿ ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಇದರಿಂದಾಗಿ ಫ್ಯಾಬ್ ಫೋರ್ನಲ್ಲಿ 4 ವರ್ಷಗಳ ಬಳಿಕ ಅಗ್ರ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ.
ಈ ಹಿಂದೆ ಫ್ಯಾಬ್ ಫೋರ್ನಲ್ಲಿ ಟೆಸ್ಟ್ನಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ನಂಬರ್ ಒನ್ ಬ್ಯಾಟರ್ ಆಗಿದ್ದರು. ಮತ್ತೊಂದೆಡೆ ನಾಲ್ಕು ವರ್ಷಗಳ ಹಿಂದೆ ಕೊನೆಯ ಸ್ಥಾನದಲ್ಲಿದ್ದ ಜೋ ರೂಟ್ ಅಗ್ರಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಫ್ಯಾಬ್ ಫೋರ್ ವಿಶ್ವದ ನಾಲ್ಕು ಶಕ್ತಿಶಾಲಿ ಬ್ಯಾಟ್ಸ್ಮನ್ಗಳನ್ನು ಒಳಗೊಂಡಿದೆ. ಇದರಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ಭಾರತದ ವಿರಾಟ್ ಕೊಹ್ಲಿ, ನ್ಯೂಜಿಲೆಂಡ್ನ ಕೇನ್ ವಿಲಿಯಮ್ಸನ್, ಇಂಗ್ಲೆಂಡ್ನ ಜೋ ರೂಟ್ ಸೇರಿದ್ದಾರೆ.
ಫ್ಯಾಬ್ಫೋರ್ ಬ್ಯಾಟರ್ಗಳ ದಾಖಲೆ